ಸಾಗರ: ಮಳೆಹಾನಿಯಾಗಿರುವ ಕಡೆ ತಕ್ಷಣ ಇದಕ್ಕೆ ನಿಯೋಜಿಸಿರುವ ತಂಡಗಳು ಭೇಟಿ ನೀಡಿ ತಕ್ಷಣ ಪರಿಹಾರ ಕೆಲಸ ಕೈಗೊಳ್ಳುವಂತೆ ಆಗಬೇಕು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಸೂಚನೆ ನೀಡಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನೆರೆಹಾನಿ ಸಂಬಂಧ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ ಅವರು, ಮಳೆಹಾನಿಗೆ ಸಂಬಂಧಪಟ್ಟಂತೆ ತಂಡಗಳನ್ನು ರಚನೆ ಮಾಡಲಾಗಿದೆ. ಯಾವ ಇಲಾಖೆಯ ಮುಖ್ಯಸ್ಥರ ಬಳಿ ವಾಹನ ಇದೆಯೋ ಅಂತಹವರನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ನೆರೆಹಾನಿ ವೀಕ್ಷಣೆ ಮತ್ತು ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ವಿಳಂಬ ಧೋರಣೆ ಸಹಿಸುವುದಿಲ್ಲ. ಜನರಿಗೆ ಈ ಸಂದರ್ಭದಲ್ಲಿ ನಮ್ಮ ನೆರವಿನ ಅಗತ್ಯವಿದೆ. ಇದನ್ನು ಅತ್ಯಂತ ಕಳಕಳಿ ಮತ್ತು ಶ್ರದ್ಧೆಯಿಂದ ಮಾಡಬೇಕು. ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜನರಿಗೆ ತಕ್ಷಣ ಪರಿಹಾರ ಕಲ್ಪಿಸುವುದು ಮತ್ತು ಶಾಶ್ವತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ಎಲ್ಲ ಅಧಿಕಾರಿಗಳು ಮತ್ತು ನೌಕರ ವರ್ಗವನ್ನು ಒಳಗೊಂಡಂತೆ ಸಮೀಕ್ಷಾ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವ ತಂಡವನ್ನು ರಚನೆ ಮಾಡಲಾಗಿದೆ. ನೀವು ನಿಮಗೆ ನಿಗದಿಪಡಿಸಿದ ಭಾಗಗಳಲ್ಲಿ ನಿಮ್ಮ ಕೆಲಸ ಮಾಡಿ. ಅದನ್ನು ಬಿಟ್ಟು ಜನಪ್ರತಿನಿಧಿಗಳು ಒಬ್ಬೊಬ್ಬರು ಒಂದೊಂದು ಕಡೆ ಕರೆಯುತ್ತಾರೆ ಎಂದು ಅವರ ಹಿಂದೆ ತಿರುಗಬೇಡಿ. ನಾನು ಕರೆದರೂ ನನ್ನ ಹಿಂದೆ ಬರಬೇಡಿ. ನನಗೆ ಅಗತ್ಯವಿದ್ದರೆ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಮೂಲಕ ತಿಳಿಸುತ್ತೇನೆ. ಕೆಲವು ಜನಪ್ರತಿನಿಧಿಗಳು ತಮ್ಮ ಜೊತೆ ಬನ್ನಿ ಎಂದು ನೋಟಿಸ್ ನೀಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಅಧಿಕಾರಿಗಳು ಮತ್ತು ನೌಕರರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು ಎಂದು ಹೇಳಿದರು.
ಸಹಾಯಕ ಆಯುಕ್ತ ದರ್ಶನ್ ಪಿ.ವಿ. ಮಾತನಾಡಿ, ಇದು ತುರ್ತು ಸಂದರ್ಭ. ನಮ್ಮ ಹೊಣೆಗಾರಿಕೆ ತುಂಬಾ ಇದೆ. ನೆರೆಯನ್ನು ಸಮರ್ಥವಾಗಿ ಎದುರಿಸಲು ರಚನೆ ಮಾಡಿರುವ ತಂಡ ಜವಾಬ್ದಾರಿಯಿಂದ ನಿಮಗೆ ನಿಗದಿಪಡಿಸಿದ ಸ್ಥಳದಲ್ಲಿಯೇ ಕೆಲಸ ಮಾಡಬೇಕು. ಸಬೂಬು ಹೇಳುವುದು, ಇನ್ಯಾರೋ ಕರೆದರು ಎಂದು ಮತ್ತೂಂದು ಕಡೆ ಹೋಗುವುದು ಮಾಡಬೇಡಿ ಎಂದರು. ಸಭೆಯಲ್ಲಿ ತಹಶೀಲ್ದಾರ್ ಚಂದ್ರಶೇಖರ್, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಮಂಜುನಾಥ ಸ್ವಾಮಿ, ಪೌರಾಯುಕ್ತ ಎಸ್. ರಾಜು, ಕ್ಷೇತ್ರ ಶಿಕ್ಷಣಾದಿಕಾರಿ ಬಿಂಬ ಕೆ.ಆರ್. ಇನ್ನಿತರರು ಇದ್ದರು.