Advertisement

ಪತ್ರಕರ್ತರ ಮೇಲೆ ಹಲ್ಲೆ ಯತ್ನ; ಸೂಕ್ತ ಕ್ರಮಕ್ಕೆ ಆಗ್ರಹ

03:06 PM Feb 03, 2022 | Team Udayavani |

ಸಾಗರ: ಪತ್ರಕರ್ತ ಉಮೇಶ್ ಮೊಗವೀರ ಅವರ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್, ತಾಲೂಕಿನಲ್ಲಿ ಪತ್ರಕರ್ತರ ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯನ್ನು ಕೆಲವರು ನಿರ್ಮಿಸುತ್ತಿದ್ದಾರೆ. ಫೆ. 1ರಂದು ಪತ್ರಕರ್ತ ಉಮೇಶ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಮಾರಿಕಾಂಬಾ ದೇವಸ್ಥಾನದ ಎದುರು ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ. ಉಮೇಶ್ ಅವರ ಕಾರನ್ನು ಅಡ್ಡಗಟ್ಟಿ, ಮೊಬೈಲ್ ಕಿತ್ತುಕೊಂಡಿದ್ದಾರೆ. ಹಾಡುಹಗಲೇ ಜನನಿಬಿಡ ಪ್ರದೇಶದಲ್ಲಿ ಹಲ್ಲೆಗೆ ಮುಂದಾಗಿರುವ ಕ್ರಮ ಖಂಡನೀಯ. ಉಮೇಶ್ ಫೆ. 2ರಂದು ತಮ್ಮ ಮೇಲೆ ನಡೆದ ಹಲ್ಲೆ ಯತ್ನ ಸಂಬಂಧ ನಗರ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಪತ್ರಕರ್ತರ ಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು, ತಕ್ಷಣ ಹಲ್ಲೆಗೆ ಯತ್ನಿಸಿದವರ ವಿರುದ್ದ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಬಿ.ರಾಘವೇಂದ್ರ ಮಾತನಾಡಿ, ಕಳೆದ ಆರು ತಿಂಗಳಿನಿಂದ ಪತ್ರಕರ್ತರ ಮೇಲೆ ಒಂದಿಲ್ಲೊಂದು ಹಂತದಲ್ಲಿ ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿದೆ. ಪತ್ರಕರ್ತರ ವರದಿಯಲ್ಲಿ ಲೋಪವಿದ್ದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ. ಆದರೆ ಹಲ್ಲೆಯಂತಹ ಕೃತ್ಯಕ್ಕೆ ಮುಂದಾಗುವುದು ಮಾಧ್ಯಮದ ಕತ್ತು ಹಿಸುಕುವ ಪ್ರಯತ್ನವಾಗಿದೆ. ಉಮೇಶ್ ಪ್ರಕರಣದಲ್ಲಿ ಅವರನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನ ನಡೆಸಲಾಗಿದೆ. ತಕ್ಷಣ ತಪ್ಪಿತಸ್ತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದರು.

ಇದನ್ನೂ ಓದಿ : ಶ್ರೀರಂಗಪಟ್ಟಣದ ಈ ಅಧಿಕಾರಿಗೆ ಪ್ರತಿ ಕೆಲಸದಲ್ಲೂ ಪರ್ಸಂಟೇಜ್ ಕೊಡಬೇಕಂತೆ

ಹಿರಿಯ ಪತ್ರಕರ್ತ ಎಂ.ರಾಘವೇಂದ್ರ ಮಾತನಾಡಿ, ಯೂಟ್ಯೂಬ್, ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರು ಮಾನಹಾನಿಯಾಗುವಂತಹ ವರದಿ ಪ್ರಕಟ ಮಾಡಿದರೆ ಸೈಬರ್ ಕ್ರೈಮ್ ಅಡಿ ದೂರು ದಾಖಲಿಸಲು ಅವಕಾಶ ಇದೆ. ಆದರೆ ಪತ್ರಕರ್ತರ ಮೇಲಿನ ನೈತಿಕ ಪೊಲೀಸ್‌ಗಿರಿ ಸಹಿಸಲು ಸಾಧ್ಯವಿಲ್ಲ. ಆರಂಭದಲ್ಲಿಯೇ ಇಂತಹ ನೈತಿಕ ಪೊಲೀಸ್‌ಗಿರಿಯನ್ನು ಮಟ್ಟಹಾಕುವ ಕೆಲಸ ಮಾಡಬೇಕು ಎಂದರು.

Advertisement

ಸಂಘದ ಪ್ರಧಾನ ಕಾರ್ಯದರ್ಶಿ ರವಿನಾಯ್ಡು, ಖಜಾಂಚಿ ಎಂ.ಜಿ.ರಾಘವನ್, ಪತ್ರಕರ್ತರಾದ ಲೋಕೇಶಕುಮಾರ್, ವಿ.ಶಂಕರ್, ಗಿರೀಶ್ ಆರ್. ರಾಯ್ಕರ್, ಎಲ್. ನಾಗರಾಜ್, ಇಮ್ರಾನ್ ಸಾಗರ್, ಉಮೇಶ್ ಮೊಗವೀರ, ರಮೇಶ್ ಎನ್., ಯೋಗೀಶ್ ಜಿ., ಶಿವಕುಮಾರ್ ಗೌಡ, ನಾಗರಾಜ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next