Advertisement

ತಿಮ್ಮಪ್ಪ, ಹಾಲಪ್ಪ ಮಧ್ಯೆ ಜಟಾಪಟಿ

06:35 AM May 10, 2018 | |

ಸಾಗರ: ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ ಹಾಗೂ ಬಿಜೆಪಿಯ ಹರತಾಳು ಹಾಲಪ್ಪ  ನಡುವೆ ನೇರ ಪೈಪೋಟಿ ಇದೆ. ಕಾಗೋಡು ತಿಮ್ಮಪ್ಪ ಗೆಲ್ಲುವುದು ಕಾಗೋಡರಿಗಿಂತ ಬೇಳೂರು ಅವರಿಗೆ ಹೆಚ್ಚು ಅವಶ್ಯ. ಒಂದು ರೀತಿಯಲ್ಲಿ ನೇರ ಸ್ಪರ್ಧೆಯಲ್ಲಿ ಕೂಡ ಹರತಾಳು ಹಾಲಪ್ಪ ಇಬ್ಬರನ್ನು ಎದುರಿಸಬೇಕಾಗಿದೆ. ಸ್ವಾರಸ್ಯ ಎಂದರೆ 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಕಾಗೋಡಿಗೆ ರನ್ನರ್‌ ಅಪ್‌ ಎನ್ನಿಸಿಕೊಂಡ ಬಿ.ಆರ್‌. ಜಯಂತ್‌ ಕೂಡ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಉಳಿದಂತೆ ಜೆಡಿಎಸ್‌ನ ಗಿರೀಶ್‌ ಗೌಡ, ಸ್ವರಾಜ್‌ ಇಂಡಿಯಾದ ಪರಮೇಶ್ವರ ದೂಗೂರು ಸೇರಿದಂತೆ ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Advertisement

1962ರಿಂದ 1985ರ ಹೊರತು ಪ್ರತಿಯೊಂದು ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುತ್ತಿರುವ ಕಾಗೋಡು ಹಾಗೂ ಸಾಗರ ಕ್ಷೇತ್ರದಲ್ಲಿ ಮತದಾನದ ಹಕ್ಕೇ ಇಲ್ಲದಿರುವ ಹರತಾಳು ಇಬ್ಬರೂ ಇಲ್ಲಿನ ಬಹುಸಂಖ್ಯಾತ ಈಡಿಗ ಸಮುದಾಯಕ್ಕೆ ಸೇರಿದವರು. ತಮ್ಮ ಹಿರಿಯ ನಾಯಕರನ್ನು ಅವರ ವೃದ್ಧಾಪ್ಯದಲ್ಲಿ ಕೈಬಿಟ್ಟರು ಎಂಬ ಕಳಂಕ ತಮ್ಮ ಸಮುದಾಯಕ್ಕೆ ಬರಬಾರದು ಅಥವಾ ಮುಂದಿನ ಹಲವು ವರ್ಷಗಳಿಗೆ ಆರಿಸಿಕೊಳ್ಳಬಹುದಾದ ನಾಯಕನ ಆಯ್ಕೆ ಎದುರು ಅವರ ಗೊಂದಲದಲ್ಲಿದ್ದಾರೆ. ಬ್ರಾಹ್ಮಣರು ಹಾಗೂ ಹಿಂದುಳಿದ ವರ್ಗದವರು ಕೂಡ ಜಯಾಪಜಯವನ್ನು ಪ್ರಭಾವ ಬೀರುವ ಪ್ರಮಾಣದಲ್ಲಿದ್ದಾರೆ. ಲಿಂಗಾಯತರು, ಜೈನರು, ಮುಸ್ಲಿಂ ಮತಗಳು ಧ್ರುವೀಕರಣ ಆದಾಗ ಫಲಿತಾಂಶ ಬದಲಾಗಿದ್ದಿದೆ.

ಕ್ಷೇತ್ರದಲ್ಲಿ ಕಾಗೋಡು ಆಡಳಿತ ವೈಖರಿ ಕುರಿತಾದ ಆಕ್ಷೇಪಗಳು ಪ್ರಮುಖವಾಗುತ್ತಿವೆ. ಅವರು ತಮ್ಮ ಸಮಾಜವಾದಿ ಪೋಷಾಕಿನ ಹೊರತಾಗಿ ತಮ್ಮ ಮಗಳನ್ನು ಕೆಪಿಸಿಸಿ ರಾಜ್ಯ ಸಮಿತಿಯೊಳಗೆ ಸೇರಿಸಿದ್ದು ಅವರದೇ ಪಕ್ಷದವರಿಗೆ ಸಮಾಧಾನ ತಂದಿಲ್ಲ. ಬೇಳೂರು ಪಕ್ಷ ಸೇರ್ಪಡೆ ಕೂಡ ಆ ಪಕ್ಷದ ದ್ವಿತೀಯ ಹಂತದ ನಾಯಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಬಿಜೆಪಿಯ ಹರತಾಳು ಹೊರಗಿನವರು ಎಂಬ ಆರೋಪ ಕೂಡ ಹೆಚ್ಚಿನ ಮನ್ನಣೆ ಪಡೆಯುತ್ತಿದೆ.

ಸಾಗರದಲ್ಲಿ ಮರಳು ಮಾಫಿಯಾ ತನ್ನದೇ ಆದ ಹಿಡಿತ ಹೊಂದಿದೆ. ಅದರ ಮೇಲೆ ಆಡಳಿತ ಪಕ್ಷದ ಪ್ರಭಾವವನ್ನು ಮೀರಿ ಬಿಜೆಪಿ ಮಾತುಕತೆ ನಡೆಸಿರುವುದರಿಂದ ಆ ಶಕ್ತಿ ಇತ್ತ ವಾಲಿದೆ ಎಂಬ ಮಾಹಿತಿ ಇದೆ. ಈವರೆಗೆ ಕಾಗೋಡು 11 ಚುನಾವಣೆಗಳನ್ನು ಎದುರಿಸಿ ಐದರಲ್ಲಿ ಗೆಲುವು ಸಾ ಧಿಸಿದ್ದಾರೆ. ಸ್ವಾರಸ್ಯ ಎಂದರೆ ನೇರ ಸ್ಪರ್ಧೆ ಏರ್ಪಟ್ಟ ಪ್ರತಿ ಸಂದರ್ಭದಲ್ಲಿ ಅವರು ಸೋಲು ಕಂಡಿದ್ದಾರೆ.

ಒಟ್ಟು ಮತದಾರರ ಸಂಖ್ಯೆ 1,89,506
ಪುರುಷರು: 94,560
ಮಹಿಳೆಯರು: 94,946

Advertisement

ಕಾಂಗ್ರೆಸ್‌, ಅಭಿವೃದ್ಧಿ ವಿಷಯವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದೆ. ನಮ್ಮ ಸರ್ಕಾರದ ಅವ ಧಿಯಲ್ಲಿ ಮಾಡಿರುವ ಜನೋಪಯೋಗಿ ಕೆಲಸಗಳು ಗೆಲುವಿಗೆ ನೆರವಾಗಲಿದೆ.
– ಕಾಗೋಡು ತಿಮ್ಮಪ್ಪ, ಕಾಂಗ್ರೆಸ್‌ ಅಭ್ಯರ್ಥಿ

ಮೂವತ್ತು ವರ್ಷಗಳ ಕಾಲ ಮಾವ, ಅಳಿಯನ ಆಡಳಿತ ನೋಡಿದ್ದೀರಿ. ಈ ಬಾರಿ ನನಗೆ ಒಂದು ಅವಕಾಶ ಕೊಟ್ಟು ನೋಡಿ. ಸಾಗರವನ್ನು ಮಾದರಿ ತಾಲೂಕನ್ನಾಗಿ ಮಾಡುತ್ತೇನೆ.
– ಹರತಾಳು ಹಾಲಪ್ಪ, ಬಿಜೆಪಿ ಅಭ್ಯರ್ಥಿ

ಕಾಂಗ್ರೆಸ್‌, ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಹೊಂದಿದೆ. ಕಾಂಗ್ರೆಸ್‌ನ ದುರಾಡಳಿತ, ಬಿಜೆಪಿ ಭ್ರಷ್ಟಾಚಾರಕ್ಕೆ ಜನ ಈ ಬಾರಿ ಮನ್ನಣೆ ನೀಡಲ್ಲ.
– ಗಿರೀಶ್‌ ಗೌಡ, ಜೆಡಿಎಸ್‌ ಅಭ್ಯರ್ಥಿ

– ಮಾ.ವೆಂ.ಸ. ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next