ಸಾಗರ: ಪ್ರಾಂತ್ಯ ವ್ಯಾಪ್ತಿಯ ಸೊರಬ ತಾಲೂಕಿನಲ್ಲಿ ಅಡಿಕೆ ಕಳ್ಳತನ ಹೆಚ್ಚುತ್ತಿದ್ದು ಬೆಳೆಗಾರರು ತೀವ್ರ ಆತಂಕಕ್ಕೆ ಸಿಲುಕಿದ್ದಾರೆ. ತಕ್ಷಣ ಅಡಿಕೆ ಕಳ್ಳರನ್ನು ಪತ್ತೆ ಹಚ್ಚಬೇಕು. ರಾತ್ರಿ ಗಸ್ತು ಹೆಚ್ಚಿಸಬೇಕು ಮತ್ತು ವಶಪಡಿಸಿಕೊಂಡ ಅಡಿಕೆಯನ್ನು ಬೆಳೆಗಾರರಿಗೆ ಹಿಂದಿರುಗಿಸುವಂತೆ ಒತ್ತಾಯಿಸಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ನಿಯೋಗ ಶಿಕಾರಿಪುರ ಆರಕ್ಷಕ ಉಪ ಅಧೀಕ್ಷಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಇದೇ ವೇಳೆ ಅಡಿಕೆ ಕಳ್ಳತನ ನಡೆದ ಸಾಗರ ಹಾಗೂ ಸೊರಬದ ಕೃಷಿಕರ ಮನೆಗೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವ್ಯಾಪ್ತಿಗೆ ಒಳಪಡುವ ಸಾಗರ, ಸೊರಬ ಭಾಗಗಳಲ್ಲಿ ಅಡಿಕೆ ಕಳ್ಳತನ ಜಾಸ್ತಿಯಾಗುತ್ತಿದೆ. ಬೆಳೆಗಾರರ ವರ್ಷಪೂರ್ತಿ ಕಷ್ಟಪಟ್ಟು ದುಡಿದ ಫಸಲು ಕಳ್ಳರ ಪಾಲಾಗುತ್ತಿದೆ. ಬೆಳೆಗಾರರು ತಮ್ಮ ಅಡಿಕೆಯನ್ನು ರಕ್ಷಣೆ ಮಾಡಿಕೊಳ್ಳುವುದೇ ಸವಾಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ರಾತ್ರಿ ಗಸ್ತನ್ನು ಹೆಚ್ಚಿಸಬೇಕು. ಅಡಿಕೆ ಕಳ್ಳರನ್ನು ಪತ್ತೆಹಚ್ಚಿ ಮಾಲನ್ನು ನಿಗದಿತ ಸಮಯದೊಳಗೆ ಅಡಿಕೆ ಮಾಲೀಕರಿಗೆ ಒಪ್ಪಿಸಬೇಕು. ಅಡಿಕೆ ಬೆಳೆಗಾರರನ್ನು ಆತ್ಮಸ್ಥೈರ್ಯ ತುಂಬಿಸಲು ಇಲಾಖೆ ತುರ್ತು ಗಮನ ಹರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.
ಶಿಕಾರಿಪುರ ಉಪ ಅಧೀಕ್ಷಕ ಕೌಶಿಕ್ ಅವರು ಅಡಿಕೆ ಬೆಳೆಗಾರರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಸೊರಬ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಅಡಕೆ ಕಳ್ಳತನವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಕಟ್ಟಿನಕೆರೆ ಸೀತಾರಾಮಯ್ಯ, ನಾಗಾನಂದ, ವೆಂಕಟೇಶ್ ಮೂಡಗೋಡು, ಅಣ್ಣಪ್ಪ, ಲಕ್ಷ್ಮೀನಾರಾಯಣ ಮುಂಡಿಗೆಸರ, ರಾಜಶೇಖರ ಹಂದಿಗೋಡು ಇನ್ನಿತರರು ಹಾಜರಿದ್ದರು.