Advertisement

ಸಾಗರ: ಗಂಡು ಕರುಗಳನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾದ ಅಪರಿಚಿತರು

04:05 PM Jul 02, 2023 | Team Udayavani |

ಸಾಗರ: ಮಿಶ್ರ ತಳಿ ದನಗಳ ಒಟ್ಟು ನಾಲ್ಕು ಎಳೆಯ ಗಂಡು ಕರುಗಳನ್ನು ಯಾರಿಗೂ ಗೊತ್ತಾಗದಂತೆ ರಸ್ತೆ ಮಧ್ಯೆ ಅನಾಥವಾಗಿ ಬಿಟ್ಟು ಪರಾರಿಯಾದ ಘಟನೆ ಶನಿವಾರ ಸಂಜೆ ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಿನಸರದ ಬನ್ನಿಕಟ್ಟೆ ವೃತ್ತದ ಬಳಿ ನಡೆದಿದೆ.

Advertisement

ಪಶುಸಂಗೋಪನೆಯಲ್ಲಿ ಲಾಭದಾಯಕವಲ್ಲದ ಹೋರಿ ಕರುಗಳು ಒಂದು ವರ್ಷದೊಳಗಿನ ಪ್ರಾಯದಾಗಿದ್ದು, ಇವುಗಳಿಂದ ಯಾವುದೇ ಫಲವಿಲ್ಲ ಎಂಬ ಕಾರಣಕ್ಕೆ ಹೀಗೆ ಬಿಟ್ಟುಹೋಗಲಾಗಿದೆ ಎಂದು ಭಾವಿಸಲಾಗಿದೆ. ಈ ಹಂತದಲ್ಲಿ ಮಾಹಿತಿ ತಿಳಿದ ಸ್ಥಳೀಯ ಯುವಕರು ಸ್ಥಳಕ್ಕೆ ಆಗಮಿಸಿ, ಕರುಗಳಿಗೆ ನೀರು, ತಿಂಡಿ ಒದಗಿಸಿದರು. ವರದಪುರದ ಶ್ರೀಧರಾಶ್ರಮದಲ್ಲಿ ಸ್ಥಳಾವಕಾಶದ ಕೊರತೆ ಇದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ತ್ಯಾಗರ್ತಿಯ ದೊಡ್ಡಿ ಮೊದಲಾದವುಗಳ ಬಗ್ಗೆ ವಿಚಾರಿಸಿದರು.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಇಂದುಧರ ವರದಹಳ್ಳಿ ಹಾಗೂ ಶ್ರೀಧರಗೌಡ, ಕರುಗಳನ್ನು ರಸ್ತೆಯಲ್ಲಿಯೇ ಅನಾಥವಾಗಿ ಬಿಟ್ಟರೆ ನಾಯಿಗಳು ದಾಳಿ ಮಾಡಬಹುದು. ಆಹಾರದ ಕೊರತೆಯೂ ಕರುಗಳಿಗೆ ಕಾಡಬಹುದು. ಈ ಹಂತದಲ್ಲಿ ಶ್ರೀಧರ ಸೇವಾ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಧರರಾವ್ ಕಾನಲೆ ಅವರ ಸೂಚನೆಯಂತೆ ಅಂತಿಮವಾಗಿ ಕುಂಟಗೋಡಿನ ಪುಣ್ಯಕೋಟಿ ಗೋ ಶಾಲೆಗೆ ಈ ಹೋರಿ ಕರುಗಳನ್ನು ತೆಗೆದುಕೊಂಡು ಹೋಗಿ ಬಿಡಲಾಯಿತು. ಕರುಗಳ ಪೋಷಣೆಗೆ ಶ್ರೀಧರಾಶ್ರಮ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ ಎಂದರು.

ಕರುಗಳ ರವಾನೆಯಲ್ಲಿ ತೀರ್ಥೇಶ್ ವರಹಳ್ಳಿ, ಸಚಿನ್ ಕರ್ಕಿಕೊಪ್ಪ, ಶ್ರೀಧರ, ಉಮೇಶ, ಸಂಕೇತ ಕರ್ಕಿಕೊಪ್ಪ, ರಾಘು ಹುಲಿಸರ, ಅಪ್ಪು ಇತರರು ಸಹಕಾರ ನೀಡಿದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next