ಸಾಗರ: ನಗರದ ಮಾರಿಕಾಂಬಾ ಜಾತ್ರೆಗೆ ಅಂಕೆ ಹಾಕುವ ಶಾಸ್ತ್ರ ನಡೆಸುವ ಸಿದ್ಧತೆ ಮಂಗಳವಾರ ನಡೆದಿದ್ದು, ತಡರಾತ್ರಿಯಲ್ಲಿ ಸಂಪನ್ನಗೊಳ್ಳುವ ಮೂಲಕ ಜಾತ್ರೆಯ ಧಾರ್ಮಿಕ ಪ್ರಕ್ರಿಯೆ ಆರಂಭಗೊಂಡಿದೆ. 18ರಿಂದ ಒಂದು ವಾರಗಳ ಕಾಲ ಇಡೀ ನಗರವು ವಿವಿಧ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಳಿಂದ ಕಳೆಕಟ್ಟುವುದು ಖಚಿತವಿದೆ. ಈ ಹಿನ್ನೆಲೆಯಲ್ಲಿ ಕಡೆಯ ವಾರದ ಸಿದ್ಧತೆಗಳು ಭರದಿಂದ ಸಾಗಿವೆ. ಜಾತ್ರೆ ಆರಂಭ ದಿನದಿಂದ ಫೆ. 26ರವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ರಾಜ್ಯದ ಪ್ರಸಿದ್ಧ ಕಲಾವಿದರು ಸಂಗೀತ, ನೃತ್ಯ, ಗಾಯನ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ನಗರದ ತಿಲಕ್ ರಸ್ತೆಯ ಶ್ರೀ ಮಾರಿಕಾಂಬಾ ಕಲಾವೇದಿಕೆಯಲ್ಲಿ ಪ್ರತಿ ನಿತ್ಯ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಾಂಸ್ಕೃತಿಕ ಸಮಿತಿ ಸಂಚಾಲಕ ಲೋಕೇಶ್ ಕುಮಾರ್ ಗುಡಿಗಾರ್ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಖಜಾಂಚಿ ನಾಗೇಂದ್ರ ಎಸ್. ಕುಮಟಾ ತಿಳಿಸಿದ್ದಾರೆ. ಫೆ. 18ರಿಂದ 26ರವರೆಗೆ ಪ್ರತಿ ನಿತ್ಯ ಸಾಗರದ ಗಂಡನ ಮನೆ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ 40ಕ್ಕೂ ಹೆಚ್ಚು ಭಜನಾ ತಂಡಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.
ಸಾಂಸ್ಕೃತಿಕ ಸಿರಿ ಕಾರ್ಯಕ್ರಮ: 18ರ ಸಂಜೆ 5ಕ್ಕೆ ವಸ್ತು ಪ್ರದರ್ಶನವನ್ನು ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸುವರು. ಎಂಎಲ್‌ಸಿ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ,
ಆರ್. ಪ್ರಸನ್ನಕುಮಾರ್, ಭೋಜೆಗೌಡ, ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್ ಉಪಸ್ಥಿತರಿರುವರು. ಜಾತ್ರೆಯ ಪ್ರಯುಕ್ತ 19ರಿಂದ 26ರವರೆಗೆ ಪ್ರತಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 19ರ ಸಂಜೆ 5.30ಕ್ಕೆ ಬೆಂಗಳೂರಿನ ಭೂಮಿಕಾ ಅವರಿಂದ ಭರತನಾಟ್ಯ, 6ಕ್ಕೆ ವಿಶಾಲ್ ಹರಿಕಿರಣ್ ಅವರಿಂದ ಕೂಚುಪುಡಿ, 6-30ಕ್ಕೆ ಸಾಯಿ ಗ್ರೂಪ್ ಡ್ಯಾನ್ಸ್ ಅವರಿಂದ ನೃತ್ಯ, ರಾತ್ರಿ 8ಕ್ಕೆ ಎಚ್.ಎಲ್. ರಾಘವೇಂದ್ರ ವೃಂದದಿಂದ ರಸಮಂಜರಿ, 9-30ಕ್ಕೆ ಉಡುಪಿ ಗಾಯಕ ಡಾ| ಅಭಿಷೇಕ್ ಕರೋಡ್ಕಲ್ ಅವರಿಂದ ರಸಮಂಜರಿ ನಡೆಯಲಿದೆ.
19ರ ಸಂಜೆ 7ಕ್ಕೆ ಆಯೋಜಿಸಿರುವ ಜಾತ್ರೆಯ “ಸಾಂಸ್ಕೃತಿಕ ಸಿರಿ’ ಉತ್ಸವಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಗೌರವ ಉಪಸ್ಥಿತಿಯಲ್ಲಿ ಶಾಸಕ ಎಚ್.ಹಾಲಪ್ಪ ಚಾಲನೆ ನೀಡುವರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಹಿರಿಯ ಚಲನಚಿತ್ರ ಕಲಾವಿದ ಶಿವರಾಂ, ಹಿರಿಯ ಸಾಹಿತಿ ಡಾ| ನಾ. ಡಿಸೋಜಾ, ಸಾಗರ ಉಪರಕ್ಷಣಾ ಧಿಕಾರಿ ಜೆ.ರಘು ಉಪಸ್ಥಿತರಿರುವರು. ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್ .ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಲೋಕೇಶ್ ಕುಮಾರ್ ಗುಡಿಗಾರ್, ಸಹ ಸಂಚಾಲಕ ರಾಮಚಂದ್ರ ಹಾಜರಿರುವರು.