ಸಾಗರ: ಮಾರಣಾಂತಿಕ ಮಂಗನಕಾಯಿಲೆಯಿಂದ ಹೈರಾಣಾಗಿ ಊರು ತೊರೆದ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಜನ ನಿಧಾನವಾಗಿ ಊರಿನತ್ತ ಮರಳುತ್ತಿದ್ದಾರೆ.
Advertisement
ಕಳೆದ ನವೆಂಬರ್‌ನಿಂದ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜನರನ್ನು ಪ್ರಾಣಭೀತಿಗೆ ತಳ್ಳಿದ್ದ ಮಂಗನ ಕಾಯಿಲೆಯ ಆತಂಕ ಮಳೆಗಾಲ ಆರಂಭಗೊಂಡಿದ್ದರಿಂದ ಕೆಲ ಮಟ್ಟಿಗೆ ಕಡಿಮೆಯಾಗಿದ್ದು ಮನೆಗೆ ಬೀಗ ಹಾಕಿ ಸಾಗರ ನಗರ ಸೇರಿದಂತೆ ವಿವಿಧೆಡೆಗಳಿಗೆ ವಲಸೆ ಹೋದವರು ಕಳೆದ ಒಂದು ವಾರದಿಂದ ವಾಪಸ್ ತಮ್ಮ ಮನೆಯತ್ತ ಮುಖ ಮಾಡುತ್ತಿದ್ದಾರೆ.
Related Articles
Advertisement
ಮನೆ ಬಿಟ್ಟು ಪರ ಊರಿಗೆ ತೆರಳಿದ್ದವರು ನಿಧಾನವಾಗಿ ಮರಳುತ್ತಿದ್ದರೂ ಇನ್ನೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಆದರೂ ಮಳೆಯಾಗಿ ರೋಗ ಹರಡುವ ಉಣುಗುಗಳು ಸಾಯುವುದರಿಂದ ಮತ್ತೆ ರೋಗ ಹರಡುವ ಬೀತಿ ಇಲ್ಲ ಎಂಬ ಧೈರ್ಯದಿಂದ ತಮ್ಮಮನೆಗಳಿಗೆ ವಾಪಸ್ ಬರುತ್ತಿದ್ದಾರೆ.
‘ಕಳೆದ ಐದು ತಿಂಗಳಿನಿಂದ ನಾವು ತೋಟದಲ್ಲಿ ಕಾಲಿರಿಸಿರಲಿಲ್ಲ. ಮನೆಯಲ್ಲಿದ್ದ ಅಷ್ಟೂ ಜಾನುವಾರುಗಳನ್ನು ಹಾಗೆಯೇ ಹೊರಗೆ ಬಿಟ್ಟು ಬೇರೆ ಊರುಗಳಿಗೆ ತೆರಳಿದ್ದೆವು. ವಾರದ ಹಿಂದೆ ಮರಳಿದ್ದೇವೆ. ಮೂರ್‍ನಾಲ್ಕು ಹಳ್ಳಿಕಾರು ದನ ಮನೆಗೆ ಮರಳಿವೆ. ಕೊಳೆ ಔಷಧ ಇನ್ನಷ್ಟೇ ಹೊಡೆಯಬೇಕು. ಊರಿನಲ್ಲಿ ಇನ್ನೂ ಕೆಲವರು ವಾಪಸಾಗಿಲ್ಲ. ಒಂದು ರೀತಿಯ ಅನಿಶ್ಚಿತತೆಯಿಂದಲೇ ಊರಿಗೆ ಮರಳಿದ್ದೇವೆ ಎನ್ನುತ್ತಾರೆ ಯಲಗೋಡಿನ ನಾಗರತ್ನ ದೇವಪ್ಪ.
ಮಂಗನ ಕಾಯಿಲೆಯಿಂದ ಮನೆಯಲ್ಲಿಯೇ ಒಂದು ಸಾವು ಕಂಡ ಅರಲಗೋಡಿನ ಪರಮೇಶ್ವರ್, ನಾವು ಸಾಯದಿರುವುದರಿಂದ ಬದುಕಿದ್ದೇವೆ ಅಷ್ಟೇ. ಕಳೆದ ವರ್ಷ ತಮ್ಮನ ಮಾರಣಾಂತಿಕ ಅನಾರೋಗ್ಯದ ಕಾರಣ ನಾವು ಬೆಂಗಳೂರಿಗೆ ತೆರಳಬೇಕಾಯಿತು. ಸಮಯಕ್ಕೆ ಸರಿಯಾಗಿ ಮದ್ದು ಹೊಡೆಯದ್ದರಿಂದ ಕೊಳೆರೋಗ ಕಾಡಿತ್ತು. ಉಳಿದ ಫಸಲನ್ನು ಕೊಯ್ಲು ಮಾಡಲು ಮಂಗನ ಕಾಯಿಲೆ ಭಯ ಅಡ್ಡಿಯಾಗಿ ಒಂದೂವರೆ ಎಕರೆ ಕೊಯ್ಲನ್ನೇ ಮಾಡಲಿಲ್ಲ. ಮನೆಯಲ್ಲಿ ತಮ್ಮನ ಪತ್ನಿ ಪೂರ್ಣಿಮಾ ಕೆಎಫ್‌ಡಿಗೆ ಬಲಿಯಾದರು. ಸರ್ಕಾರ ಪರಿಹಾರ ಒದಗಿಸಿದ್ದರೆ ತಮ್ಮನ ಪುಟ್ಟ ಮಗಳ ಜೀವನಕ್ಕೆ ಆಧಾರವಾಗುತ್ತಿತ್ತು. ಈಗ ತೋಟದಲ್ಲಿ ಉದುರಿದ ಅಡಕೆ ಹೆಕ್ಕುತ್ತಿದ್ದೇವೆ. ಈ ಮಳೆಯಲ್ಲಿ ಹೊಗೆತಟ್ಟಿ ಮಾಡಿ ಒಣಗಿಸಬೇಕು ಎಂದರೂ ಮನೆಯಲ್ಲಿ ಸೌದೆ ಸಂಗ್ರಹವಿಲ್ಲ ಎಂಬ ಅಂಶದತ್ತ ಗಮನ ಸೆಳೆಯುತ್ತಾರೆ.
ಬರುವ ದಿನಗಳೇ ಕಷ್ಟ!: ಅರಲಗೋಡಿನ ರಾಜೇಶ್ ಈ ಭಾಗದ ಜನರ ಸಮಸ್ಯೆಗಳತ್ತ ಗಮನ ಹರಿಸದ ಜನಪ್ರತಿನಿಧಿಗಳತ್ತ ಆಕ್ರೋಶ ವ್ಯಕ್ತಪಡಿಸಿ, ಹಿಂದಿನಿಂದಲೂ ಈ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಒಲವು ವ್ಯಕ್ತವಾಗುತ್ತಿರುವುದರಿಂದಲೇ ರಾಜ್ಯ ಸರ್ಕಾರದ ಜನ ಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಪರಿಹಾರ ಘೋಷಣೆಯಿಂದ ಹಿಂಜರಿಯಲೂ ಇದೇ ಕಾರಣ. ಬಣ್ಣುಮನೆ, ಕೊಪ್ಪರಿಗೆ ಮೊದಲಾದ ಕಾಯಿಲೆ ಪೀಡಿತ ಪ್ರದೇಶದಲ್ಲಿ ಮೇವಿನ ತೀವ್ರ ಕೊರತೆಯಿದ್ದರೂ ಗುರುವಾರ ಒದಗಿಸಲಾದ ಮೇವು ಕೆಎಫ್‌ಡಿಗೆ ತುತ್ತಾಗದ ಆರೋಡಿ ಭಾಗಕ್ಕೆ ಹೋಗಿದೆ. ಊರಿಗೆ ಮರಳಿ ಬಂದವರಿಗೆ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ತಾಲೂಕಿನ ಶಾಸಕರು, ಸಂಸದರು ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.