ಸಾಗರ: ವಿಶೇಷ ಮಕ್ಕಳ ಮನಸ್ಥಿತಿ ಅರಿತು ಅದಕ್ಕೆ ಪೂರಕವಾಗಿ ಸ್ಪಂದಿಸಲು ತಾಳ್ಮೆ ಮತ್ತು ಶ್ರದ್ಧೆ ಅಗತ್ಯ. ಈ ಸಂದರ್ಭದಲ್ಲಿ ಶಿಕ್ಷಕರು, ಪೋಷಕರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂತಹ ದಿವ್ಯಾಂಗ ಮಕ್ಕಳ ಪಾಲನೆ, ಪೋಷಣೆ ಹಾಗೂ ಅವರಿಗೆ ಶಿಕ್ಷಣ ನೀಡುವುದು ಎಂದರೆ ದೇವರ ಕೆಲಸವಿದ್ದಂತೆ ಎಂದು ಶಾಸಕ ಎಚ್. ಹಾಲಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಭೀಮನಕೋಣೆಯ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂದಿರದಲ್ಲಿ ಭಾನುವಾರ ಮುಂಗರವಳ್ಳಿ ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್, ಚೈತನ್ಯ ವಿಶೇಷ ಶಿಕ್ಷಣ ಶಾಲೆ ಮತ್ತು ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿವ್ಯಾಂಗ ಮಕ್ಕಳಿಗೆ ಕಲಿಕೋಪಕರಣಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚೈತನ್ಯ ವಿಶೇಷ ಶಿಕ್ಷಣ ಶಾಲೆ ಅಂತಹ ಮಕ್ಕಳನ್ನು ಅನೇಕ ವರ್ಷಗಳಿಂದ ನೋಡಿಕೊಳ್ಳುವ ಜೊತೆಗೆ ಅವರ ಸಾಧನೆಗೆ ಊರುಗೋಲಾಗಿ ನಿಂತಿರುವುದು ಹೆಮ್ಮೆಯ ಸಂಗತಿ. ಈಗಾಗಲೇ ಮುಂಗರವಳ್ಳಿ ಚೈತನ್ಯ ವಿಶೇಷ ಶಿಕ್ಷಣ ಶಾಲೆ ಆವರಣದಲ್ಲಿ ನನ್ನ ಅನುದಾನದಲ್ಲಿ ವಿಶೇಷ ಮಕ್ಕಳಿಗಾಗಿ 3 ಲಕ್ಷ ರೂ. ವೆಚ್ಚದಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಮಾಡಿಕೊಡಲಾಗುತ್ತಿದೆ ಎಂದರು.
ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಸಕ್ಷಮ ಕರ್ನಾಟಕ ಇಂತಹ ಮಕ್ಕಳ ಏಳಿಗೆಗಾಗಿ ನಿಸ್ವಾರ್ಥ ಸೇವೆಯನ್ನು ದೇಶವ್ಯಾಪಿ ಸಲ್ಲಿಸಿಕೊಂಡು ಬರುತ್ತಿದೆ. ಸೇವಾ ಮನೋಭಾವ ಹೊಂದಿರುವ ಸ್ವಯಂಸೇವಕರು ಸಕ್ಷಮ ಪ್ರಾಧಿಕಾರದ ಮೂಲಕ ಮಾನವೀಯ ಮೌಲ್ಯ ಹೊಂದಿರುವ ಇಂತಹ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಮುಂಗರವಳ್ಳಿಯ ಚೈತನ್ಯ ವಿಶೇಷ ಶಾಲೆಯ ಮಕ್ಕಳ ಕಲಿಕೆಗೆ ಅನುಕೂಲವಾಗುವಂತಹ ಪಾಠೊಪಕರಣ ನೀಡಿರುವುದು ಸಂಸ್ಥೆಯ ಸದುದ್ದೇಶಕ್ಕೆ ಸಾಕ್ಷಿಯಾಗಿದೆ. ಸಮಾಜ ಇಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸಿಕೊಂಡು ಬರಬೇಕು ಎಂದರು.
ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ಜಯರಾಮ ಬೊಳ್ಳಾಜೆ ಮಾತನಾಡಿ, ವಿಶೇಷ ಮಕ್ಕಳ ಶ್ರೇಯೋಭಿವೃದ್ಧಿಗೆ ಸಕ್ಷಮ ಕರ್ನಾಟಕ ದೇಶವ್ಯಾಪಿ ಕೆಲಸ ಮಾಡಿಕೊಂಡು ಬರುತ್ತಿರುವ ಏಕೈಕ ಸಂಸ್ಥೆಯಾಗಿದೆ. ದಿವ್ಯಾಂಗ ಮಕ್ಕಳು ತಾವೂ ಸಮಾಜದ ಒಂದು ಭಾಗ ಎನ್ನುವ ಮನೋಭಾವ ರೂಢಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಕಾಲಕಾಲಕ್ಕೆ ತರಬೇತಿ ಶಿಬಿರಗಳನ್ನು ಸಹ ನಡೆಸಿಕೊಂಡು ಬರುತ್ತಿದೆ. ಒಟ್ಟಾರೆ ಸಮರ್ಥ ಭಾರತ ನಿರ್ಮಾಣ ನಮ್ಮ ಆಶಯವಾಗಿದೆ ಎಂದರು.
ಟ್ರಸ್ಟ್ ಸಂಚಾಲಕ ಬಿ.ಎಚ್. ರಾಘವೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತದ ಕೋಶಾಧ್ಯಕ್ಷ ಜಯದೇವ ಕಾಮತ್, ಮಂಗಳೂರು ಫಿಷರಿಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ರಾಮಚಂದ್ರ ಭಟ್ ಇದ್ದರು. ನಾರಾಯಣಸ್ವಾಮಿ ಬಿ.ಕೆ. ಸ್ವಾಗತಿಸಿದರು. ಪ್ರಾಚಾರ್ಯೆ ಶಾಂತಲಾ ಸುರೇಶ್ ವಂದಿಸಿದರು. ಎಂ.ನಾಗರಾಜ್ ನಿರೂಪಿಸಿದರು.