ಸಾಗರ: ತಾಲೂಕಿನಲ್ಲಿ ಶನಿವಾರ ಸಂಜೆಯಿಂದ ಆರಂಭವಾಗಿರುವ ಆಶ್ಲೇಷ ಮಳೆ ವಿಶ್ರಾಂತಿ ತೆಗೆದುಕೊಳ್ಳದೆ 48 ಗಂಟೆಗಳ ಹಿಂದಿನಿಂದಲೂ ಸುರಿಯುತ್ತಿದ್ದು, ಮಂಗಳವಾರವೂ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಬಿರುಸು ಮಳೆಯಿಂದಾಗಿ ಜನರು ಮನೆಯಿಂದ ಹೊರಗೆ ಹೋಗಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿತ್ತು. ನಗರದ ವಿವಿಧೆಡೆ ಗದ್ದೆ ಪ್ರದೇಶವನ್ನು ಪರಿವರ್ತಿಸಿ ನಿರ್ಮಿಸಲಾಗಿರುವ ಬಡಾವಣೆಗಳಲ್ಲಿ ನೀರು ನುಗ್ಗಿದ್ದು ನೆರೆ ಪೀಡಿತ ಬೆಂಗಳೂರಿನಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಗೆ ತಾಲೂಕಿನ ಬೇರೆಬೇರೆ ಭಾಗಗಳಲ್ಲಿ ಅನಾಹುತಗಳು ನಡೆದಿದ್ದು, ಜೀವ ಹಾನಿಯಂತಹ ಪ್ರಕರಣ ಮಾತ್ರ ಈವರೆಗೆ ನಡೆದಿಲ್ಲ. ಕೆಳದಿಯಲ್ಲಿ ತೆಂಗಿನ ಮರವೊಂದು ತುಂಡರಿಸಿ ಮನೆಯ ಮೇಲೆ ಬಿದ್ದಿದೆ. ಮನೆಗೆ ಹಾನಿ ಉಂಟಾಗಿದ್ದು, ಸ್ಥಳೀಯರು ಭರದಿಂದ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಂಪೂರ್ಣ ವಿದ್ಯುತ್ ವ್ಯವಸ್ಥೆ ಹದಗೆಟ್ಟಿದೆ. ವರದಹಳ್ಳಿಯಲ್ಲಿ ವಿದ್ಯುತ್ ಕಂಬಗಳು ಉರುಳಿವೆ.
ತಾಲೂಕಿನ ಕಾರ್ಗಲ್, ಜೋಗ, ತಾಳಗುಪ್ಪ, ತುಮರಿ, ಕಸಬಾ, ಭಾರಂಗಿ ಮತ್ತು ಆನಂದಪುರ ಹೋಬಳಿಗಳಲ್ಲಿ ಮಳೆಯ ಅಬ್ಬರ ಜಾಸ್ತಿ ಇದೆ. ಆನಂದಪುರದ ಇರುವಕ್ಕಿಯ ಸೇತುವೆ ಮೇಲೆ ನೀರು ಹರಿದಿದ್ದರಿಂದ ಅಲ್ಲಿ ಸಂಚಾರ ಕಡಿತಗೊಂಡಿದೆ. ಕೆಲವು ಕಡೆಗಳಲ್ಲಿ ಕೆರೆಕಟ್ಟೆಗಳು ತುಂಬಿ ಹರಿದು, ಜಮೀನಿಗೆ ನೀರು ನುಗ್ಗಿದೆ. ಕಾರ್ಗಲ್ ಮತ್ತು ಜೋಗದಲ್ಲಿ ರಸ್ತೆಯ ಮೇಲೆ ಮೊಣಕಾಲು ಎತ್ತರದ ನೀರು ಹರಿಯುತ್ತಿದೆ.
ಬಸವನ ಹೊಳೆ ಡ್ಯಾಂ ತುಂಬಿದ್ದು, ಕ್ರಸ್ಟ್ ಗೇಟ್ ಮೂಲಕ ನೀರು ಹೊರಕ್ಕೆ ಬಿಡಲಾಗಿದೆ. ವರದಾ ನದಿ ಹರಿದು ಹೋಗುವ ಸಣ್ಣಮನೆ ಸೇತುವೆ, ಅಣಲೆಕೊಪ್ಪ ಭಾಗದ ಸೇತುವೆ ಸಮೀಪ ನೀರು ತುಂಬಿ ಹರಿಯುತ್ತಿದೆ. ಕಾಗೋಡು ಬಡಾವಣೆಯಲ್ಲಿ ಯುಜಿಡಿಯ ಮ್ಯಾನ್‌ಹೋಲ್ನ ಮುಚ್ಚಳವನ್ನು ಬೇಸಿ ನೀರು ಉಕ್ಕುತ್ತಿದ್ದು ಯಾವುದೇ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಬಹುದಾಗಿದೆ.
ತಾಲೂಕಿನ ಗೌತಮಪುರದ ಕಣ್ಣೂರು ಸಮೀಪದ ನರಸೀಪುರ, ಹೊಸಕೊಪ್ಪ ಭಾಗದ ಮಳೆಯಿಂದಾಗಿ ಹೊಳೆನೀರು ಉಕ್ಕಿ ಈ ಭಾಗದ ರೈತರ ಹೊಲ, ತೋಟಗಳು ಹಾನಿಗೀಡಾದ ಪ್ರದೇಶಗಳನ್ನು ಎಪಿಎಂಸಿ ಸದಸ್ಯರಾದ ಚೇತನರಾಜ್ ಕಣ್ಣೂರು ಸಮೀಕ್ಷೆ ಮಾಡಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ದೇವೇಂದ್ರಪ್ಪ, ರಘುಪತಿಭಟ್, ಹಾಲೇಶ್, ರವಿಕುಮಾರ್ ಎಸ್. ಯಡೇಹಳ್ಳಿ ಇತರರು ಇದ್ದರು.
ಶಾಲೆಗಳಿಗೆ ರಜೆ: ತಾಲೂಕಿನಾದ್ಯಂತ ತೀವ್ರ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಬುಧವಾರವೂ ಮುಂದುವರಿಯುವ ನಿರೀಕ್ಷೆಯಿರುವುದರಿಂದ ತಹಶೀಲ್ದಾರ್‌ರೊಂದಿಗೆ ಸಮಾಲೋಚಿಸಿ ಬುಧವಾರ ಕೂಡ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ರಜೆ ಮುಂದುವರಿಸುತ್ತಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿಂಬ ಕೆ.ಆರ್. ತಿಳಿಸಿದ್ದಾರೆ.