Advertisement

ಸಾಗರ ಭಾಗದಲ್ಲಿ ಬಿರುಸಾದ ಮಳೆ; ಜನರಲ್ಲಿ ಆತಂಕ

05:19 PM Aug 11, 2019 | Naveen |

ಸಾಗರ: ಶನಿವಾರ ಬೆಳಗಿನ ಅವಧಿಯಲ್ಲಿ ವಿಶ್ರಾಂತಿ ಪಡೆದಿದ್ದ ಆಶ್ಲೇಷಾ ಮಳೆ ಮಧ್ಯಾಹ್ನದ ನಂತರ ಬಿರುಸುಗೊಂಡು ತಾಲೂಕಿನ ಜನರ ಆತಂಕಕ್ಕೆ ಪೂರ್ಣ ವಿರಾಮ ಇಲ್ಲದಂತೆ ಮಾಡಿದೆ. ಮಳೆಯ ಹಾನಿಯ ಘಟನೆಗಳು ಕೂಡ ನಿರಂತರವಾಗಿ ನಡೆಯುತ್ತಿವೆ.

Advertisement

ಬೀಸನಗದ್ದೆ ರಸ್ತೆ ಬಂದ್‌: ವರದಾ ನದಿ, ಕನ್ನಹೊಳೆ, ಮಾವಿನಹೊಳೆ ತುಂಬಿ ಹರಿಯುತ್ತಿರುವ ಪರಿಣಾಮ ಕಣಸೆಹೊಳೆ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಜನರು ಕವಚೂರು ಮೂಲಕ ಸಾಗರ ನಗರ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಗುರುವಾರ ರಾತ್ರಿ ಸುರಿದ ವಿಪರೀತ ಮಳೆಯಿಂದಾಗಿ ಬೀಸನಗದ್ದೆಗೆ ಇನ್ನಷ್ಟು ನೀರು ಸುತ್ತುವರಿದಿದ್ದು, ತಾಲೂಕು ಆಡಳಿತದ ವತಿಯಿಂದ ನೀಡಲಾದ ಎರಡು ತೆಪ್ಪದಲ್ಲಿ ಜನರು ಸಂಚರಿಸುತ್ತಿದ್ದಾರೆ.

ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ: ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಶನಿವಾರ ನೀರಿನ ಮಟ್ಟ 1808.05 ಅಡಿ ತಲುಪಿದ್ದು, ಒಳಹರಿವು 143397 ಕ್ಯೂಸೆಕ್‌ ಆಗಿರುತ್ತದೆ ಎಂದು ಕೆಪಿಸಿ ಪ್ರಕಟಣೆ ತಿಳಿಸಿದೆ. ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಹೆಚ್ಚಾದ ನೀರನ್ನು ಜಲಾಶಯದಿಂದ ಹೊರ ಬಿಡುವ ಸಾಧ್ಯತೆ ಇರುವುದರಿಂದ ಶರಾವತಿ ನದಿಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ ಹಾಗೂ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕೆಪಿಸಿ ವತಿಯಿಂದ 2ನೇ ನೋಟಿಸ್‌ ನೀಡಲಾಗಿದೆ.

ಸಿಗಂದೂರಿಗೆ ಭಕ್ತರು ಬರದಂತೆ ಪ್ರಕಟಣೆ: ವಿಪರೀತ ಮಳೆಯಿಂದಾಗಿ ಶರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಭಕ್ತಾದಿಗಳು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರದಂತೆ ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ. ಶರಾವತಿ ನದಿ ತೀರದಲ್ಲಿರುವ ಶ್ರೀಕ್ಷೇತ್ರ ಸಿಗಂದೂರಿಗೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತಾದಿಗಳು ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಅತಿಯಾದ ಗಾಳಿ-ಮಳೆ ಇದ್ದು, ಭಕ್ತಾದಿಗಳಿಗೆ ಯಾವುದಾದರೂ ರೀತಿಯ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಭಕ್ತಾದಿಗಳು ಮಳೆ ಪ್ರಮಾಣ ಕಡಿಮೆಯಾಗುವ ತನಕ ದೇವಸ್ಥಾನಕ್ಕೆ ಬರದಂತೆ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ ಎಂದು ತಿಳಿದು ಬಂದಿದೆ.

ತುಮರಿ ಕಲ್ಕಟ್ಟು ಸೇತುವೆಗೆ ಹಾನಿ: ತುಮರಿ ಸಮೀಪದ ಕಲ್ಕಟ್ಟು ಸೇತುವೆ ವಿಪರೀತ ಮಳೆಯಿಂದ ಶರಾವತಿ ನದಿ ಹಿನ್ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದ ಕಲ್ಕಟ್ಟು ಗ್ರಾಮದಲ್ಲಿ ವಾಸಿಸುತ್ತಿದ್ದ 15 ಕುಟುಂಬಗಳಿಗೆ ರಸ್ತೆ ವ್ಯವಸ್ಥೆ ಇಲ್ಲವಾಗಿದೆ. ಗ್ರಾಮಸ್ಥರು ನದಿನೀರು ಇಳಿಯುವ ತನಕ ಮನೆಯಲ್ಲಿಯೇ ವಾಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ನಗರದಲ್ಲಿ ಮನೆಗೆ ಹಾನಿ: ನಗರದ ಜೋಗ ರಸ್ತೆಯ ರಾಘವೇಂದ್ರ ಎಂಬುವವರ ಮನೆ ಅಪಾಯದಲ್ಲಿದೆ. ಮನೆಯ ಪಕ್ಕದಲ್ಲಿದ್ದ ಡ್ರೈನೇಜ್‌ ಕುಸಿದು ಸುಮಾರು 20 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. ಇದರಿಂದ ಮನೆ ಕುಸಿಯುವ ಭೀತಿ ಇದೆ. ಸ್ಥಳಕ್ಕೆ ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್‌, ಕೆ.ಆರ್‌. ಗಣೇಶಪ್ರಸಾದ್‌ ಭೇಟಿ ನೀಡಿ ಪರಿಶೀಲನೆ ನಡೆಸಿ, ಡ್ರೈನೇಜ್‌ ಮುಚ್ಚುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಭೀಮನಕೋಣೆ ಮುಖ್ಯ ರಸ್ತೆಯಲ್ಲಿ ಪ್ರಕಾಶ್‌ ಎಂಬುವವರ ಮನೆಯ ಮೇಲೆ ಮರ ಮುರಿದು ಬಿದ್ದು ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ. ಮರ ಬಿದ್ದ ರಭಸಕ್ಕೆ ಸೋಲಾರ್‌ ಸಿಸ್ಟಂ ಸಂಪೂರ್ಣ ನಾಶವಾಗಿದ್ದು, ಮನೆಯ ಒಂದು ಭಾಗದ ಗೋಡೆ ಬಿರುಕು ಬಿಟ್ಟಿದೆ. ಮನೆಯಲ್ಲಿ ಜನರಿದ್ದರೂ ಅದೃಷ್ಟವಶಾತ್‌ ಯಾರಿಗೂ ತೊಂದರೆ ಸಂಭವಿಸಿಲ್ಲ. ಸ್ಥಳಕ್ಕೆ ನಗರಸಭೆ ಸದಸ್ಯ ಅರವಿಂದ ರಾಯ್ಕರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯನಗರ ಬಡಾವಣೆಯಲ್ಲಿ ಮನೆಯ ಮೇಲೆ ಮರ ಬಿದ್ದಿದೆ. ನಗರದ ನೆಹರೂ ನಗರ, ಈಳಿ ರಸ್ತೆಗಳಲ್ಲಿ ಸಹ ಮನೆ ಕುಸಿದ ಘಟನೆ ನಡೆದಿದೆ. ತ್ಯಾಗರ್ತಿ ಭಾಗದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರವಾಸ ಮಾಡಿ ಆಗಿರುವ ಹಾನಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಅವರ ಜೊತೆ ಜಿಪಂ ಸದಸ್ಯೆ ಅನಿತಾಕುಮಾರಿ ಇದ್ದರು.

ಹಸಿರುಮಕ್ಕಿ-ಸಿಗಂದೂರು ರಸ್ತೆ ಬಂದ್‌: ಹಸಿರುಮಕ್ಕಿ ಮೂಲಕ ಕುಂದಾಪುರಕ್ಕೆ ಸಾಗಬಹುದಾದ ಮಾರ್ಗದಲ್ಲಿ ಆಡಗೋಡಿ ಬಳಿ ಮಾಡೋಡಿ ಸೇತುವೆ ವರಾಹಿ ನದಿಯ ರಭಸಕ್ಕೆ ಕೊಚ್ಚಿ ಹೋಗಿರುವ ಕಾರಣಕ್ಕೆ ಸಾಗರದ ಜನ ಕುಂದಾಪುರ, ಮಣಿಪಾಲ್ಗೆ ತೆರಳಲು ಇದ್ದ ಮಾರ್ಗ ಬಂದ್‌ ಆದಂತಾಗಿದೆ. ತ್ಯಾಗರ್ತಿಯ ಮೇದಾರ ಕೇರಿಯಲ್ಲಿ ನೀರು ನುಗ್ಗಿದ್ದು ಇಲ್ಲಿನ ಮನೆಯೊಂದು ಕುಸಿದಿದೆ. ಈ ಭಾಗದಲ್ಲಿ ಮನೆಯಿಂದ ತೆರವುಗೊಳಿಸಿದ ಜನರಿಗೆ ಅಲ್ಲಿನ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಕೆ. ಹೊಸಕೊಪ್ಪದ ಅಂಗನವಾಡಿ ಕೇಂದ್ರದ ಅಡುಗೆ ಕೊಠಡಿಯ ಶೀಟ್ ಹಾರಿಹೋಗಿದ್ದು ಕಟ್ಟಡ ಕುಸಿಯುವ ಹಂತದಲ್ಲಿರುವ ಮಾಹಿತಿಯಿದೆ. ಮಾಸೂರಿನಿಂದ ಸೊರಬ ತಾಲೂಕಿನ ಕ್ಯಾಸನೂರಿಗೆ ತೆರಳುವ ಮಾರ್ಗದಲ್ಲಿನ ಸೇತುವೆ ನೀರಿನಲ್ಲಿ ಮುಳುಗಿದ್ದು ಮಳೆ ಇನ್ನಷ್ಟು ಹೆಚ್ಚಿದಲ್ಲಿ ಸಂಪರ್ಕ ಕಡಿತಗೊಳ್ಳಲಿದೆ.

ಕಲ್ಮನೆ ಗ್ರಾಪಂ ವ್ಯಾಪ್ತಿಯ ವರದಹಳ್ಳಿ ಜಾಜಿಮನೆಯ ಭೂ ಕುಸಿತ ಸಮಸ್ಯೆಗೆ ಸ್ಪಂದಿಸಿರುವ ಶಾಸಕ ಎಚ್. ಹಾಲಪ್ಪ, ಲೋಕೋಪಯೋಗಿ ಇಲಾಖೆ ಮುಖಾಂತರ ಇಲ್ಲಿ ಹರಿದುಬರುವ ನೀರಿನಿಂದ ಕುಸಿತ ತಪ್ಪಿಸಲು ಶನಿವಾರ ಪೈಪ್‌ ವ್ಯವಸ್ಥೆ ಮಾಡಿಸಿದ್ದಾರೆ. ಬೆಳಗಿನ ಅವಧಿಯಲ್ಲಿ ತಾಲೂಕು ಕಚೇರಿ ಆವರಣದಲ್ಲಿ ನೀರು ತುಂಬಿದ್ದ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳದ ಸಹಾಯ ಪಡೆದು ನೀರು ಹೊರಹಾಕಲಾಗಿದೆ.

ಡೀಸೆಲ್ ಒದಗಿಸಿ: ಕಳೆದ 10 ದಿನಗಳಿಂದ ವಿದ್ಯುತ್‌ ಕಂಬಗಳು ಮುರಿದಿರುವ ಹಿನ್ನೆಲೆಯಲ್ಲಿ ತಾಲೂಕಿನ ತುಮರಿ ಭಾಗದಲ್ಲಿ ವಿದ್ಯುತ್‌ ಸೇವೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಬಿಎಸ್‌ಎನ್‌ಎಲ್ ದೂರವಾಣಿ ಕೇಂದ್ರ ಹಾಗೂ ಮೊಬೈಲ್ ಟವರ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆರ್ಥಿಕ ಮುಗ್ಗಟ್ಟು ಹಾಗೂ ಇತರ ಕಾರಣಗಳಿಂದ ಡೀಸೆಲ್ ಬಳಸಿ ಜನರೇಟರ್‌ ಮೂಲಕ ವಿದ್ಯುತ್‌ ಉತ್ಪಾದಿಸಲಾಗದೆ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಬಿಎಸ್‌ಎನ್‌ಎಲ್ಗೆ ತಾಲೂಕು ಆಡಳಿತ ತನ್ನ ಆರ್ಥಿಕ ಮೂಲಗಳಿಂದ ವಿದ್ಯುತ್‌ ಒದಗಿಸಬೇಕು. ಡಿಜಿಟಲ್ ಗ್ರಾಮ ಎಂಬ ಘೋಷಣೆಯಾಗಿರುವ ತುಮರಿಗೆ ನಿರಂತರವಾಗಿ ಇಂಟರ್‌ನೆಟ್ ಸೌಲಭ್ಯ ಸಿಗುವಂತಾಗಬೇಕು ಎಂದು ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ್‌ ಆಗ್ರಹಿಸಿದ್ದಾರೆ.

ತಾಲೂಕಿನ ಎಲ್ಲ ಗ್ರಾಮಾಂತರ ಭಾಗದಲ್ಲಿನ ವಿದ್ಯುತ್‌ ಕಡಿತದ ಸಮಸ್ಯೆಯಿಂದ ದೂರವಾಣಿ ಕೇಂದ್ರ ಹಾಗೂ ಟವರ್‌ಗಳು ಕೆಲಸ ಮಾಡುತ್ತಿಲ್ಲ. ಸರ್ಕಾರವೇ ಡೀಸೆಲ್ ಒದಗಿಸಿ ಮೊಬೈಲ್ ಸಿಗ್ನಲ್ ಕೆಲಸ ಮಾಡುವಂತೆ ಮಾಡಬೇಕು ಎಂದು ಸಾಗರದ ಬಳಕೆದಾರರ ವೇದಿಕೆ ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next