ಸಾಗರ: ರಾಜ್ಯದ ಕಾಂಗ್ರೆಸ್ ಸರ್ಕಾರ ಆಗಸ್ಟ್‌ನಿಂದ ಮನೆವಿದ್ಯುತ್ ಬಳಕೆದಾರರಿಗೆ 200 ಯೂನಿಟ್‌ವರೆಗಿನ ಬಳಕೆಗೆ ಉಚಿತ ವಿದ್ಯುತ್ ಘೋಷಿಸಿದ್ದರೆ ತಾಲೂಕಿನ ಖಂಡಿಕಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸಿರಿವಂತೆ ಸಮೀಪದ ಕೋಗೋಡಿನ ಶ್ರೀಧರ ಭಟ್ ಮಾತ್ರ ತೀವ್ರ ಶಾಕ್‌ಗೆ ಒಳಗಾಗಿದ್ದಾರೆ. ಅವರಿಗೆ ಬರೋಬ್ಬರಿ 80,784 ರೂ. ವಿದ್ಯುತ್ ಬಿಲ್ ಬಂದಿದೆ! ಸರ್ಕಾರದ ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಯಶಸ್ವಿಯಾಗಿ ನೋಂದಣಿಯನ್ನೂ ಅವರು ಮಾಡಿಸಿದ್ದಾರೆ.
ಸಾಮಾನ್ಯವಾಗಿ ಆ ಭಾಗದಲ್ಲಿ ಮನೆಗಳಿಗೆ ಪ್ರತಿ ತಿಂಗಳ ಮೂರರಂದು ಮೀಟರ್ ರೀಡಿಂಗ್ ಮಾಡಿ ಇಲ್ಲಿನ ಮೆಸ್ಕಾಂ ತಾಳಗುಪ್ಪ ವಿಭಾಗ ಬಿಲ್ ಕೊಡುತ್ತಿತ್ತು. ನಾಲ್ಕು ದಿನ ಕಳೆದರೂ ಬಿಲ್ ಬಾರದಿರುವ ಹಿನ್ನೆಲೆಯಲ್ಲಿ ಶ್ರೀಧರ ಭಟ್‌ರ ಮಗ ಪವನ್ ಕಾಗೋಡು ಆನ್‌ಲೈನ್ ಮೆಸ್ಕಾಂ ಆಪ್‌ನಲ್ಲಿ ಬಿಲ್ ತೆಗೆದಿದ್ದಾರೆ. ಆಗ ಈ ಶಾಕಿಂಗ್ ಸುದ್ದಿ ಬೆಳಕಿಗೆ ಬಂದಿದೆ.
ಅಲ್ಲಿ 9982 ಯೂನಿಟ್ ಬಳಕೆಯನ್ನು ಕಾಣಿಸಲಾಗಿದೆ. ಒಟ್ಟು83,759 ರೂ.ಗಳ ಬಿಲ್ ಮೊತ್ತದಲ್ಲಿ 2,994 ರೂ.ಗಳ ರಿಯಾಯ್ತಿಯನ್ನೂ ಕಳೆದು 80,784 ರೂ.ಗಳ ಬಿಲ್ ತೋರಿಸಲಾಗುತ್ತಿದೆ. ಶ್ರೀಧರ ಭಟ್ ಮನೆಯಲ್ಲಿ ಸೋಲಾರ್ ವ್ಯವಸ್ಥೆಯಿದ್ದು ಬಹುಪಾಲು ವಿದ್ಯುತ್ ಖರ್ಚನ್ನು ಅದೇ ನಿರ್ವಹಿಸುತ್ತದೆ. ಹಾಗಾಗಿ ಅವರಿಗೆ ತಿಂಗಳಿಗೆ ಬರುವುದೇ 30 ರಿಂದ 40 ಯೂನಿಟ್ ಬಿಲ್ ಮಾತ್ರ. ಆದರೆ ಈ ಬಾರಿ ಅವರ ಹೃದಯವನ್ನು ಅಲ್ಲಾಡಿಸುವಂತಹ ಬಿಲ್ ಬಂದಿದೆ. ಅದರಲ್ಲಿನ 2,994 ರೂ.ಗಳ ರಿಯಾಯ್ತಿ ಸಿದ್ದರಾಮಯ್ಯ ಅವರ ಉಚಿತ ಕೊಡುಗೆಯೋ ಎಂಬುದು ಗೊತ್ತಾಗದಷ್ಟು ಗೊಂದಲದಲ್ಲಿ ಗ್ರಾಹಕರಿದ್ದಾರೆ.
ಆಗಿರುವುದೇನು ಎಂಬುದರ ಕುರಿತು ಸಾಗರದ ಬಳಕೆದಾರರ ವೇದಿಕೆಯ ನಿರ್ದೇಶಕರಾದ ರಾಮಸ್ವಾಮಿ ಕಳಸವಳ್ಳಿ ವಿಶ್ಲೇಷಿಸಿ, ಮೀಟರ್‌ನ ಹಿಂದಿನ ತಿಂಗಳ ರೀಡಿಂಗ್ 6652 ಎಂದಿದೆ. ಮೀಟರ್ ಓದುವಾತ ಸರಿಯಾಗಿ ಮೀಟರ್ ಗಮನಿಸದೆ ತಪ್ಪಾಗಿ ಹಿಂದಿನ ರೀಡಿಂಗ್‌ಗಿಂತ ಹಿಂದಿನ ಸಂಖ್ಯೆಯಾದ 6634 ಎಂದು ನಮೂದಿಸಿದ್ದಾನೆ. ಇದರಿಂದ ಮೀಟರ್ 9999ನ್ನು ದಾಟಿ ಮತ್ತೆ ಶೂನ್ಯದಿಂದ 6634 ರವರೆಗೆ ಓಡಿದಂತಾಗಿದೆ. ಹಾಗಾಗಿ 9982 ಯೂನಿಟ್ ಬಳಕೆ ತೋರಿಸುವಂತಾಗಿದೆ ಎಂದರು.
ಇತ್ತೀಚೆಗಷ್ಟೇ ಇದೇ ತಾಳಗುಪ್ಪ ವಿಭಾಗದ ಹೊಸಳ್ಳಿ ಸಮೀಪದ ಹಿಂಡೂಮನೆಯ ಗ್ರಾಹಕರೊಬ್ಬರಿಗೆ 48 ಸಾವಿರ ರೂ.ಗಳ ಬಿಲ್ ಕೊಟ್ಟದ್ದು ಸುದ್ದಿಯಾಗಿತ್ತು. ಆ ಮೂಲಕ ಈ ಹಿಂದಿನ ಬಿಲ್ ಮೊತ್ತವನ್ನು ಮೀರಿ ಹೊಸ ದಾಖಲೆ ಮಾಡಿದ ಖ್ಯಾತಿಗೂ ಸಾಗರದ ಮೆಸ್ಕಾಂ ತನ್ನದಾಗಿಸಿಕೊಂಡಂತಾಗಿದೆ. ಮೆಸ್ಕಾಂನ ಮೀಟರ್ ರೀಡರ್ ಬಿಲ್ ಜನರೇಟ್ ಮಾಡಿದ ನಂತರ ಅದನ್ನು ಪರಿಶೀಲಿಸುವುದಕ್ಕೂ ಹೋಗದೆ ನಿರ್ಲಕ್ಷ್ಯ ತೋರುವುದರಿಂದಲೇ ಇಂತಹ ಅನಾಹುತಗಳಾಗುತ್ತವೆ. ಇದನ್ನು ಸರಿಪಡಿಸಲು ಗ್ರಾಮೀಣ ಭಾಗದ ವಿದ್ಯುತ್ ಗ್ರಾಹಕ ನಗರದ ಮೆಸ್ಕಾಂ ಕಚೇರಿಗೆ ಅಲೆಯುವಂತಾಗುತ್ತದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.