Advertisement

ನಾಟಕ ತಂಡಗಳ ಪುನಶ್ಚೇತನ ಅಗತ್ಯ

01:11 PM Feb 21, 2020 | Naveen |

ಸಾಗರ: ವೃತ್ತಿ ರಂಗಭೂಮಿ ಕಲಾವಿದರಿಗೆ ಆಶ್ರಯ ನೀಡಿದ ತಾಣ ಸಾಗರ. ರಂಗಭೂಮಿ ಕುರಿತು ಸಾಗರದ ಜನರಲ್ಲಿ ವಿಶೇಷವಾದ ಆಸಕ್ತಿಯಿದೆ. ಅನೇಕ ವೃತ್ತಿರಂಗಭೂಮಿ ತಂಡಗಳು ಇಲ್ಲಿ ಪ್ರದರ್ಶನ ನೀಡುವ ಮೂಲಕ ಪುನಶ್ಚೇತನ ಕಂಡಿವೆ ಎಂದು ಚಿತ್ರನಟ ಶಿವರಾಂ ಅಭಿಪ್ರಾಯಪಟ್ಟರು.

Advertisement

ನಗರದ ಅಶೋಕ ರಸ್ತೆಯಲ್ಲಿ ಮಾರಿಕಾಂಬಾ ಜಾತ್ರಾ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಲಾಸಿರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಐತಿಹಾಸಿಕ, ಪ್ರಾಕೃತಿಕ, ಸಾಹಿತ್ಯ ಸಾಂಸ್ಕೃತಿಕವಾಗಿ ವೈಶಿಷ್ಟ್ಯತೆ ಹೊಂದಿರುವ ಸಾಗರವು ಎಲ್ಲ ಕ್ಷೇತ್ರಗಳಿಗೂ ಸಾಧಕರನ್ನು ಕೊಡುಗೆ ನೀಡಿದೆ. ಯಾವುದೇ ಕ್ಷೇತ್ರ ಗಮನಿಸಿದರೂ ಅಲ್ಲಿ ಸಾಗರದ ಪ್ರತಿಭಾವಂತ ಜನರು ಇರುತ್ತಾರೆ. ರಂಗಭೂಮಿ, ಸಿನಿಮಾ ಕ್ಷೇತ್ರಕ್ಕೂ ಸಾಗರದ ಕೊಡುಗೆ ಅಪಾರವಾಗಿದೆ. ಅನೇಕ ಕಲಾವಿದರಿಗೆ ಈ ನೆಲ ಆಶ್ರಯ ನೀಡಿದೆ. ಅದರಲ್ಲಿ ನಾನೂ ಸಹ ಒಬ್ಬನಾಗಿದ್ದೇನೆ ಎಂದು ತಿಳಿಸಿದರು.

ಸಾಗರದ ಜತೆಗಿನ ಒಡನಾಟ ದಶಕಗಳ ಹಳೆಯದ್ದು, ಕಾಲೇಜಿನ ದಿನಗಳಲ್ಲಿ ಕಾಗೋಡು ತಿಮ್ಮಪ್ಪ ಅವರ ಜತೆ ಕೆಲ ಕ್ಷಣಗಳನ್ನು ಕಳೆದಿದ್ದೇನೆ. ಸಾಹಿತಿ ಡಾ| ನಾ.ಡಿಸೋಜಾ ಅವರು ರಚಿಸಿರುವ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಕಾಲೇಜಿನ ದಿನಗಳಲ್ಲಿ ಸಾಮಾಜಿಕ ಸೇವೆಯ ಕ್ಯಾಂಪ್‌ನಲ್ಲಿ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು
ಹಾಕಿದರು.

58ರ ಇಸವಿಯಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ಈವರೆಗೂ ನಟ, ನಿರ್ದೇಶನ, ನಿರ್ಮಾಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕನ್ನಡ ನಾಡಿನ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಪ್ರೇಕ್ಷಕರು ಪ್ರೋತ್ಸಾಹಿಸಿ ಬೆಳೆಸಿದ ಪರಿಣಾಮ ದಶಕಗಳ ಕಾಲ ಅಭಿನಯಿಸಲು ಸಾಧ್ಯವಾಗಿದೆ. ಕಲಾಭಿಮಾನಿಗಳ ಪ್ರೋತ್ಸಾಹ ಎಲ್ಲ ಕಲಾವಿದರ ಮೇಲೂ ನಿರಂತರವಾಗಿರಬೇಕು. ಪ್ರಸ್ತುತ ಕನ್ನಡ ಚಲನಚಿತ್ರ ಕ್ಷೇತ್ರ ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುತ್ತಿದೆ. ಅನೇಕ ಸಂದರ್ಭದಲ್ಲಿ ಸಿನಿಮಾಗಳಲ್ಲಿ ಪ್ರಸಿದ್ದರಾದವರನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಸಿನಿಮಾರಂಗ ಪ್ರಸಿದ್ಧಿಗೊಳಿಸಲು ಪ್ರಯತ್ನಿಸಿದವರನ್ನು ಮರೆತುಬಿಡುವ ಸಂಪ್ರದಾಯ ಇದೆ. ಇಂತಹ ಕೆಲಸವಾಗಬಾರದು ಎಂದು ತಿಳಿಸಿದರು.

ಹಿರಿಯ ಸಾಹಿತಿ ಡಾ| ನಾ.ಡಿಸೋಜಾ ಮಾತನಾಡಿ, ಸಾಗರದ ಅ ಧಿದೇವತೆಯಾಗಿ ಮಾರಿಕಾಂಬೆಯ ಉತ್ಸವ ತನ್ನ ವೈಶಿಷ್ಟ್ಯತೆಗಳಿಂದಲೇ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ. ಎಲ್ಲಾ ಜಾತಿ ಸಮುದಾಯದವರು ಒಟ್ಟುಗೂಡಿ ಆಚರಿಸುವ ಮಾರಿಕಾಂಬೆಯ ಇತಿಹಾಸಿಕ ಹಿನ್ನೆಲೆಯು ವಿಶೇಷವಾಗಿದೆ ಎಂದು ಹೇಳಿದರು.

Advertisement

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾರಿಕಾಂಬೆ ಜಾತ್ರೆಯ ಹಿನ್ನೆಲೆಯಲ್ಲಿ ಜನತೆಗೆ ಶುಭ ಕೋರಿದರು. ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್‌. ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ದೀಪಕ್‌ ಸಾಗರ್‌ ಕಾರ್ಯಕ್ರಮ ನಿರೂಪಿಸಿದರು. ನಗರದ ಸಹಾಯಕ ಆಯುಕ್ತ ಡಾ| ಎಲ್‌.ನಾಗರಾಜ್‌, ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್‌, ಭಾವನಾ ಸಂತೋಷ್‌, ಲಲಿತಮ್ಮ, ತುಕಾರಾಂ, ಗಣೇಶ್‌ ಪ್ರಸಾದ್‌, ಜಾತ್ರಾ ಸಮಿತಿ ಉಪಾಧ್ಯಕ್ಷ ಯು.ಎಲ್‌. ಮಂಜಪ್ಪ, ಕಾರ್ಯದರ್ಶಿ ಬಿ.ಗಿರಿಧರರಾವ್‌, ಖಜಾಂಚಿ ನಾಗೇಂದ್ರ ಎಸ್‌.ಕುಮಟಾ, ಎಸ್‌.ವಿ. ಕೃಷ್ಣಮೂರ್ತಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಲೋಕೇಶ್‌ಕುಮಾರ್‌ ಗುಡಿಗಾರ್‌, ರಾಮಚಂದ್ರ ಮತ್ತಿತರರು ಇದ್ದರು.

ಮಾರಿಕಾಂಬ ಕಲಾವೇದಿಕೆಯಲ್ಲಿ ಬೆಂಗಳೂರಿನ ಭೂಮಿಕಾ ಅವರಿಂದ ಭರತನಾಟ್ಯ, ವಿಶಾಲ ಹರಿಕಿರಣ್‌ ಅವರಿಂದ ಕೂಚುಪುಡಿ, ಸಾಯಿ ಗ್ರೂಪ್‌ ಡ್ಯಾನ್ಸ್‌ ಸಾಗರ ತಂಡದಿಂದ ನೃತ್ಯ, ಎಚ್‌.ಎಲ್‌. ರಾಘವೇಂದ್ರ ವೃಂದದಿಂದ ರಸಮಂಜರಿ, ಉಡುಪಿಯ ಡಾ| ಅಭಿಷೇಕ್‌ ಕರೋಡ್ಕಲ್‌ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next