ಸೊರಬ: ತಾಲೂಕಿನ ಕುಪ್ಪಗಡ್ಡೆ ಗ್ರಾಮದ ದೊಡ್ಡಕೆರೆಯಲ್ಲಿ ಬುಧವಾರ ನಡೆದ ಕೆರೆಬೇಟೆ ಹಬ್ಬದ ಮೀನು ಬೇಟೆಗೆ ಸಾವಿರಾರು ಮಂದಿ ಆಗಮಿಸಿದ್ದರು.
ಏಕಕಾಲಕ್ಕೆ ಕೆರೆಗೆ ಇಳಿದು ಕೂಣಿಗಳ ಮೂಲಕ ಮೀನು ಬೇಟೆ ಮಾಡಲಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಸುಮಾರು ಮೂರ್ನಾಲ್ಕು ಸಾವಿರ ಮಂದಿ ಆಗಮಿಸಿದ್ದರು.
ಗ್ರಾಮ ಸಲಹಾ ಸಮಿತಿಯಿಂದ ಬಸವೇಶ್ವರ ಗೆಳೆಯರ ಬಳಗಕ್ಕೆ ಮೀನು ಸಾಕಾಣಿಕೆ ಮಾಡಲು ಟೆಂಡರ್ ನೀಡಲಾಗಿತ್ತು. ಮೀನು ಬೇಟೆಗೆ ಇಳಿಯುವವರಿಗೆ ಕೂಣಿಯೊಂದಕ್ಕೆ 600 ರೂ., ನಿಗದಿ ಮಾಡಲಾಗಿತ್ತು. ಜನತೆ ಮೀನುಗಳನ್ನು ಹಿಡಿದು ಸಂಭ್ರಮಿಸಿದರು. ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಲಿನ ವಿವಿಧ ಗ್ರಾಮಗಳು, ನೆರೆಯ ತಾಲೂಕಿನಿಂದಲೂ ಮೀನು ಬೇಟೆಗೆ ಆಗಮಿಸಿದ್ದರು.
ಬೇಸಿಗೆಯಲ್ಲಿ ನೀರು ಕಡೆಮೆಯಾಗುತ್ತಿದ್ದಂತೆ ಮೇ ತಿಂಗಳಲ್ಲಿ ಕೆರೆಗಳ ಮೀನು ಬೇಟೆಗಳು ಆರಂಭವಾಗುತ್ತವೆ. ಇದು ಮಲೆನಾಡು ಭಾಗದ ಜನರ ಸಂಸ್ಕೃತಿಯೂ ಆಗಿದೆ. ಕೆರೆ ಬೇಟೆಯಲ್ಲಿ ಸಾಗರ ತಾಲೂಕಿನ ಕೈರಾ ಗ್ರಾಮಸ್ಥರೊಬ್ಬರು ಬರೋಬ್ಬರಿ 31 ಕೆ.ಜಿ ತೂಕದ ಮೀನು ಹಿಡಿದರೆ, ಶಿರಸಿ ಸಮೀಪದ ರಾಮಾಪುರದ ಯುವಕ 25 ಕೆ.ಜಿ. ತೂಕದ ಮೀನು ಹಿಡಿದು ಗಮನ ಸೆಳೆದರು.
ಇದನ್ನೂ ಓದಿ : ಬೆಳಗಾವಿಯ 700 ಎಕರೆ ಜಮೀನು ಹಸ್ತಾಂತರಕ್ಕೆ ರಕ್ಷಣಾ ಸಚಿವರ ಆಶ್ವಾಸನೆ: ಸಿಎಂ