ಸಾಗರ: ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಪರಿಚಿತಳಾದ ಯುವತಿ ತನ್ನ ಸ್ನೇಹಿತರ ಜೊತೆ ಯುವಕನೋರ್ವನನ್ನು ಬ್ಲ್ಯಾಕ್ ಮೇಲ್ ಮಾಡಿ ನಿರಂತರವಾಗಿ ಹಣ ವಸೂಲಿ ಮಾಡಿದ ಘಟನೆ ಸಾಗರದಲ್ಲಿ ನಡೆದಿದ್ದು, 13 ಸಾವಿರ ರೂ. ವಸೂಲಿ ಮಾಡಿದ್ದಾರೆ ಎಂದು ಯುವಕನ ತಂದೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಸೊರಬ ತಾಲೂಕಿನ ಉಮಟಗದ್ದೆಯ ನಿವಾಸಿ ವಿವೇಕ್ ಇನ್‌ಸ್ಟಾಗ್ರಾಂ ಮೂಲಕ ಪರಿಚಿತಳಾದ ಅಣಲೆ ಕೊಪ್ಪದ ‘ಸೌಜನ್ಯ’ ಎಂಬ ಯುವತಿಯಿಂದ ಸಂದೇಶ ಸ್ವೀಕರಿಸಿ, ನಂತರ ಸಾಕಷ್ಟು ಸಲ ದೂರವಾಣಿ ಮೂಲಕ ಆಕೆಯ ಜತೆಗೆ ಮಾತುಕತೆ ನಡೆಸಿದ್ದಾನೆ. ಏ. 24 ರಂದು ತನ್ನ ಹುಟ್ಟುಹಬ್ಬ ಇದ್ದು, ಅದರ ಆಚರಣೆ ಸಲುವಾಗಿ ವಿವೇಕ್‌ಗೆ ಏ. 25 ರಂದು ಸಾಗರಕ್ಕೆ ಬರಲು ಮತ್ತು ಉಡುಗೊರೆಯಾಗಿ ಹೊಸ ಫೋನ್ ಕೊಡಿಸಲು ಸೌಜನ್ಯ ಒತ್ತಾಯ ಮಾಡಿದ್ದಾಳೆ.
ಅಂದು ವಿವೇಕ್ ಸ್ನೇಹಿತೆಗಾಗಿ ಅಣಲೆಕೊಪ್ಪದ ಉದ್ಯಾನವನದಲ್ಲಿ ಕಾದಿದ್ದ ಸಂದರ್ಭದಲ್ಲಿ ಪಾರ್ಕ್‌ಗೆ ಯುವತಿ ಕಳುಹಿಸಿದ ಬೋಂಡಾ ರವಿ, ಇಸ್ಮಾಯಿಲ್ ಸೇರಿ ವಿವೇಕ್‌ಗೆ, ನಿಮ್ಮಿಬ್ಬರ ಚಾಟಿಂಗ್‌ನ ಸಂಪೂರ್ಣ ವಿವರ ಬಯಲು ಮಾಡದಿರಲು ಹಣ ಕೊಟ್ಟರೆ ಪೊಲೀಸ್ ಪ್ರಕರಣ ಆಗದಂತೆ ನೋಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ. ಅಷ್ಟೊಂದು ಮೊತ್ತ ಇಲ್ಲದ ಕಾರಣ ಮೈಸೂರಿಗೆ ಈ ಇಬ್ಬರನ್ನು ಕರೆದೊಯ್ದ ವಿವೇಕ್ ಅಲ್ಲಿ 3 ಸಾವಿರ ರೂ. ಹೊಂದಿಸಿಕೊಟ್ಟಿದ್ದಾನೆ. ಉಳಿದ ಮೊತ್ತವನ್ನು ಕೆಲವು ದಿನಗಳ ನಂತರ ಕೊಡುವುದಾಗಿ ತಿಳಿಸಿ ಊರಿಗೆ ಹೋಗಿದ್ದಾನೆ.
ಇದನ್ನೂ ಓದಿ : ಕೊಟ್ಟಿಗೆಹಾರ : ಸಹೋದರರ ಜಗಳ ಬಿಡಿಸಲು ಹೋದ ಬಾಲಕಿಯ ಮೇಲೆ ಕತ್ತಿಯಿಂದ ಹಲ್ಲೆ
ಮತ್ತೆ ವಿವೇಕ್ ಕೈಗೆ ಸಿಕ್ಕದ್ದರಿಂದ ರವಿ ಸೊರಬಕ್ಕೆ ಹೋಗಿ ವಿವೇಕ್‌ನ ಫೋಟೋ ಬಳಸಿ ಅಂಗಡಿಯೊಂದರಲ್ಲಿ ಆತನನ್ನು ಪತ್ತೆಹಚ್ಚಿದ್ದಾನೆ. ರವಿ ಬೆದರಿಕೆಗೆ ತುತ್ತಾದ ವಿವೇಕ ತಲಾ ಐದು ಸಾವಿರದಂತೆ ಎರಡು ಬಾರಿ ಹಣ ತೆತ್ತಿದ್ದಾನೆ. ರವಿ ಮೊಬೈಲ್ ಫೋನ್ ಕೂಡ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಂಬಂಧಿಕರ ಬಳಿ ತಮ್ಮ ಮಗ 10 ಸಾವಿರ ರೂ. ಪಡೆದುಕೊಂಡಿರುವ ವಿಷಯ ತಿಳಿದ ವಿವೇಕ್‌ನ ತಂದೆ ಕುಬೇರ ಮಗನ ಬಳಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಇದು ಬಿಡಿ ಪ್ರಕರಣವೇ ಅಥವಾ ಇನ್‌ಸ್ಟಾಗ್ರಾಂ ಮೂಲಕ ಸ್ನೇಹ ಮಾಡಿ ಹಣ ದರೋಡೆ ಮಾಡುವ ಜಾಲ ಚಾಲನೆಯಲ್ಲಿದೆಯೇ ಎಂಬ ಬಗ್ಗೆ ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಾಗಿದೆ.