Advertisement

ಸಾಗರ: ವೇತನ ಪಾವತಿ ಮಾಡದಿದ್ದರೆ 22 ಕ್ಕೆ ಲಾಂಚ್ ತಡೆ ಚಳವಳಿ

04:23 PM Sep 09, 2022 | Vishnudas Patil |

ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ಜನಪರ ಹೋರಾಟ ವೇದಿಕೆ, ಕಾಗೋಡು ಜನಪರ ಹೋರಾಟ ವೇದಿಕೆ, ಹೊಳೆಬಾಗಿಲು ವಾಹನ ಚಾಲಕ ಮಾಲೀಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಕರೂರು ಹೋಬಳಿ ಮತ್ತು ದ್ವೀಪದ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ಸೆಪ್ಟೆಂಬರ್ 22ರಂದು ಸಿಗಂದೂರು ಅಂಬಾರಗೋಡ್ಲು ನಡುವಿನ ಲಾಂಚ್ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಲಿವೆ.

Advertisement

ಒಳನಾಡು ಜಲಸಾರಿಗೆ ಇಲಾಖೆ ಕಳೆದ ಒಂದು ವರ್ಷದಿಂದ ಲಾಂಚ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಚಾಲಕ ವರ್ಗಕ್ಕೆ ವೇತನ ನೀಡದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಈ ಸಂಘಟನೆಗಳ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ನಂತರ ಈ ಕುರಿತು ಮಾಹಿತಿ ನೀಡಿದ ಜನಪರ ಹೋರಾಟ ವೇದಿಕೆ ಅಧ್ಯಕ್ಷ, ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ, ಹಿಂದಿನ ಬಾರಿಯೂ ಇದೇ ರೀತಿ ಆಗಿತ್ತು. ನಮ್ಮ ಪ್ರತಿಭಟನೆ, ಮಾಧ್ಯಮಗಳ ಸುದ್ದಿ ಪ್ರಚಾರದ ನಂತರ ಎಂಟು ತಿಂಗಳಷ್ಟು ವಿಳಂಬವಾಗಿ ಕಳೆದ ವರ್ಷದ ಚೌತಿ ಸಂದರ್ಭದಲ್ಲಿ ಸಂಬಳವನ್ನು ಬಿಡುಗಡೆ ಮಾಡಿದ್ದರು. ಆನಂತರ ಒಂದು ತಿಂಗಳ ಸಂಬಳವೂ ಬಿಡುಗಡೆಯಾಗದೆ ಈಗ ಒಂದು ವರ್ಷವೇ ಸಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಾರ್ಗದಲ್ಲಿ ಮೂರು ಲಾಂಚ್‌ಗಳಿವೆ. ಒಟ್ಟಾರೆ ಶರಾವತಿ ಹಿನ್ನೀರಿನಲ್ಲಿ ಆರರಿಂದ ಏಳು ಲಾಂಚ್ ಕಾರ್ಯ ನಿರ್ವಹಿಸುತ್ತಿದೆ. ಖಾಯಂ ನೌಕರರ ಸಂಖ್ಯೆ ಕಡಿಮೆಯಿದ್ದು 17 ಜನ ಅರೆಕಾಲಿಕ ಚಾಲಕರು ಪ್ರತಿದಿನದ ಚಾಲನಾ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಭಾಗದ 20 ಸಾವಿರ ಜನರ ಸುರಕ್ಷಿತ ಓಡಾಟಕ್ಕೆ ಹಾಗೂ ಲಕ್ಷಾಂತರ ಜನ ಸಿಗಂದೂರು ಭಕ್ತರ ದರ್ಶನ ಭಾಗ್ಯಕ್ಕೆ ಬೆಂಬಲವಾಗಿ ನಿಂತಿರುವ ಚಾಲಕರಿಗೆ ವೇತನ ಭಾಗ್ಯ ಸಿಗುವುದಕ್ಕೆ ಮಾತ್ರ ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರೀ 10ರಿಂದ 12 ಸಾವಿರ ರೂ. ವೇತನ ಪಡೆಯುವ ಅರೆಕಾಲಿಕ ಚಾಲಕರು ವೇತನ ಇಲ್ಲದೆ ಪರದಾಡುವಂತಾಗಿದೆ. ಅವರ ಅಳಲು ಅಧಿಕಾರಿಗಳ ಕಿವಿಗೆ ಬೀಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೇ ಸೆಪ್ಟೆಂಬರ್ 20 ರೊಳಗೆ ವೇತನದ ಬಾಕಿಯನ್ನು ಚುಕ್ತಾ ಮಾಡದಿದ್ದರೆ ಲಾಂಚ್‌ನ್ನು ದಡಕ್ಕೆ ಕಟ್ಟಿ ಹಾಕಿ ಪ್ರತಿಭಟನೆ ನಡೆಸುತ್ತೇವೆ. ಹಿರಿಯ ಅಧಿಕಾರಿಗಳು ಬಂದು ಸಮಸ್ಯೆಯನ್ನು ಬಗೆಹರಿಸಿದರೆ ಮಾತ್ರ ನಾವು ಲಾಂಚ್ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದೇವೆ ಎಂದು ಸತ್ಯನಾರಾಯಣ ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಕರವೇ ಕರೂರು ಘಟಕದ ಪ್ರಮುಖ, ಇಲ್ಲಿನ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಪಟಾಕಿ ಗಣೇಶ್, ಜಾಕಿ ಗಣೇಶ್, ಅಣ್ಣಪ್ಪ ಆಚಾರ್ ಇನ್ನಿತರರು ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next