Advertisement

ಪರಿಸರ ರಕ್ಷಣೆಯೊಂದಿಗೆ ವಿವಿ ಅಭಿವೃದ್ಧಿ ಆಗಲಿ

01:23 PM May 23, 2019 | Naveen |

ಸಾಗರ: ಮಲೆನಾಡಿನ ಅರಣ್ಯ ಸಂರಕ್ಷಣೆ, ಸುಸ್ಥಿರ ತೋಟಗಾರಿಕಾ ಅಭಿವೃದ್ಧಿ ಹಾಗೂ ಜಲ ಸಂವರ್ಧನೆ ಇವುಗಳನ್ನು ಸಮಗ್ರವಾಗಿ ಪರಿಗಣಿಸುವ ಯೋಜನೆಯನ್ನು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ರೂಪಿಸಿ ಜಾರಿ ಮಾಡಬೇಕು. ಇರುವಕ್ಕಿ ಕಾನು, ಅರಣ್ಯಗಳ ರಕ್ಷಣೆ ಜೊತೆಗೆ ವಿವಿ ಅಭಿವೃದ್ಧಿ ಆಗಬೇಕು ಎಂದು ವೃಕ್ಷಲಕ್ಷ ಆಂದೋಲನದ ಪ್ರಮುಖರ ನಿಯೋಗ ಶಿವಮೊಗ್ಗದಲ್ಲಿ ಕೃಷಿ ವಿವಿ ಉಪಕುಲಪತಿ ಡಾ| ಎಂ.ಕೆ. ನಾಯ್ಕ ಅವರನ್ನು ಭೇಟಿ ಮಾಡಿ ಆಗ್ರಹಿಸಿತು.

Advertisement

ಕೃಷಿ ವಿವಿಗೆ ಸಾಗರ ತಾಲೂಕಿನ ಆನಂದಪುರ ಬಳಿ ಇರುವಕ್ಕಿಯಲ್ಲಿ 777 ಎಕರೆ ರೆವೆನ್ಯೂ ಅರಣ್ಯ ಪ್ರದೇಶವನ್ನು ಸರ್ಕಾರ 2014-15ರಲ್ಲಿ ನೀಡಿತ್ತು. ವಿವಿ ನಿರ್ಮಾಣ ಕಾಮಗಾರಿ ಆರಂಭವಾದಾಗ ಅರಣ್ಯ ನಾಶದ ಹಿನ್ನೆಲೆಯಲ್ಲಿ ವೃಕ್ಷಲಕ್ಷ ಆಂದೋಲನ, ಸ್ಥಳೀಯ ಜನರು ಅರಣ್ಯ ನಾಶಕ್ಕೆ ವಿರೋಧ ವ್ಯಕ್ತ ಮಾಡಿದರು. ಸಾಗರದಲ್ಲಿ 2017ರಲ್ಲಿ ಸಾಗರ ಉಪ ವಿಭಾಗೀಯ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಜಂಟಿ ಸಭೆ ನಡೆದ ಸಂದರ್ಭದಲ್ಲಿ ವಿವಿ ಅರಣ್ಯ ರಕ್ಷಣೆಯ ಭರವಸೆ ನೀಡಿತ್ತು ಎಂಬುದನ್ನು ನಿಯೋಗ ವಿವಿ ಉಪ ಕುಲಪತಿಯವರಿಗೆ ನೆನಪಿಸಿತು.

ಪಶ್ಚಿಮ ಘಟ್ಟದ ಕೃಷಿ, ತೋಟಗಾರಿಕಾ ಸುಸ್ಥಿರ ಅಭಿವೃದ್ಧಿಯ ಕೇಂದ್ರವಾಗಿ ವಿವಿ ಅಭಿವೃದ್ಧಿ ಹೊಂದಬೇಕು. ಅದಕ್ಕಾಗಿ 20 ವರ್ಷಗಳ ಸಮಗ್ರ ನೀಲನಕ್ಷೆಯನ್ನು ಸಿದ್ಧಪಡಿಸಬೇಕು. ಇರುವಕ್ಕಿ ಸುತ್ತಲಿನ ಅರಣ್ಯ ಹಾಗೂ ಹಳ್ಳಿಗಳ ಪ್ರದೇಶದಲ್ಲಿ ಇರುವ ಜಲಮೂಲ, ಹಳ್ಳಗಳು, ಕೆರೆಗಳನ್ನು ಗುರುತಿಸಿ ಅವುಗಳ ಸಂವರ್ಧನೆ ಸುಸ್ಥಿರ ಕೃಷಿ ಬಳಕೆ ಕುರಿತು ವಿಶೇಷ ಕಾರ್ಯಕ್ರಮ ರೂಪಿಸಬೇಕು. ವಿವಿ ವ್ಯಾಪ್ತಿಯಲ್ಲಿ ಬರುವ ಇರುವಕ್ಕಿ ಸುತ್ತಲ 777 ಎಕರೆ ಕಾನು ಅರಣ್ಯಗಳಲ್ಲಿ 100 ಎಕರೆ ಮಾತ್ರ ಕಟ್ಟಡಗಳ ಕಾಮಗಾರಿ, ಇತರ ಉದ್ದೇಶಗಳಿಗಾಗಿ ಬಳಸಿಕೊಳ್ಳುವಂತಾಗಬೇಕು ಎಂದು ಆಗ್ರಹಿಸಲಾಯಿತು.

225 ಎಕರೆ ಪ್ರದೇಶವನ್ನು ಸಂಪೂರ್ಣ ನೈಸರ್ಗಿಕ ಜೀವ ವೈವಿಧ್ಯ ತಾಣ ಎಂದು ಗುರುತಿಸಿ ಸಂರಕ್ಷಣೆ ಮಾಡಬೇಕು. ಅಲ್ಲಿ ಯಾವ ಮಾನವ ಹಸ್ತಕ್ಷೇಪ ಇರದಂತೆ ನೋಡಿಕೊಳ್ಳಬೇಕು. ಇನ್ನುಳಿದ ಕಾನು ಅರಣ್ಯದಲ್ಲಿ 100 ಎಕರೆ ಪ್ರದೇಶವನ್ನು ಅರಣ್ಯ ಕಾಲೇಜು ಪೊನ್ನಂಪೇಟ ಇವರ ಸಂಶೋಧನಾ ಚಟುವಟಿಕೆಗಳಿಗೆ ಮೀಸಲಿಡಬೇಕು. 100 ಎಕರೆ ಕಾನು ಅರಣ್ಯ ಪ್ರದೇಶದಲ್ಲಿ ಜೈವಿಕ ಇಂಧನ ಅಭಿವೃದ್ಧಿಗಾಗಿ ಸೂಕ್ತ ಜಾತಿಯ ವಿವಿಧ ಗಿಡಗಳನ್ನು ಬೆಳೆಸಬೇಕು. ಸಾಂಬಾರು ವೃಕ್ಷಗಳ ವನ ಅಭಿವೃದ್ಧಿಗೆ 100 ಎಕರೆ ಕಾನು ಅರಣ್ಯ ಉಪಯೋಗಿಸಬೇಕು. ಅರಣ್ಯ ಕೃಷಿ ಕಾಡಿನ ಜೇನು ಅಭಿವೃದ್ಧಿ, ಅರಣ್ಯ ಉಪ ಉತ್ಪನ್ನಗಳ ಅಭಿವೃದ್ಧಿ ಮುಂತಾದ ಉದ್ದೇಶಗಳಿಗೆ ಉಳಿದ 150 ಎಕರೆ ಕಾನು ಅರಣ್ಯ ಬಳಸುವಂತೆ ಆಗಬೇಕು ಎಂದು ಒತ್ತಾಯಿಸಲಾಯಿತು.

ಭತ್ತ ಸೇರಿದಂತೆ ಧಾನ್ಯಗಳು, ದ್ವಿದಳ ಧಾನ್ಯಗಳು ಇತ್ಯಾದಿ ಬೆಳೆಗಳ ಅಭಿವೃದ್ಧಿ, ಸಂಶೋಧನೆಗೆ ಇರುವಕ್ಕಿ ಹಾಗೂ ಸುತ್ತಲಿನ ರೈತರ ತೋಟಗಳು, ಗದ್ದೆಹೊಳಗಳನ್ನು ಮಾದರಿ ಪಾತ್ಯಕ್ಷಿಕೆ ರೀತಿಯಲ್ಲಿ ಬಳಸಿಕೊಳ್ಳಬೇಕು. ಕೃಷಿ ತೋಟಗಾರಿಕಾ ವಿವಿ ರೈತರು ತಮ್ಮ ಮಂಜೂರಾಗಿರುವ ಅತಿಕ್ರಮಣ ಭೂಮಿಯಲ್ಲಿ ವೃಕ್ಷ ಕೃಷಿ ಮಾಡುವ ವಿಶೇಷ ಯೋಜನೆ ರೂಪಿಸಬೇಕು. ಇರುವಕ್ಕಿ ಸುತ್ತಲಿನ ಬಟ್ಟೆಮಲ್ಲಪ್ಪ, ರಿಪ್ಪನ್‌ಪೇಟೆ, ಆನಂದಪುರಗಳ ರೈತರ ಸಹಭಾಗಿತ್ವ ಪಡೆಯಲು ಆರಂಭದಲ್ಲೇ ಕೃಷಿ ತೋಟಗಾರಿಕೆ ಬಗ್ಗೆ ವಿಶೇಷ ತರಬೇತಿ, ಜಾಗೃತಿ, ಮಾಹಿತಿ ಮಾರ್ಗದರ್ಶನಕ್ಕೆ ಶಿಬಿರಗಳನ್ನು ಸಂಘಟಿಸಬೇಕು. ಕೃಷಿ ವಿವಿ ವ್ಯಾಪ್ತಿಯಲ್ಲಿ ಬರುವ ಪೊನ್ನಂಪೇಟೆ ಅರಣ್ಯ ಕಾಲೇಜು ಮೂಲಕ ಕಾನು ಅರಣ್ಯ ಅಧ್ಯಯನ ಯೋಜನೆಗಳನ್ನು 2019ರಲ್ಲೇ ಪ್ರಾರಂಭಿಸಬೇಕು. ಇತರ ಅರಣ್ಯ ಸಂಶೋಧನೆಗಳಿಗೆ ಅನುದಾನ ನೀಡಬೇಕು. ಮಲೆನಾಡಿನಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ರಾಸಾಯನಿಕ ಕ್ರಿಮಿನಾಶಕ ಬಳಕೆ ನಿಷೇತ ಕೀಟನಾಶಕ ಬಳಕೆಗಳನ್ನು ತಡೆಯಲು, ದುಷ್ಪರಿಣಾಮ ತಿಳಿಸಲು ಕೃಷಿ ತೋಟಗಾರಿಕಾ ವಿವಿ ವಿಶೇಷ ಜಾಗೃತಿ ಕಾರ್ಯ ಕೈಗೊಳ್ಳಬೇಕು. ಸಾವಯವ ಕೃಷಿಗೆ ದೊಡ್ಡ ಪ್ರಮಾಣದಲ್ಲಿ ಒತ್ತು ನೀಡಬೇಕು ಎಂದು ಆಗ್ರಹಿಸಲಾಯಿತು.

Advertisement

ರಿಜಿಸ್ಟ್ರಾರ್‌ ಡಾ| ನಾರಾಯಣ ಸ್ವಾಮಿ, ಸಂಶೋಧನಾ ಮುಖ್ಯಸ್ಥ ಡಾ| ಗುರುಮೂರ್ತಿ, ವೈಜ್ಞಾನಿಕ ಅಧಿಕಾರಿ ಪ್ರದೀಪ್‌, ಪೊನ್ನಂಪೇಟೆ, ಅರಣ್ಯ ಕಾಲೇಜಿನ ಡೀನ್‌ ಡಾ| ಕುಶಾಲಪ್ಪ, ಅರಣ್ಯ ಪ್ರಾಧ್ಯಾಪಕ ಡಾ| ರಾಮಕೃಷ್ಣ ಹೆಗಡೆ ಮುಂತಾದವರ ಜೊತೆ ನಿಯೋಗದಲ್ಲಿದ್ದ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಕೇಂದ್ರ ಜೈವಿಕ ಇಂಧನ ಮಂಡಳಿಯ ಸದಸ್ಯ ವೈ.ಬಿ. ರಾಮಕೃಷ್ಣ, ರಾಜ್ಯ ಔಷಧ ಮೂಲಿಕಾ ಪ್ರಾಧಿಕಾರದ ಸದಸ್ಯ ಡಾ| ಕೇಶವ ಎಚ್. ಕೊರ್ಸೆ, ಸುಸ್ಥಿರ ಇಂಧನ ತಜ್ಞ ಡಾ| ಶ್ರೀಪತಿ, ಪರಿಸರ ತಜ್ಞ ಪ್ರೊ| ಬಿ.ಎಂ. ಕುಮಾರಸ್ವಾಮಿ, ಸಮುದಾಯ ವಿಜ್ಞಾನ ಕೇಂದ್ರದ ಸಂಚಾಲಕ ಕೆ. ವೆಂಕಟೇಶ, ವೃಕ್ಷಲಕ್ಷ ಆಂದೋಲನದ ಸಂಚಾಲಕರಾದ ಬಿ.ಎಚ್. ರಾಘವೇಂದ್ರ ಹಾಗೂ ಗಣಪತಿ ಕೆ. ಬಿಸಲಕೊಪ್ಪ ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next