ಸಾಗರ: ರಾಜ್ಯದ ಎಲ್ಲ ಸಮುದಾಯಗಳಲ್ಲಿರುವ ಮುಜರಾಯಿ ಅರ್ಚಕರು, ಖಾಸಗಿ ಪುರೋಹಿತರು, ಬಾಣಸಿಗರಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸುವಂತೆ ಶುಕ್ರವಾರ ತಾಲೂಕು ಬ್ರಾಹ್ಮಣ ಮಹಾಸಭಾದ ಶಾಸಕ ಎಚ್.ಹಾಲಪ್ಪ ಹರತಾಳು ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿತು.
ರಾಜ್ಯ ಸರ್ಕಾರ ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ 1,610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದನ್ನು ಬ್ರಾಹ್ಮಣ ಮಹಾಸಭಾ ಸ್ವಾಗತಿಸುತ್ತದೆ. ಈ ಪಟ್ಟಿಯಲ್ಲಿ ರಾಜ್ಯದ ಎಲ್ಲ ಸಮುದಾಯದಲ್ಲಿರುವ ಮುಜರಾಯಿ ಅರ್ಚಕರು, ಖಾಸಗಿ ಪುರೋಹಿತರು, ಬಾಣಸಿಗರನ್ನು ಕೂಡ ಸೇರಿಸಿ ಸಹಾಯ ಹಸ್ತ ಚಾಚಬೇಕು ಎಂದು ನಾವು ಸರ್ಕಾರವನ್ನು ವಿನಂತಿಸುತ್ತೇವೆ. ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಈ ಜನರಿಗೂ ಹೆಚ್ಚಿನ ಧನಸಹಾಯ ವಿತರಿಸಲು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಂಗಭೂಮಿ ಕಲಾವಿದರ ವಿಚಾರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯ ಪಡೆಯಲು ಜಿಲ್ಲಾವಾರು ಅರ್ಜಿ ಆಹ್ವಾನಿಸಿದಂತೆ ಇತರ ಕುಲಕಸುಬು ಆಧಾರಿತ ಕುಟುಂಬಗಳು ಆಯಾ ಇಲಾಖೆಗೆ ಅರ್ಜಿ ಸಲ್ಲಿಸುವ ಮೂಲಕವೇ ಪಟ್ಟಿ ತಯಾರಾಗುವಂತಾದರೆ ಹೆಚ್ಚು ಜನ ಅರ್ಹರಿಗೆ ಸರ್ಕಾರದ ಸಹಾಯ ಸಿಕ್ಕಂತಾಗುತ್ತದೆ. ಆ ದಿಸೆಯಲ್ಲಿ ಸಿಎಂ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮ.ಸ.ನಂಜುಂಡಸ್ವಾಮಿ, ರವೀಶ್ ಕುಮಾರ್, ಜಿ.ಕೆ.ಮುರಳಿಧರ ಹತ್ವಾರ್, ವೈ.ಮೋಹನ್, ಹಂದಿಗೋಡು ರಾಜಶೇಖರ್, ಲಕ್ಷ್ಮೀನಾರಾಯಣ್, ವಿನಾಯಕರಾವ್, ರಾಮಚಂದ್ರಭಟ್, ಸುಧೀಂದ್ರಭಟ್, ಮಾಲತೇಶ್‌ಭಟ್, ಗಣಪತಿಭಟ್, ಮಲ್ಲಿಕಾರ್ಜುನಯ್ಯ, ಚರಂತನಯ್ಯ, ಗಜಾನನ ಶಾಸ್ತ್ರಿ, ಕೃಷ್ಣಮೂರ್ತಿ ಉಡುಪ, ಪಿ.ಬಿ.ಗುರುಬಸವನ ಗೌಡ, ನಾಗರಾಜ್ ಇತರರು ಹಾಜರಿದ್ದರು.
ಹಮಾಲಿಗರಿಗೆ ಆರ್ಥಿಕ ಸಹಾಯಕ್ಕೆ ಮನವಿ: ನಗರದ ಮಾರಿಕಾಂಬಾ ಹಮಾಲರ ಸಂಘದ ವತಿಯಿಂದ ಶುಕ್ರವಾರ ಕೋವಿಡ್ -19 ಹಿನ್ನೆಲೆಯಲ್ಲಿ ದಿನನಿತ್ಯ ಹಮಾಲಿ ಮಾಡುತ್ತಿದ್ದವರ ಬದುಕು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಕುಟುಂಬ ಉಪವಾಸದಿಂದ ಇರುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಹಮಾಲರಿಗೆ ಆರ್ಥಿಕ ಸಹಕಾರದ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಂಘದ ಪ್ರಮುಖರಾದ ಲಕ್ಷ್ಮಣರಾವ್ ಬಾಪಟ್, ಶೇಟು, ಲಕ್ಷ್ಮಣ ಎಲ್.ವಿ., ಕಬೀರ್, ಪಿಂಚಾಡಿ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ತೀ.ನ.ಶ್ರೀನಿವಾಸ್, ಅಮೃತ್‌ರಾಸ್ ಇನ್ನಿತರರು ಹಾಜರಿದ್ದರು.