Advertisement

ಮದುವೆಗೆ ಬಂದು ಲಾಕ್‌ ಆದ ಕೋಳಿವಾಡದವರಿಗೆ ಬಸ್‌ ವ್ಯವಸ್ಥೆ

04:43 PM Apr 27, 2020 | Naveen |

ಸಾಗರ: ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯ ಬಿದರೂರು ಸಮೀಪದ ಹಗರೆ ಗ್ರಾಮಕ್ಕೆ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಬಂದು ಲಾಕ್‌ ಡೌನ್‌ ಆದೇಶದ ಹಿನ್ನೆಲೆಯಲ್ಲಿ ಸಿಕ್ಕಿಹಾಕಿಕೊಂಡ ಧಾರವಾಡ ಜಿಲ್ಲೆಯ ಕೋಳಿವಾಡ ಗ್ರಾಮದ 12 ಜನ ಸದಸ್ಯರು ಒಂದು ತಿಂಗಳ ಬಳಿಕ ಜಿಲ್ಲಾಡಳಿತದ ಸಹಕಾರ ಪಡೆದು ರಾಜ್ಯ ಸಾರಿಗೆ ಬಸ್ಸಿನಲ್ಲಿ ಶನಿವಾರ ಮರಳಿ ತಮ್ಮ ತವರೂರಿನ ಕಡೆ ಪ್ರಯಾಣ ಬೆಳೆಸಿದರು.

Advertisement

ಸಿಲುಕಿಕೊಂಡಿದ್ದ ಈ ಜನರಿಗೆ ಸ್ಥಳೀಯ ಗ್ರಾಮಸ್ಥರು ತಮ್ಮವರು ಎನ್ನುವ ರೀತಿಯಲ್ಲಿ ಆತಿಥ್ಯ ನೀಡಿದ್ದರು. ಮೂವರು ಮಕ್ಕಳು ಸೇರಿದಂತೆ ತಮ್ಮ ಸಂಬಂಧಿ ಕರ ಮದುವೆ ಕಾರ್ಯದ ನಿಮಿತ್ತ ಮಾ.19ರಂದು ಇವರು ಆಗಮಿಸಿದ್ದರು. ಮಾ. 27ರಂದು ಮದುವೆ ಕಾರ್ಯವೂ ಜರುಗಿತು. ಆದರೆ ಲಾಕ್‌ಡೌನ್‌ ಆದೇಶದ ಕಾರಣ ಇವರು ಸಿಲುಕಿಕೊಂಡರು. ಊರಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಬೇಕಾದ ಚಿಂತೆಯಲ್ಲಿದ್ದ ಇವರು ಒಂದೆರಡು ಬಾರಿ ಪಾಸ್‌ಗಾಗಿ ಪ್ರಯತ್ನಿಸಿದರೂ ಪಾಸ್‌ ನೀಡಲು ಜಿಲ್ಲಾಧಿಕಾರಿಗಳ ಕಚೇರಿ ನಿರಾಕರಿಸಿತ್ತು. ರಾಜ್ಯಾದ್ಯಂತ ಲಾಕ್‌ಡೌನ್‌ನಿಂದ ಸಿಕ್ಕಿಕೊಂಡಿರುವವರು ತಮ್ಮ ಸ್ವಂತ ಊರಿಗೆ ಹೋಗಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಈ ಗ್ರಾಮಸ್ಥರಿಗೆ 280 ಕಿಮೀ ದೂರದ ಸ್ವಂತ ಊರಿಗೆ ಹೋಗಲು ಜಿಲ್ಲಾಡಳಿತ ಇದೀಗ ಉಚಿತ ಅವಕಾಶ ಕಲ್ಪಿಸಿತ್ತು.

ತೆರಳುವ ಮುನ್ನ ಕುಟುಂಬಕ್ಕೆ ಕಾರ್ಗಲ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಸ್ಥಳೀಯಾಡಳಿತದ ಮುಖ್ಯಾಧಿಕಾರಿ ಲಕ್ಷ್ಮೀನಾರಾಯಣ್‌ ಸ್ಥಳದಲ್ಲಿದ್ದರು. ಸ್ಥಳೀಯ ಯುವಕರಾದ ನೆಮ್ಮದಿ ಕೇಂದ್ರ ಪ್ರದೀಪ್‌ ಹಾಗೂ ರವಿಕುಮಾರ್‌ ಬಿದರೂರು ಅವರು ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next