ಸಾಗರ: ನಗರಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಬಹುತೇಕ ಘಟಾನುಘಟಿಗಳಿಗೆ ಎದುರಾಳಿಗಳಿಂದ ತೀವ್ರ ಪೈಪೋಟಿ ಎದುರಾಗಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖ ಸ್ಥಳೀಯ ನಾಯಕರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಅವರ ಎದುರಾಳಿಗಳಾಗಿರುವವರು ಕೂಡ ಈ ಹಿಂದೆ ಜನಪ್ರನಿಧಿಗಳಾಗಿ, ಅಧಿಕಾರ ನಿರ್ವಹಿಸಿದ ಅನುಭವಿಗಳೇ ಆಗಿರುವುದರಿಂದ ಸಮರ ಕಣದ ಬಿಸಿ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಇದರ ನಡುವೆ ಬಂಡಾಯದ ಅಬ್ಬರವೂ ಉಂಟಾದರೆ ಮತ ಗಳಿಕೆಗೆ ಪ್ರತಿಷ್ಠಿತರು ಏದುಸಿರು ಬಿಡಬೇಕಾಗಬಹುದು. ಪ್ರಮುಖರ ನೇರ ಸ್ಪರ್ಧೆಗಳು ಅಂತಿಮವಾಗಿ ಕೆಲವು ಪ್ರಮುಖರು ನಗರಸಭೆಯ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗುವುದರಿಂದ ಸಭಾ ಕಲಾಪ, ಆಡಳಿತ ವ್ಯವಸ್ಥೆಯನ್ನೂ ಪ್ರಭಾವಿಸಲಿದೆ.
ಅವರನ್ನು ಬಿಟ್ಟು ಇವರು!: ಟಿಕೆಟ್ ಪಡೆಯಲೇ ಸಾಹಸ ಪಟ್ಟ ಕಾಂಗ್ರೆಸ್‌ನ ಅನುಭವಿ ಸುಂದರ್‌ಸಿಂಗ್ ನಿರಾಳವಾಗಿ ಸ್ಪರ್ಧೆ ಎದುರಿಸುವ ಪರಿಸ್ಥಿತಿ ಇಲ್ಲವಾಗಿದೆ. ಬಿಜೆಪಿಯಿಂದ ಈಗಾಗಲೇ ಕೌನ್ಸಿಲರ್ ಆಗಿ ಅನುಭವ ಹೊಂದಿರುವ ಆರ್. ಶ್ರೀನಿವಾಸ್ ಅವರನ್ನು 5ನೇ ವಾರ್ಡ್‌ನಲ್ಲಿ ಎದುರಿಸುವಂತಾಗಿದೆ. ಪ್ರಸ್ತುತ ಶ್ರೀನಿವಾಸ್ ಮೇಸ್ತ್ರಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರು ತಮ್ಮದೇ ಆದ ಮತಗಟ್ಟೆಯನ್ನು ಹೊಂದಿರುವುದು ಕಳೆದ ಬಾರಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ದಾಖಲಿಸಿದ ದಾಖಲೆ ಹೊಂದಿದ್ದ ಸುಂದರ್‌ಸಿಂಗ್ ಅವರ ನಿದ್ದೆಗೆಡಿಸುವಂತಿದೆ.
ಅಧಿಕಾರ ಸಿಕ್ಕರೆ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಬಿಜೆಪಿಯ ಮಾಜಿ ನಗರಸಭಾಧ್ಯಕ್ಷ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್ ಹಾದಿಗೆ ಕಾಂಗ್ರೆಸ್‌ನ ಡಿಷ್ ಗುರು ಎಂದೇ ಖ್ಯಾತರಾಗಿರುವ ವಿ. ಗುರು ವಾರ್ಡ್ ಸಂಖ್ಯೆ 8ರಲ್ಲಿ ಎದುರಾಳಿಗಳಾಗಿದ್ದಾರೆ. ನಗರದ ಗಣಪತಿ ಅರ್ಬನ್ ಕೋ- ಅಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾಗಿರುವ ಗುರು ಅವರ ಸವಾಲನ್ನು ಮೇಘರಾಜ್ ಸುಲಭವಾಗಿ ತಳ್ಳಿಹಾಕುವಂತಿಲ್ಲ. ಮೇಘರಾಜ್ ಒಂದೊಮ್ಮೆ ಸೋತರೆ ಅವರಿಗೆ ಹಾಲಪ್ಪ ಅವರ ಆಪ್ತ ವಲಯದಲ್ಲಿ ಮುಖಭಂಗವಾಗುವ ಸನ್ನಿವೇಶವಿದೆ.
ಕಳೆದ ಬಾರಿ ಮೊದಲ ಅವಯ ಉಪಾಧ್ಯಕ್ಷರಾಗಿ ಗಮನ ಸೆಳೆದಿದ್ದ ಐ.ಎನ್. ಸುರೇಶ್‌ಬಾಬು ಬಿಜೆಪಿಯ ಪ್ರಬಲ ಅಭ್ಯರ್ಥಿ ಗಣೇಶ್ ಪ್ರಸಾದ್‌ರಿಂದ 10ನೇ ವಾರ್ಡ್‌ನಲ್ಲಿ ತೀವ್ರ ಸೆಣಸಾಟವನ್ನು ನಿರೀಕ್ಷಿಸಬಹುದು. ಮೂರನೇ ಬಾರಿ ಆಯ್ಕೆ ಬಯಸಿ ಕಣದಲ್ಲಿರುವ ಬಿಜೆಪಿಯ ಎಸ್.ಎಲ್. ಮಂಜುನಾಥ್ ಅವರಿಗೆ 12ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಕೆ.ಎನ್. ಮೋಹನ್ ಅವರನ್ನು ಎದುರಿಸಬೇಕಾಗಿದೆ.
ಈ ಲೆಕ್ಕದಲ್ಲಿ ಈ ಹಿಂದೆ ವಿಜೇತರಾಗಿದ್ದ ಮಹಿಳಾ ಕೌನ್ಸಿಲರ್‌ಗಳು ಅನನುಭವಿಗಳಿಂದ ಹೆಚ್ಚಾಗಿ ಸ್ಪರ್ಧೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್‌ನ ಪರಿಮಳ, ಎನ್. ಉಷಾ, ಲಲಿತಮ್ಮ, ಕಳೆದ ಬಾರಿ ವಿರೋಧ ಪಕ್ಷದ ನಾಯಕಿಯಾಗಿದ್ದ ಬಿಜೆಪಿಯ ನಾಗರತ್ನ ಅವರಿಗೆ ಎದುರಾಳಿಗಳು ಹೊಸ ಮುಖಗಳಾಗಿರುವುದು ಅಷ್ಟರ ಮಟ್ಟಿಗೆ ಒಳಿತನ್ನು ಮಾಡಬಹುದು ಎಂದು ಭಾವಿಸುವಂತಾಗಿದೆ.