ಬಸವಕಲ್ಯಾಣ: ವಿಧಾನಸಭೆ ಉಪ ಚುನಾವಣೆ ಬಹಿರಂಗ ಪ್ರಚಾರ ಗುರುವಾರ ಸಂಜೆ 5 ಗಂಟೆಗೆ ಅಂತ್ಯಗೊಂಡಿದ್ದು ಇದಕ್ಕೂ ಮುನ್ನ ಮಧ್ಯಾಹ್ನ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು. ಬಿಜೆಪಿ ಅಭ್ಯರ್ಥಿ ಶರಣು ಸಲಗರ ಬೆಂಬಲಿಗರು, ಅಭಿಮಾನಿಗಳು ಹಾಗೂ ಅಸಂಖ್ಯ ಕೇಸರಿ ಪಡೆ ಕಾರ್ಯಕರ್ತರಿಂದ ಮುಖ್ಯರಸ್ತೆ ಕಿಕ್ಕಿರಿದು ತುಂಬಿದ್ದು ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ನಗರದ ಥೇರ್ ಮೈದಾನದಿಂದ ಆರಂಭವಾದ ರೋಡ್ ಶೋ ಮಹಾತ್ಮ ಗಾಂಧಿ, ಅಂಬೇಡ್ಕರ್, ಹರಳಯ್ಯ ಹಾಗೂ ಮಡಿವಾಳ ಮಾಚಿದೇವ ವೃತ್ತಗಳ ಮೂಲಕ ಹಾದು ತ್ರಿಪುರಾಂತ ಹನುಮಾನ ದೇವಸ್ಥಾನ ಬಳಿ ಮುಕ್ತಾಯಗೊಂಡಿತು.
ಅಭ್ಯರ್ಥಿ ಪ್ರಚಾರದ ರಥದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ, ಸಂಸದರಾದ ಭಗವಂತ ಖೂಬಾ, ಉಮೇಶ ಜಾಧವ, ಅಭ್ಯರ್ಥಿ ಶರಣು ಸಲಗರ, ಮಾಜಿ ಶಾಸಕ ಎಂ.ಜಿ. ಮುಳೆ, ಜಿಪಂ ಸದಸ್ಯರಾದ
ಗುಂಡುರೆಡ್ಡಿ, ಅಣ್ಣಾರಾವ್ ರಾಠೊಡ್ ಮುಂತಾದವರು ಜನರತ್ತ ಕೈಬೀಸಿ ಶಕ್ತಿ ಪ್ರದರ್ಶಿಸಿದರು.
ಬಿಜೆಪಿ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಪದಾ ಧಿಕಾರಿಗಳು, ಕಾರ್ಯಕರ್ತರು ಹಾಗೂ ನಗರ ಸೇರಿದಂತೆ ತಾಲೂಕಿನ ಸುತ್ತ ಹಳ್ಳಿಯ ಜನರು ರೋಡ್ ಶೋದಲ್ಲಿ ಪಾಲ್ಗೊಂಡಿದ್ದರು.