Advertisement
ತಾಲೂಕು ಆಡಳಿತದ ಪ್ರಕಾರ, ತಾಲೂಕಿನಲ್ಲಿ 3,870 ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ. ಶುಕ್ರವಾರ ಕುಸಿದ ಒಂದು ಮನೆ ಸೇರಿ ಇದುವರೆಗೆ ತಾಲೂಕಿನಲ್ಲಿ 22 ಮನೆಗಳು ಕುಸಿದಿವೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಗ್ಗೋಡು ಗ್ರಾಪಂ ವ್ಯಾಪ್ತಿಯ ಹೊನ್ನೇಸರದ ಗ್ರಾಮದ ಸನಂ 60ರ ಕಿಲಗೆರೆ ಕೆರೆ ಕೋಡಿ ಒಡೆದು ಸಮೀಪದ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ನಷ್ಟವಾಗಿದೆ. ಆಸುಪಾಸಿನ ತೋಟಗಳಲ್ಲಿನ ಪೈಪ್‌ಲೈನ್ ಕಾಮಗಾರಿ ಸಂಪೂರ್ಣ ಹಾಳಾಗಿದೆ. ದಂಡೆ ಒಡೆದ ಪರಿಣಾಮ ಪುಟ್ಟಪ್ಪ, ರಾಜಶೇಖರ, ಮಧುಕೇಶ್ವರ ಹೆಗಡೆ ಎಂಬುವರ ತೋಟಕ್ಕೆ ತುಂಬಾ ಹಾನಿಯಾಗಿದೆ. ಪುಟ್ಟಪ್ಪ ಅವರ ತೋಟಕ್ಕೆ ಮಾಡಿದ ಪೈಪ್‌ಲೈನ್ ನೀರಿನಲ್ಲಿ ಕೊಚ್ಚಿ ಸುಮಾರು ಒಂದು ಕಿಮೀ ದೂರಕ್ಕೆ ಹೋಗಿದೆ. ಒಟ್ಟಾರೆಯಾಗಿ ಅಂದಾಜು 70 ಸಾವಿರ ರೂ. ಹಾನಿಯಾಗಿದೆ.
Related Articles
Advertisement
ತಾಳಗುಪ್ಪ ಹೋಬಳಿಯ ಬೀಸನಗದ್ದೆ ಗ್ರಾಮವು ನೆರೆಯಿಂದ ಸಂಪೂರ್ಣ ನಡುಗಡ್ಡೆಯಾಗಿ ಪರಿವರ್ತನೆಯಾಗಿದ್ದು ತಾಲೂಕು ಆಡಳಿತದ ವತಿಯಿಂದ ಗ್ರಾಮಸ್ಥರ ಸಂಚಾರಕ್ಕೆ ಒಂದು ದೋಣಿಯನ್ನು ಬಿಡಲಾಗಿದೆ. ಅಲ್ಲಿನ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ. ಕಣಸೆ ಸೇತುವೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದನ್ನು ಹೊರತುಪಡಿಸಿದರೆ ಪೊಲೀಸ್ ಪಹರೆ ಹಾಕದಿರುವುದರಿಂದ, ಆ ಸ್ಥಳವನ್ನು ಪ್ರವಾಸಿ ತಾಣವಾಗಿಸಿಕೊಂಡು ಆಗಮಿಸುತ್ತಿರುವವರು ಅಪಾಯಕ್ಕೆ ತುತ್ತಾಗಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ಗುಡುಗು ಮಿಂಚು ಸಮೇತ ಮೇಘಸೋಟದಂತಹ ಘಟನೆ ನಡೆದಿದ್ದರೆ ಶುಕ್ರವಾರ ಆ ರೀತಿಯ ಅನುಭವ ಕಂಡುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿ ಇರುತ್ತದೆ. 40 ಕಿಮೀ ವೇಗದಲ್ಲಿ ಗಾಳಿ ಬೀಸಲಿರುವುದರಿಂದ ಯಾರೂ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುವ ಪ್ರಯತ್ನ ನಡೆದಿದೆ. ನಗರದಲ್ಲಿ ಮಳೆಯ ಅಬ್ಬರ ಕುಸಿದಿರುವುದರಿಂದ ಜನ ಸ್ವಲ್ಪ ನಿಟ್ಟುಸಿರುಬಿಡುವಂತಾಗಿದೆ. ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ಸತತ ಐದನೇ ದಿನ ರಜೆ ಘೋಷಣೆಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್. ಶನಿವಾರ ರಜೆ ಘೋಷಿಸಿದ್ದಾರೆ. ಸೋಮವಾರ ಕೂಡ ಬಕ್ರೀದ್ ರಜೆ ಇರುವುದರಿಂದ ವಿದ್ಯಾರ್ಥಿಗಳು ಈಗಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೆ ಮಂಗಳವಾರ ಶಾಲೆಗೆ ಹೋಗಬಹುದು.
ತುಂಬಿ ಹರಿಯುತ್ತಿರುವ ಬಸವನಹೊಳೆ ಡ್ಯಾಂ ಪ್ರದೇಶದಲ್ಲಿ ಪೊಲೀಸರು ಎಚ್ಚರಿಕೆಯ ಫ್ಲೆಕ್ಸ್ ಅಳವಡಿ ಈ ಭಾಗದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ್ದಾರೆ. ಈ ನಡುವೆ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಅಡಕೆಗೆ ಕೊಳೆ ರೋಗ ತಗುಲಿದ್ದು ಕೃಷಿಕರು ಚಿಂತಾಕ್ರಾಂತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಜೋಸೆಫ್ ನಗರದಲ್ಲಿ ಮನೆಯೊಂದರ ಸಂಪಿಗೆ ಬಿದ್ದ ಹೋರಿಯೊಂದನ್ನು ಅಗ್ನಿ ಶಾಮಕ ದಳದವರು ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ಯಶಸ್ವಿಯಾಗಿ ರಕ್ಷಿಸಿದರು. ಈ ಕಾರಣದಿಂದ ನೆರೆ ಪರಿಹಾರ ಸಮಾಲೋಚನಾ ಸಭೆಯಲ್ಲಿ ಅಗ್ನಿ ಶಾಮಕ ದಳದ ಅಧಿಕಾರಿಗಳು ಪಾಲ್ಗೊಳ್ಳುವುದು ವಿಳಂಬವಾಯಿತು.