ಸಾಗರ: ಜೋಗ ವೀಕ್ಷಣಾ ಪ್ರದೇಶದ ಗೇಟ್ ತೆರೆದು ಪ್ರವಾಸಿಗರಿಗೆ ಜೋಗ ಜಲಪಾತದ ವೀಕ್ಷಣೆಗೆ ಅವಕಾಶ ಕೊಡುವ ಭರವಸೆ ನೀಡಿದ್ದ ಪ್ರವಾಸೋದ್ಯಮ ಇಲಾಖೆ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿರುವುದರಿಂದ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಜಲಪಾತದ ವೀಕ್ಷಣೆಗೆ ಪ್ರವಾಸಿಗರಿಗೆ ಭಾನುವಾರವೂ ಇಲಾಖೆ ಅವಕಾಶ ನೀಡಲಿಲ್ಲ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಮಾ. 22ರಿಂದಲೇ ನಿಷೇಧ ಹೇರಲಾಗಿತ್ತು. ಜೂ. 8ರಿಂದ ಪ್ರವೇಶ ಅವಕಾಶ ನೀಡಲಾಗುವುದು ಎಂದಿದ್ದ ಇಲಾಖೆ, ಈ ದಿನವನ್ನು 24 ಗಂಟೆಗಳಷ್ಟು ಮುಂದೆ ಹಾಕಿತ್ತು. ಆದರೆ ಅಂತಿಮವಾಗಿ ಕಳೆದ ಒಂದು ವಾರದಿಂದ ಪ್ರವಾಸಿಗರು ಜೋಗ ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದರೂ ಅವಕಾಶವನ್ನು ಸ್ಪಷ್ಟ ಪ್ರಕಟಣೆ ನೀಡದೆ ನಿರ್ಬಂಧಿಸಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಸಹ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಜಲಪಾತ ವೀಕ್ಷಿಸಲು ಸಾಧ್ಯವಾಗದೆ ನಿರಾಶರಾದರು.
ಶನಿವಾರ ಶಿವಮೊಗ್ಗ, ಬೆಂಗಳೂರು, ಹಾವೇರಿ ಭಾಗಗಳಿಂದ ಪ್ರವಾಸಿಗರು ಆಗಮಿಸಿದ್ದರು. ಪ್ರವೇಶ ದ್ವಾರದಲ್ಲಿ ತಡೆದ ಹಿನ್ನೆಲೆಯಲ್ಲಿ ಪ್ರವಾಸಿಗರು ಭದ್ರತಾ ಸಿಬ್ಬಂದಿ ಜತೆ ಮಾತಿನ ಚಕಮಕಿ ಸಹ ನಡೆಸಿದರು. ಭಾನುವಾರ ಶಿವಮೊಗ್ಗ, ಸಕಲೇಶಪುರ, ಹಾಸನ, ಬಳ್ಳಾರಿ ಮುಂತಾದ ಕಡೆಗಳಿಂದ ದ್ವಿಚಕ್ರ ವಾಹನ, ಕಾರು, ಬಾಡಿಗೆ ವಾಹನಗಳಲ್ಲಿ ಪ್ರವಾಸಿಗರು ಜೋಗಕ್ಕೆ ಬಂದಿದ್ದರು. ಪ್ರವೇಶ ನಿರ್ಬಂಧದ ಹಿನ್ನೆಲೆಯಲ್ಲಿ ರಸ್ತೆ ಬದಿಗೆ ನಿಂತು ಜೋಗ ವೀಕ್ಷಣೆಗೆ ಯತ್ನಿಸಿದರು. ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಜಲಪಾತ ವೀಕ್ಷಣೆ ಸಾಧ್ಯವಾಗಲಿಲ್ಲ.
ಈ ಕುರಿತು ಪತ್ರಿಕೆಯೊಂದಿಗೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಮಕೃಷ್ಣ ಮಾತನಾಡಿ, ಭದ್ರತಾ ಸಿಬ್ಬಂದಿಯ ರಕ್ಷಣೆಗೆ ಅಗತ್ಯವಾದ ಶೀಲ್ಡ್ ಮಾಸ್ಕ್ ಮುಂತಾದ ಪರಿಕರಗಳನ್ನು ಆನ್‌ಲೈನ್ ಪೇಮೆಂಟ್ ಮಾಡಿ ಸಕಾಲದಲ್ಲಿ ತರಿಸಿಕೊಳ್ಳಲು ಸಾಧ್ಯವಾಗದ ಕಾರಣ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಮುಂದೂಡಲಾಗಿದೆ. ಜೂ. 15ರಿಂದ ಪ್ರವೇಶ ಅವಕಾಶ ಕಲ್ಪಿಸಲಾಗುವುದು ಎಂದರು.