Advertisement

ಗ್ರಾಪಂಗೆ ಸಂಪೂರ್ಣ ಸೌಲಭ್ಯ: ಶಾಸಕ ಹಾಲಪ್ಪ ಭರವಸೆ

03:33 PM Sep 01, 2019 | Naveen |

ಸಾಗರ: ಪಂಚಾಯತ್‌ರಾಜ್‌ ಕಾಯ್ದೆ ಅತ್ಯಂತ ಪ್ರಬಲವಾಗಿದ್ದು, ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಪಂ ಆಡಳಿತ ಪ್ರಯತ್ನಿಸಬೇಕು. ನಿಮ್ಮ ಆಡಳಿತದಲ್ಲಿ ಶಾಸಕನಾಗಿ ನಾನು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಬದಲಾಗಿ ಸರ್ಕಾರದ ಕಡೆಯಿಂದ ಗ್ರಾಪಂಗೆ ಸಿಗಬಹುದಾದ ಸೌಲಭ್ಯ ಕಲ್ಪಿಸಿಕೊಡುತ್ತೇನೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.

Advertisement

ತಾಲೂಕಿನ ಮಾಸೂರಿನಲ್ಲಿ ಸುಮಾರು 87 ಲಕ್ಷ ರೂ. ವೆಚ್ಚದಲ್ಲಿ ಗುಡ್ಡೇಮನೆ ಎಸ್‌.ಟಿ. ಸಮುದಾಯ ಭವನ, ಎಸ್‌.ಸಿ. ಕೇರಿಯ ಅಂಬೇಡ್ಕರ್‌ ಭವನ, ಬಡಿಗೇರ್‌ ಕೇರಿ ಸಮುದಾಯ ಭವನ, ಗ್ರಂಥಾಲಯ, ವ್ಯಾಯಾಮ ಶಾಲೆ ಜೊತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಾಣ ಮಾಡಿರುವ ಮಾಸೂರು ಗ್ರಾಪಂನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ದೊಡ್ಡ ದೊಡ್ಡ ಕಾಮಗಾರಿಗಳು ಪೂರ್ಣಗೊಳ್ಳಲು ವಿಳಂಬವಾಗುತ್ತದೆ. ಆದರೆ ಗ್ರಾಮೀಣ ಜನರ ಅನುಕೂಲಕ್ಕಾಗಿ ಸರ್ಕಾರದ ವತಿಯಿಂದ ನಿರ್ಮಾಣ ಮಾಡುವ ಸಮುದಾಯಭವನ, ಶಾಲಾ ಕಟ್ಟಡಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ತರಾತುರಿಯಲ್ಲಿ ಕೆಲಸ ಮುಗಿಸುವ ಆತುರದಲ್ಲಿ ಗುಣಮಟ್ಟದ ಬಗ್ಗೆ ನಿಷ್ಕಾಳಜಿ ವಹಿಸಬೇಡಿ. ಗುಣಮಟ್ಟದ ಕಾಮಗಾರಿ ನಡೆಸುವತ್ತ ಎಲ್ಲರೂ ಗಮನ ಹರಿಸಬೇಕು ಎಂದು ತಿಳಿಸಿದರು.

ಪಶ್ಚಿಮಘಟ್ಟ ಭಾಗದಲ್ಲಿ ನಿರ್ಮಾಣ ಮಾಡುವ ಸರ್ಕಾರಿ ಕಟ್ಟಡಗಳು ಬಹುಬೇಗ ಮಳೆಗಾಲದಲ್ಲಿ ಸೋರಲು ಪ್ರಾರಂಭಗೊಳ್ಳುತ್ತವೆ. ಇದಕ್ಕೆ ಕಾರಣ ನಮ್ಮಲ್ಲಿನ ಪರಿಸರ. ಪಶ್ಚಿಮ ಘಟ್ಟ ಹಾಗೂ ಮಲೆನಾಡು ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುವ ಇಳಿಜಾರು ಮೇಲ್ಚಾವಣಿ ಹಾಕುವ ಜೊತೆಗೆ ಹೆಂಚುಗಳನ್ನು ಅಳವಡಿಸಬೇಕು. ಆಗ ಮಳೆ ನೀರು ನಿಂತು ಕಟ್ಟಡ ಶಿಥಿಲಗೊಳ್ಳುವುದಿಲ್ಲ. ಈ ಬಗ್ಗೆ ಹಿಂದಿನಿಂದಲೂ ಸದನದಲ್ಲಿ ನಾನು ವಿಷಯ ಪ್ರಸ್ತಾಪ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಈಗ ನಮ್ಮ ಸರ್ಕಾರ ಬಂದಿದೆ. ಮುಖ್ಯಮಂತ್ರಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ನೆರೆಹಾನಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ಒಂದು ಹಂತದಲ್ಲಿ ಹಾನಿಗೊಳಗಾದವರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸದೆ ಇರುವವರು ತಕ್ಷಣ ಅರ್ಜಿ ನೀಡಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ತಕ್ಷಣ ಅರ್ಜಿ ಪಡೆದು ಸಂಕಷ್ಟದಲ್ಲಿರುವವರಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದರು.

Advertisement

ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ನೆರೆಹಾನಿ ಸಂದರ್ಭದಲ್ಲಿ ಗ್ರಾಪಂಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ತಯಾರಿಸಿ. ಇಂತಹ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕೊಡಿಸುವ ಕೆಲಸವನ್ನು ಮಾಡಬೇಕು. ರಾಜೀವ್‌ ಗಾಂಧಿ ಸೇವಾ ಕೇಂದ್ರವನ್ನು ತಾಲೂಕಿನ ಬೇರೆ ಬೇರೆ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ಗ್ರಾಪಂ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಸವಿತಾ ವೆಂಕಟೇಶ್‌ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ, ಎಪಿಎಂಸಿ ಸದಸ್ಯರಾದ ಕೆ. ಹೊಳೆಯಪ್ಪ, ಚೇತನರಾಜ ಕಣ್ಣೂರು, ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ ಈಶ್ವರ, ಸದಸ್ಯರಾದ ಆನಂದ ಮೇಸ್ತ್ರಿ, ಮಹಾಬಲೇಶ್‌, ಅಣ್ಣಪ್ಪ, ನೇತ್ರಾ, ರಾಧಾ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next