ತಿರುವನಂತಪುರ : ಕೇರಳದಲ್ಲಿ ಕೇಸರ-ಕೆಂಪು ಹಿಂಸೆಗೆ ಮತ್ತೂಂದು ಜೀವ ಬಲಿಯಾಗಿದೆ. ನಿನ್ನೆ ಭಾನುವಾರ ಆಳುವ ಸಿಪಿಎಂ ಗೆ ನಿಷ್ಠೆ ಹೊಂದಿರುವರೆನ್ನಲಾದ ಕೆಲವರು ಬಿಜೆಪಿ ಯುವ ಮೋರ್ಚಾ ನಾಯಕನನ್ನು ನಿನ್ನೆ ಭಾನುವಾರ ಇರಿದು ಕೊಂದಿದ್ದಾರೆ.
ತೃಶ್ಶೂರು ನಗರಕ್ಕೆ ಸಮೀಪದ ಪೊಟ್ಟೂರು ಎಂಬಲ್ಲಿನ ಕೊಕ್ಕೊಲನಗರ ದೇವಸ್ಥಾನದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾತಿನ ಜಗಳದ ಪರಾಕಾಷ್ಠೆಯಲ್ಲಿ 20ರ ಹರೆಯದ ನಿರ್ಮಲ್ ಎಂಬಾತನನ್ನು ಸಿಪಿಎಂ ಕಾರ್ಯಕರ್ತರು ಇರಿದು ಕೊಂದರು.
ಹತ ನಿರ್ಮಲ್, ನೆಟ್ಟಿಸ್ಸೇರಿ ಎಂಬಲ್ಲಿನ ನಿವಾಸಿ. ಈ ಹಲ್ಲೆಯಲ್ಲಿ ಥಾಮಸ್ ಎಂಬ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಕೇಸು ದಾಖಲಿಸಿಕೊಂಡಿರುವ ಪೊಲೀಸರು ಈ ಪ್ರಕರಣವನ್ನು ರಾಜಕೀಯ ಪ್ರೇರಿತ ಕೊಲೆಯೇ ಅಥವಾ ವೈಯಕ್ತಿಕ ದ್ವೇಷದ ಫಲವಾಗಿ ನಡೆದಿರುವ ಹತ್ಯೆಯೇ ಎಂಬ ಕೋನದಿಂದ ತನಿಖೆ ನಡೆಸುತ್ತಿದ್ದಾರೆ. ಬಿಜೆಪಿ ನೀಡಿರುವ ಹೇಳಿಕೆಯ ಪ್ರಕಾರ ನಿರ್ಮಲ್‌ನನ್ನು ಸಿಪಿಎಂ ಕಾರ್ಯಕರ್ತರು ರಾಜಕೀಯ ಕಾರಣಗಳಿಗಾಗಿ ಕೊಂದಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಅವರು “ತೃಶ್ಶೂರಿನಲ್ಲಿ ನಡೆದಿರುವ ಯುವ ಮೋರ್ಚಾ ನಾಯಕ ನಿರ್ಮಲ್‌ನ ಅಮಾನುಷ ಕೊಲೆಯಿಂದ ತೀವ್ರ ಆಘಾತವಾಗಿದೆ’ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.