Advertisement

Haryana: ಕಾಂಗ್ರೆಸ್‌ ಒಳಬೇಗುದಿ ಬಿಸಿಗೆ ಅರಳಿದ ಕಮಲ

11:35 PM Oct 08, 2024 | Team Udayavani |

ಆಡಳಿತ ವಿರೋಧಿ ಅಲೆ, ರೈತ ಪ್ರತಿಭಟನೆ, ಕುಸ್ತಿ ಪಟುಗಳ ವಿವಾದ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ನಡುವೆಯೂ ಹರ್ಯಾಣದಲ್ಲಿ ಸತತ ಮೂರನೇ ಬಾರಿಗೆ ಕಮಲ ಅರಳಿದ್ದು, ಮತಗಟ್ಟೆ ಸಮೀಕ್ಷೆಗಳನ್ನೇ ಸುಳ್ಳಾಗಿಸಿ ಕಾಂಗ್ರೆಸ್‌ ಸೋಲಿನ ಕದ ತಟ್ಟಿದೆ. ಪ್ರಭಾವಿ ಜಾಟ್‌ ನಾಯಕರಿಗೆ ಮಣೆ ಹಾಕಿ, ಗ್ಯಾರಂಟಿಗಳನ್ನು ಘೋಷಿಸಿದರೂ ಮತದಾರರ ಮನವೊಲಿಸುವಲ್ಲಿ ಕಾಂಗ್ರೆಸ್‌ ವಿಫ‌ಲವಾಗಿದ್ದರೆ, ನಾಯಕರ ಒಳ ಜಗಳವೇ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿ ಗೆಲುವಾಗಿದೆ.ಗೆಲುವಿನ ಫ‌ಲ ದೊರೆವಂತೆ ಮಾಡಿದೆ.

Advertisement

ಮಾಜಿ ಸಿಎಂ ಭೂಪೇಂದ್ರ ಸಿಂಗ್‌ ಹೂಡಾ ಮತ್ತು ಕಾಂಗ್ರೆಸ್‌ನ ಪ್ರಭಾವಿ ದಲಿತ ನಾಯಕಿ ಕುಮಾರಿ ಸೆಲ್ಜಾ ನಡುವೆ ಸಿಎಂ ಗಾದಿಗೆ ಕಿತ್ತಾಟವೇ ಪಕ್ಷಕ್ಕೆ ಮೊದಲ ಪೆಟ್ಟು ಕೊಟ್ಟಿತು. ಅಭ್ಯರ್ಥಿಗಳ ಆಯ್ಕೆ, ಟಿಕೆಟ್‌ ಹಂಚಿಕೆಯಲ್ಲೂ ಹೂಡಾಗೆ ಹೈಕಮಾಂಡ್‌ ಸ್ವಾತಂತ್ರ್ಯ ನೀಡಿದ್ದು ಪಕ್ಷದ ಒಳಗೇ 2 ಬಣಗಳು ಸೃಷ್ಟಿಯಾಗುವಂತೆ ಮಾಡಿತು. ಭೂಪೇಂದ್ರ ಸಿಂಗ್‌ ಬಣವೇ ಒಂದಾದರೆ, ರಣದೀಪ್‌ ಸುರ್ಜೇವಾಲಾ, ಕುಮಾರಿ ಸೆಲ್ಜಾ, ಕಿರಣ್‌ ಚೌಧರಿ ಅವರ ಮತ್ತೂಂದು ಬಣ ಹುಟ್ಟಿಕೊಂಡಿತ್ತು. ಇದು ಮತದಾರರಿಗೆ ಭವಿಷ್ಯದ ಆಡಳಿತದ ಬಗ್ಗೆ ಸಂಶಯ ಮೂಡುವಂತೆ ಮಾಡಿತು.

ಇನ್ನೊಂದೆಡೆ, ಕಾಂಗ್ರೆಸ್‌ನೊಳಗಿನ ಕಿತ್ತಾಟ ಬಿಜೆಪಿ ಪಾಲಿಗೆ ವರವಾದವು. ಖುದ್ದು ಪ್ರಧಾನಿ ಮೋದಿ ಅವರೇ ಪ್ರಚಾರ ರ್ಯಾಲಿಗಳಲ್ಲಿ ಕಾಂಗ್ರೆಸ್‌ನ ಒಳಜಗಳವನ್ನೇ ಹೆಚ್ಚು ಹೆಚ್ಚು ಪ್ರಸ್ತಾಪಿಸಿದ್ದು, ಹರ್ಯಾಣ ಮಾತ್ರವಲ್ಲದೆ ಕರ್ನಾಟಕದ ಉದಾಹರಣೆಯನ್ನೂ ನೀಡಿದ್ದನ್ನು ಸ್ಮರಿಸಬಹುದು. ಇದಲ್ಲದೇ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಎಂದೇ ಪರಿಗಣಿಸಲ್ಪಡುವ ದಲಿತ ಮತಗಳೂ ವಿಭಜನೆಯಾದವು. ಸ್ಥಳೀಯ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು ಪಕ್ಕಕ್ಕಿಟ್ಟು ಮೈತ್ರಿ ಮಾಡಿಕೊಂಡವು. ಈ ಪಕ್ಷಗಳು ಗೆಲುವಿನಲ್ಲಿ ಹಿಂದುಳಿದರೂ ದಲಿತ ಮತಗಳ ವಿಭಜನೆಯಲ್ಲಂತೂ ಯಶಸ್ವಿಯಾಗಿದ್ದು ಕಾಂಗ್ರೆಸ್‌ಗೆ ಪೆಟ್ಟು ನೀಡಿತು.

ಜಾಟ್‌ ಮೋಹವೇ ಕಾಂಗ್ರೆಸ್‌ಗೆ ಮುಳ್ಳಾಯ್ತು!

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.26ರಿಂದ ಶೇ.28ರಷ್ಟಿರುವ ಜಾಟ್‌ ಸಮುದಾಯವು ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ, ಅಲ್ಲದೆ ಇವು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಎಂಬುದು ಎಷ್ಟು ಸತ್ಯವೋ, ಜಾಟ್‌ ಸಮುದಾಯವನ್ನು ಓಲೈಸುವ ಭರದಲ್ಲಿ ಕಾಂಗ್ರೆಸ್‌ ಜಾಟ್‌ಯೇತರರನ್ನು ಕಡೆಗಣಿಸಿ ಎಡವಿದೆ ಎಂಬುದೂ ಅಷ್ಟೇ ಸ್ಪಷ್ಟವಾಗಿದೆ. ಜಾಟ್‌ ಸಮುದಾಯದ ಪ್ರಾಬಲ್ಯವಿರುವ ಮಧ್ಯ ಹರ್ಯಾಣದ ಕಡೆ ಹೆಚ್ಚು ಗಮನ ಹರಿಸುತ್ತಾ, ದಕ್ಷಿಣ ಹರ್ಯಾಣವನ್ನು ಕಾಂಗ್ರೆಸ್‌ ನಿರ್ಲಕ್ಷಿಸಿತು. ಆದರೆ, ಬಿಜೆಪಿ ಇದೇ ಮತಬುಟ್ಟಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

Advertisement

ಚುನಾವಣೆ ಸಮೀಪವಿರುವಂತೆಯೇ ಒಬಿಸಿ ನಾಯಕ ನಯಾಬ್‌ ಸಿಂಗ್‌ ಸೈನಿ ಅವರನ್ನು ಸಿಎಂ ಆಗಿಸುವ ಮೂಲಕ ಒಬಿಸಿ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯ್ತು. ಇದಕ್ಕೆ ಬಿಜೆಪಿಯ ಸಾಂಪ್ರದಾಯಿಕ ಬ್ರಾಹ್ಮಣ ಮತಗಳೂ ಸಾಥ್‌ ನೀಡಿದವು. ಜತೆಗೆ ದಲಿತ ಮತಗಳನ್ನು ಓಲೈಸಲು ಕಾಂಗ್ರೆಸ್‌ ನಾಯಕರು ಮೀಸಲಾತಿ ಮಿತಿ ರದ್ದು, ಸಾಮಾಜಿಕ ನ್ಯಾಯ ಎಂಬ ವಿಚಾರಗಳನ್ನು ಹೆಚ್ಚು ಪ್ರಸ್ತಾಪಿಸಿದ್ದು ಕೂಡ ಜಾಟ್‌ಯೇತರ ಮತಗಳು ಬಿಜೆಪಿಯತ್ತ ತಿರುಗುವಂತೆ ಮಾಡಿದವು ಎಂದು ಹೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next