ಸಾಗರ: ತಾಲೂಕಿನ ಸಂಕಣ್ಣ ಶ್ಯಾನಭಾಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಡುಗಳಲೆಯಲ್ಲಿ ಅಂಬಾರಗುಡ್ಡದ ಕುಸಿತದಿಂದ ಆಡುಗಳಲೆ ಹಳ್ಳದ ದಂಡೆ ಒಡೆದಿದ್ದು ನೀರು ನುಗ್ಗಿದ ಹಿನ್ನೆಲೆಯಲ್ಲಿ ನೂರಾರು ಎಕರೆ ಭತ್ತದ ಗದ್ದೆ ಹಾಗೂ ಅಡಕೆ ತೋಟಗಳಿಗೆ ಹಾನಿಯಾಗಿದೆ.
ಐದು ದಿನಗಳ ಹಿಂದೆ ದಂಡೆಯಲ್ಲಿ ಬಿರುಕು ಉಂಟಾಗಿ ನೀರಿನ ಪ್ರವಾಹ ತೋಟಗಳ ಕಡೆ ನುಗ್ಗಿರುವುದರಿಂದ ಸಂಪೂರ್ಣ ಬೆಳೆ ನಾಶವಾಗಿ ಮಣ್ಣು ತೋಟ ಹಾಗೂ ಗದ್ದೆಗಳನ್ನು ಆವರಿಸಿದೆ.
ಐದು ದಿನಗಳ ಹಿಂದೆಯೇ ಹಾನಿ ಆಗಲು ಆರಂಭವಾಗಿದ್ದರೂ ರೆವಿನ್ಯೂ ಇನ್ಸ್‌ಪೆಕ್ಟರ್ ಹೊರತಾಗಿ ಕಂದಾಯ ಇಲಾಖೆಯ ಯಾವ ಅಧಿಕಾರಿಗಳೂ ಸ್ಥಳಕ್ಕೆ ಬಂದಿಲ್ಲ. ತಹಶೀಲ್ದಾರ್ ಮಟ್ಟದ
ಅಧಿಕಾರಿಗಳ ಆಗಮನವನ್ನು ನಾವು ನಿರೀಕ್ಷಿಸಿದ್ದೆವು. ಹಳ್ಳಕ್ಕೆ ತಡೆಗೋಡೆಯನ್ನು ನಿರ್ಮಿಸಿಕೊಡುವಲ್ಲಿ ಸಹಾಯ ಮಾಡಿದ್ದರೆ ನಮ್ಮ ನೂರಾರು ಎಕರೆ ಜಮೀನು, ಬೆಳೆಯನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದು ಅಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯರಾದ ವಿಜಯ ಆಡುಗಳಲೆ ತಿಳಿಸಿದರು.
ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು ಮಾತನಾಡಿ, ಅಂಬಾರಗುಡ್ಡದ ಮೂಲದಿಂದ ಮಳೂರು ಹಳ್ಳದ ನೀರಿನ ಪಾತಳಿಯಲ್ಲಿ 1200 ಮೀಟರ್‌ನ ಸುಸಜ್ಜಿತವಾದ ಕಾಲುವೆ ನಿರ್ಮಿಸಿದರೆ ಪ್ರತಿ ವರ್ಷ ಉಂಟಾಗುವ ನೆರೆ ಹಾವಳಿಯನ್ನು ತಪ್ಪಿಸಬಹುದು. ಈ ಬಾರಿ ಇಲ್ಲಿನ ಸುಧಾಮಣಿ ಹಾಗೂ ಚೂಡಾರತ್ನ ಸೇರಿದ ಮೂರು ಎಕರೆ ಹೊಸ ತೋಟ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಈ ಸಂಬಂಧ ಜಿಲ್ಲಾಡಳಿತ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಗೋವಾ: ಚರ್ಚೆಗೆ ಕಾರಣವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿಯಲ್ಲಿ ವಿಲೀನ ಸುದ್ದಿ !