ಸಾಗರ: ನಗರ ಹಾಗೂ ಗ್ರಾಮಾಂತರದ ವಿವಿಧ ಕಡೆಗಳಲ್ಲಿನ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು 2.70 ಲಕ್ಷ ಮೌಲ್ಯದ ಬೆಳ್ಳಿ ಬಂಗಾರದ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನ ಸಹಿತ ಓರ್ವ ಆರೋಪಿಯನ್ನು ಬುಧವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸೊರಬ ತಾಲೂಕಿನ ಉಳವಿ ಗ್ರಾಮದ ಚಂದ್ರ ಬಳೆಗಾರ್ ಯಾಣೆ ಚಂದ್ರ (28) ಬಂಧಿತ ಆರೋಪಿಯಾಗಿದ್ದಾನೆ. ನಗರ ಹಾಗೂ ಗ್ರಾಮಾಂತರದಲ್ಲಿ ಮನೆ ಕಳ್ಳತನ ಪ್ರಕರಣ ವ್ಯಾಪಕವಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯ ಮೇರೆಗೆ ರಚಿಸಲಾಗಿದ್ದ ಇಲ್ಲಿನ ಪೊಲೀಸರ ವಿಶೇಷ ತಂಡ ಕಾರ‍್ಯಾಚರಣೆ ನಡೆಸುತ್ತಿದ್ದ ವೇಳೆ ಏ. 11ರಂದು ಕಳ್ಳತನ ಮಾಡುತ್ತಿದ್ದ ಸಂದರ್ಭ ವಶಕ್ಕೆ ಪಡೆದುಕೊಂಡಿದೆ.
ವಿಚಾರಣೆಯ ವೇಳೆ ಬಂಧಿತ ಆರೋಪಿಯು ನಗರದಲ್ಲಿ 2 ಹಾಗೂ ಗ್ರಾಮಾಂತರದ ಗೌತಮಪುರ ಭಾಗದಲ್ಲಿ 1 ಸೇರಿದಂತೆ ಒಟ್ಟು 3 ಕಡೆಗಳಲ್ಲಿನ ಮನೆಕಳ್ಳತನ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಆರೋಪಿಯಿಂದ 2.50 ಲಕ್ಷ ಮೌಲ್ಯದ ಅಂದಾಜು 2 ಕೆಜಿಯಷ್ಟು ಬೆಳ್ಳಿ ಆಭರಣಗಳನ್ನು ಹಾಗೂ 20 ಸಾವಿರ ರೂ ಮೌಲ್ಯದ ಬಂಗಾರದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳ್ಳತನ ಕೃತ್ಯಕ್ಕೆ ಬಳಸಲಾಗಿದ್ದ 90 ಸಾವಿರ ರೂ. ಮೌಲ್ಯದ ದ್ವಿಚಕ್ರವಾಹನವನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ : ಯುಪಿಯಲ್ಲಿ ಶಾಂತಿಯುತ ರಾಮನವಮಿ: ಗಲಭೆಗಳಿಗೆ ಸ್ಥಳವಿಲ್ಲ ಎಂದ ಯೋಗಿ
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಕಾರಿ ಲಕ್ಷ್ಮಿ ಪ್ರಸಾದ್, ಎಎಸ್‌ಪಿ ವಿಕ್ರಮ ಅಮತೆ ಮಾರ್ಗದರ್ಶನದಲ್ಲಿ ಎಎಸ್‌ಪಿ ರೋಹನ್ ಜಗದೀಶ್ ಸೂಚನೆ ಮೇರೆಗೆ ಕಾರ‍್ಯಾಚರಣೆ ನಡೆಸಿದ್ದ ವಿಶೇಷ ತಂಡದಲ್ಲಿ ನಗರ ಪೊಲೀಸ್ ಠಾಣಾ ಪ್ರಭಾರ ಸಿಪಿಐ ಕೆ.ವಿ.ಕೃಷ್ಣಪ್ಪ, ಕಾರ್ಗಲ್ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ತಿರುಮಲೇಶ್, ಪಿಎಸ್‌ಐ ಟಿ.ಡಿ. ಸಾಗರಕರ್, ಪೊಲೀಸ್ ಅಪರಾಧ ವಿಭಾಗದ ಸಿಬ್ಬಂದಿ ರತ್ನಾಕರ, ಸಂತೋಷ ನಾಯ್ಕ್, ಅಶೋಕ, ಹಝರತ್ ಅಲಿ, ಶ್ರೀಧರ್ ಇದ್ದರು.