ಸಾಗರ: ತಾಲೂಕಿನಾದ್ಯಂತ ವಿವಿಧ ಭಾಗಗಳಲ್ಲಿ ಬುಧವಾರ ತಡ ರಾತ್ರಿ ಬಿರುಗಾಳಿ, ಮಳೆಯ ಕಾರಣದಿಂದ ಅನಾಹುತಗಳ ಸರಮಾಲೆಯೇ ಸೃಷ್ಟಿಯಾಗಿದ್ದು ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಹಲವಾರು ಮರಗಳು ಉರುಳಿದ್ದು, 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ.
ತಾಲೂಕಿನ ಮತ್ತಿಕೊಪ್ಪ, ಮಂಕಳಲೆ ಭಾಗಗಳಲ್ಲಿ ಮನೆಗಳ ಮೇಲೆ ಮರಗಳು ಉರುಳಿ, ನಿವಾಸಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಳಿಗೆ ಮನೆಯ ಹೆಂಚು ಹಾರಿಹೋಗಿರುವುದು ಸಾಮಾನ್ಯವಾಗಿದೆ. ವರದಹಳ್ಳಿಯಲ್ಲಿ ಕೊಟ್ಟಿಗೆ ಮನೆಯೊಂದರ ಮಾಡು ಕುಸಿದು ಬಿದ್ದಿದ್ದು, ಸಕಾಲದಲ್ಲಿ ಕೊರಳ ಪಟ್ಟಿ ಬಿಚ್ಚಿದ್ದರಿಂದ ಜಾನುವಾರುಗಳು ಬಚಾವಾಗಿವೆ.
ಭೀಮನಕೋಣೆ, ಮುಂಗರವಳ್ಳಿ, ಗಿಣಿವಾರ, ಶೆಡ್ತಿಕೆರೆ, ಜಂಬೂರುಮನೆ ವ್ಯಾಪ್ತಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಭೀಮನಕೋಣೆ, ಮುಂಗರವಳ್ಳಿ ಭಾಗದಲ್ಲಿ ರಸ್ತೆಯಲ್ಲಿ ಮರಗಳು ಉರುಳಿದ ಹಿನ್ನೆಲೆಯಲ್ಲಿ ಗುರುವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚಾರದ ಸಮಸ್ಯೆ ಅನುಭವಿಸಿದರು. ಬೆಳಗಿನ ಸಮಯದಲ್ಲಿ ಅಮಟೆಕೊಪ್ಪದ ಮೂಲಕ ಹೊಸನಗರ ಸಾಗರ ಪ್ರಯಾಣಿಕರು ಪರ್ಯಾಯ ಮಾರ್ಗ ಬಳಸಿದರು. ಆದರೆ ಸರ್ಕಾರಿ ಅಧಿಕಾರಿಗಳು, ಇಲಾಖಾ ನೌಕರರ ಆಗಮನವನ್ನು ಕಾಯದೆ ಭೀಮನಕೋಣೆಯ ಗ್ರಾಮಸ್ಥರು ಮರ ತೆರವು ಕಾರ್ಯಾಚಾರಣೆ ನಡೆಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮುಂಗರವಳ್ಳಿ ಬಳಿ ಗುರುವಾರ ಬೆಳಗ್ಗೆ ಧರೆಗುರುಳಿದ ವಿದ್ಯುತ್ ತಂತಿಗಳ ಮೇಲೆ ಆಕಸ್ಮಿಕವಾಗಿ ಸಂಚರಿಸಿದ ಆಟೋರಿಕ್ಷಾವೊಂದು ಪಲ್ಟಿಯಾಗಿದ್ದು, ಆಟೋದಲ್ಲಿದ್ದ ಹಾಲು ಪ್ಯಾಕೇಟ್‌ಗಳು ಚೆಲ್ಲಾಪಿಲ್ಲಿಯಾಗಿದ್ದು, ಚಾಲಕ ಸಾಗರದ ಭಾಷಾ ಅವರಿಗೆ ಸಣ್ಣಪುಟ್ಟ ಪೆಟ್ಟುಗಳಾಗಿವೆ. ನಗರದಲ್ಲಿ ಒಳ್ಳೆಯ ಮಳೆ ಸುರಿದಿದ್ದರೂ ಗಾಳಿಯ ಪ್ರತಾಪ ಕಾಣಿಸಿಲ್ಲವಾದ್ದರಿಂದ ಯಾವುದೇ ಅನಾಹುತದ ಮಾಹಿತಿ ಲಭ್ಯವಾಗಿಲ್ಲ.