ಸಾಗರ : ಶರಾವತಿ ಹಿನ್ನೀರಿನ ಕರೂರು ಬಾರಂಗಿ ಹೋಬಳಿಯ ತುರ್ತು ಆರೋಗ್ಯ ಸೇವೆ ಸ್ಥಗಿತಗೊಂಡು 25 ದಿನ ಕಳೆದಿದ್ದು 200ಕ್ಕೂ ಹೆಚ್ಚು ಹಳ್ಳಿಯ ರೋಗಿಗಳು ಪರದಾಡುವ ಸ್ಥಿತಿ ತಲುಪಿದೆ. ಇದನ್ನು ಖಂಡಿಸಿ ಜನಪರ ಹೋರಾಟ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ತುಮರಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ವೇದಿಕೆ ಅಧ್ಯಕ್ಷ, ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ತಿಳಿಸಿದ್ದಾರೆ.
ಸೇವೆಯಲ್ಲಿ ಇದ್ದ ವಾಹನ ದುರಸ್ಥಿಗೆ ತೆರಳಿದ ಕಾರಣ ಶುಕ್ರವಾರಕ್ಕೆ 108 ಸೇವೆ ಸ್ಥಗಿತಗೊಂಡು ಒಂದು ತಿಂಗಳು ಕಳೆಯುತ್ತದೆ. ಪರ್ಯಾಯ 108 ನೀಡುವ ಮೂಲಕ ಸೇವೆ ನೀಡಬೇಕಿದ್ದ ಆರೋಗ್ಯ ಇಲಾಖೆ ಸಂತ್ರಸ್ತರ ವಿಚಾರದಲ್ಲಿ ಬೇಜವಾಬ್ದಾರಿ ತೋರಿಸುತ್ತಾ ಇದೆ ಎಂದು ಅವರು ಆರೋಪಿಸಿದ್ದಾರೆ.
ತುಮರಿಯ 108 ಸೇವೆ ಕಳೆದ ಒಂದು ವರ್ಷದಿಂದ ಸರಿಯಾಗಿ ಸೇವೆ ಸಲ್ಲಿಸುತ್ತಾ ಇಲ್ಲ. ಈ ಹಿಂದೆಯೂ ಕೂಡ 56 ದಿನಗಳ ಕಾಲ ತುರ್ತು ಸೇವೆ ಸ್ಥಗಿತವಾಗಿತ್ತು. ಆ ಹೊತ್ತಿನಲ್ಲಿ ಒಂದೇ ದಿನ ಜೋಡಿ ಸಾವು ಆಗಿತ್ತು. ಇಷ್ಟಾದರೂ ಕೂಡ ಇಲಾಖೆ ಹುಡುಗಾಟ ಆಡುತಾ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಭೌಗೋಳಿಕ ಸ್ಥಿತಿಯಲ್ಲಿ 108 ತುರ್ತು ಸೇವೆ ಅತಿ ಅಗತ್ಯವಾಗಿದೆ. ಆದರೆ ಆದ್ಯತೆ ಕೊಡಬೇಕಾದ ತುಮರಿ ಅಂಬುಲೆನ್ಸ್ ಸೇವೆ ಬಗ್ಗೆ ಪ್ರತಿಭಟನೆ ಮಾಡಿ ಆಗ್ರಹಿಸಿದರೂ ಕೂಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ : ಟೀಂ ಇಂಡಿಯಾದಲ್ಲಿ ವಿರಾಟ್ ಸ್ಥಾನವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ: ರಾಬಿನ್ ಉತ್ತಪ್ಪ
ಶುಕ್ರವಾರ ರಾಷ್ಟೀಯ ಹೆದ್ದಾರಿ ತಡೆಗೆ ಸಾಗರ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನೇತೃತ್ವ ವಹಿಸಲಿದ್ದು, ಕಾಗೋಡು ತಿಮ್ಮಪ್ಪ ಭೂ ಹೊರಾಟ ವೇದಿಕೆ, ಸಹಮತ ವೇದಿಕೆ, ಮಹಿಳಾ ಸಂಘಟನೆಗಳು, ಯುವಕ ಸಂಘಟನೆಗಳು ಪಾಲ್ಗೊಳ್ಳಲಿವೆ. ರಸ್ತೆ ತಡೆಗೆ ಮುನ್ನ ದ್ವೀಪದ ರೈತರಿಗೆ ಅರಣ್ಯ ಒತ್ತುವರಿ ನೋಟಿಸ್, ಶಿಕ್ಷಕರ ಕೊರತೆ, ಉರಲಗಲ್ಲು ಗ್ರಾಮದಲ್ಲಿ ಈಚೆ ನಡೆದ ಅರಣ್ಯ ಇಲಾಖೆ ನಡವಳಿಕೆಗೆ ಪ್ರತಿರೋಧ ಮತ್ತು ಆಸ್ಪತ್ರೆ ಮೂಲಭೂತ ಸೌಕರ್ಯ ಬಗ್ಗೆ ಮುಂದಿನ ಹೋರಾಟ ನಡೆಸುವ ಬಗ್ಗೆ ಸಮಾಲೋಚನೆ ಸಭೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.