Advertisement

ಸೇಫ್ಟಿ ಪಿನ್ನು

06:00 AM Jul 01, 2018 | |

ನನ್ನ ಮುತ್ತಜ್ಜಿಯ ಭಾವಚಿತ್ರವನ್ನು ಅದೇ ರೀತಿಯಲ್ಲಿ ಭಟ್ಟಿಇಳಿಸುವ ಪ್ರಯತ್ನ ಮಗ ಮಾಡಿದ್ದ. ಅವನು ಬಿಡಿಸಿದ ಗೆರೆ ಚಿತ್ರದಲ್ಲಿ ಅಜ್ಜಿಯ ಕತ್ತಿನ ಸರಗಳಲ್ಲಿನ ಸೇಫ್ಟಿಪಿನ್‌ಗಳು, ಗುಗ್ಗೆ ತೆಗೆಯುವ ಸಾಧನ, ಚಿಮಟ, ಬೀಗದ ಕೈ ಹಾಗೂ ಇನ್ನಿತರ ಪುಟಾಣಿ ಸಲಕರಣೆಗಳು ಎದ್ದು ಕಾಣುತ್ತಿದ್ದವು. ಅದನ್ನು ಗಮನಿಸುತ್ತಲೇ ನನ್ನ ಚಿತ್ತಭಿತ್ತಿಯಲ್ಲಿ ಸೇಫ್ಟಿಪಿನ್ನು ನೆನಪುಗಳು ಒಂದೊಂದಾಗಿ ಹರಡತೊಡಗಿದವು. 

Advertisement

ನಮ್ಮಜ್ಜಿಯ ರವಿಕೆಯಲ್ಲಿ ಸುಮಾರು ಪಿನ್ನುಗಳು ಸಿಕ್ಕಿಹಾಕಿಕೊಂಡಿ ರುತ್ತಿದ್ದವು. ದೊಡ್ಡದು, ಮೀಡಿಯಮ್‌, ಸಣ್ಣದು ಎಂದು ತರಾವರಿ ಗಾತ್ರದ ಪಿನ್ನುಗಳ ಗೊಂಚಲುಗಳಿಗೆ ಅಜ್ಜಿಯ ರವಿಕೆ ದಾಸ್ತಾನು ಮಳಿಗೆಯೇ ಸರಿ. ತುರ್ತು ಅಗತ್ಯಕ್ಕೆಂದು ಅಜ್ಜಿಯಲ್ಲಿ ಬಟ್ಟೆಪಿನ್ನು ಕೇಳಿದರೆ, ಮೊದಲು ಸ್ವಲ್ಪ ಪಿರಿಪಿರಿ ಮಾಡಿದರೂ ಆಮೇಲೆ ಕೊಡುತ್ತಿದ್ದರು. ಆದರೆ, ನೇರವಾಗಿ ನಮ್ಮ ಕೈಗೆ ಮಾತ್ರ ಕೊಡಲಾರರು. ಬಿಚ್ಚಿ ನೆಲಕ್ಕಿಟ್ಟು, “ತೆಗೊ’ ಎನ್ನುತ್ತಿದ್ದರು. ಅದಕ್ಕೆ ಅವರೇ ಕಾರಣವನ್ನು ಕೊಡುತ್ತಿದ್ದರು. ಪಿನ್ನು ಕೈಯಿಂದ ಕೈಗೆ ಕೊಟ್ಟರೆ ಜಗಳ ತಪ್ಪಿದ್ದಲ್ಲವಂತೆ! ನಾವು ಕೂಡ ಪಿನ್‌ನ್ನು ಒಬ್ಬರಿಂದ ಒಬ್ಬರಿಗೆ ದಾಟಿಸಲು ಅಜ್ಜಿಯ ವಿಧಾನವನ್ನೇ ಅನುಸರಿಸುತ್ತಿದ್ದೆವು.

ನಮ್ಮ ಪಕ್ಕದಮನೆ ದೇವಜ್ಜಿ ರವಿಕೆ ತೊಡುತ್ತಿರಲಿಲ್ಲ. ಆಕೆಯ ಕತ್ತಿನ ಪೋಣಿಸಿದ ಸರದಲ್ಲಿ ಅದೆಷ್ಟು ಪಿನ್ನುಗಳಿದ್ದವು ! ಉದ್ದುದ್ದಕ್ಕೆ ಸಾಲು ಸಾಲಾಗಿ ಜೋತುಬಿದ್ದ ಪದಕಗಳಂತೆ ಗೋಚರಿಸುತ್ತಿದ್ದವು. ಯಾವಾಗ ಕೇಳಿದರೂ ಆ ಅಜ್ಜಿ “ಇಲ್ಲ’ ಅನ್ನುತ್ತಿರಲಿಲ್ಲ. ಆದರೆ, ಹಿಂತಿರುಗಿಸಬೇಕು ಎಂಬ ಷರತ್ತನ್ನು ಮಾತ್ರ ವಿಧಿಸಲು ಮರೆಯುತ್ತಿರಲಿಲ್ಲ. ಯಾಕೆಂದರೆ, ಪಿನ್ನನ್ನು ಸುಮ್ಮನೆ ಕೊಡಬಾರದು, ಪಡೆದುಕೊಂಡವರು ಹಿಂತಿರುಗಿಸಲೇಬೇಕು ಎಂಬ “ಶಾಸ್ತ್ರ’ ಬೇರೆ ಇತ್ತು ! 

ನಮ್ಮ ಮುತ್ತಜ್ಜಿಯದು ಮತ್ತೂ ಒಂದು ದೊಡ್ಡ ಕಥೆ. ಅವರ ಚರ್ಮದಲ್ಲಿ ಒಂದಿಂಚೂ ಜಾಗ ಬಿಡದೆ ಸುಕ್ಕು ಬಂದಿತ್ತು. ಕೈಯಲ್ಲಿ ಬಣ್ಣ ಕಳೆದುಕೊಂಡು ಸೊಟ್ಟವಾದ ಕಂಬಿಬಳೆ. ಅದಕ್ಕೆ ಅದೆಷ್ಟೋ ಪಿನ್ನುಗಳು ಕಚ್ಚಿಕೊಂಡಿರುತ್ತಿದ್ದವು. ನಾವು ಪ್ರತಿದಿನ ಸಂಜೆ ಶಾಲೆಯಿಂದ ಬಂದೊಡನೆ ಊಟ ಬಡಿಸಿಕೊಡುವ ಮುತ್ತಜ್ಜಿ ಸಾರು ಇಲ್ಲದಿ¨ªಾಗ ಸಣ್ಣ ಅಲ್ಯುಮಿನಿಯಂ ಬಟ್ಟಲಿಗೆ ಸ್ವಲ್ಪ ಹುಣಸೆ, ಗಾಂಧಾರಿಮೆಣಸು, ಉಪ್ಪು, ಚೂರು ನೀರು ಹಾಕಿ ಕಿವುಚಿದ ಸಾರು ಮಾಡುವಾಗ ಅಜ್ಜಿಯ ಬಳೆಯಲ್ಲಿದ್ದ ಬಟ್ಟೆಪಿನ್ನುಗಳು ಬಟ್ಟಲಿಗೆ ತಗುಲಿ ಕಿಣಿ… ಕಿಣಿ… ಕಿಣಿ… ಎಂದು ನಿನಾದಿಸುತ್ತಿದ್ದವು. ಅದೊಂಥರ ಮಧುರವಾದ ನಾದ. ಈ ನಾದ ಕಿವಿಗೆ ಮಾತ್ರವಲ್ಲ, ನಾಲಗೆಗೂ ಹಿತವೇ. ನಾಲಗೆಯಲ್ಲಿ ಸಾರನ್ನು ಚಪ್ಪರಿಸುತ್ತಿದ್ದೆವು.

ಕೆಲವೊಮ್ಮೆ ಮುತ್ತಜ್ಜಿ ಗಂಜಿ ಜೊತೆ ನೆಂಜಲು ಒಂದು ವಿಶೇಷ ಚಟ್ನಿ ಮಾಡುತ್ತಿದ್ದರು. ಆ ರುಚಿಯನ್ನು ಬರಿಸಲು ನಾನೆಷ್ಟು ಸರ್ಕಸ್‌ ಮಾಡಿದರೂ ಸಾಧ್ಯವಾಗುವುದಿಲ್ಲ. ಅದು ಕೇವಲ ನೆನಪಾಗಿ ಉಳಿಯುತ್ತದೆ. ಒಲೆಯೊಳಗಿನ ಕೆಂಡದಲ್ಲಿ ಸುಟ್ಟು ತೆಗೆಯುವ ಕೊಬ್ಬರಿ ತುಂಡುಗಳು, ಈರುಳ್ಳಿ, ಒಣಮೆಣಸಿನ ಜೊತೆ ಹುಣಸೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಅಮ್ಮಿಕಲ್ಲಿನಲ್ಲಿ ಅರೆಯುತ್ತಿದ್ದಳು. ಆಗ ಅಮ್ಮಿಕಲ್ಲಿಗೆ ತಾಗಿ ಬಳೆ ಮತ್ತು ಪಿನ್ನುಗಳು ಕಿಣಿಮಿಣಿಗುಟ್ಟುವ ಶಬ್ದವೇ ಆ ಚಟ್ನಿಯ ರುಚಿಗೆ ಕಾರಣವೆಂದು ನಾನು ಭಾವಿಸಿದ್ದೆ. ಈಗಲೂ ಹಾಗೆಯೇ ನಂಬಿದ್ದೇನೆ.

Advertisement

ಮುತ್ತಜ್ಜಿಯ ಕತ್ತಿನಲ್ಲಿ ಸ್ಟೀಲ್‌ ಬಣ್ಣದ ಸರ, ಮಣಿಸರ, ಹಿತ್ತಾಳೆಯ ಸರ ಎಂದು ತರಾವರಿ ಸರಮಾಲೆಗಳಿರುತ್ತಿದ್ದವು. ಅವುಗಳ ತುಂಬ ಸೇಫ್ಟಿಪಿನ್ನು, ಗುಗ್ಗೆ ತೆಗೆಯುವ ಸಾಧನ, ಚಿಮಟ, ಬೀಗದ ಕೈ ಹೀಗೆ ಇನ್ನೇನೇನೋ ಪುಟಾಣಿ ಸಲಕರಣೆಗಳು ತೂಗುತ್ತಿದ್ದವು. ಯಾರಿಗಾದರೂ ಆಪತ್ಕಾಲಕ್ಕೆ ಒದಗಲು ಅವು ಸನ್ನದ್ಧವಾಗಿರುತ್ತಿದ್ದವು. ಆಗೊಮ್ಮೆ ನನ್ನ ತಂಗಿಯ ಕಿವಿಯೊಳಗೆ ಕಾಫಿಬೀಜ ಹೋಗಿ, ಆಕೆ ನೋವಿನಿಂದ ಕಿರುಚಲಾರಂಭಿಸಿದಾಗ ಅಕ್ಕಪಕ್ಕದವರೆಲ್ಲ ಸೇರಿ ಹರಸಾಹಸ ಮಾಡಿ ಅದನ್ನು ಹೊರಗೆ ತೆಗೆಯುವಾಗ ನೆರವಾದದ್ದು ಅಜ್ಜಿಯ ಸರದಲ್ಲಿನ ಚಿಮಟ ಹಾಗೂ ಗುಗ್ಗೆ ತೆಗೆಯುವ ಸಾಧನಗಳು ! ಎಲ್ಲೇ ಆದರೂ ಕೆಲಸ ಮುಗಿಸಿದ ಅವು ಅಷ್ಟೇ ಜಾಗರೂಕತೆಯಿಂದ ಮತ್ತೆ ಅಜ್ಜಿಯ ಕತ್ತಿನ ಸರವನ್ನು ಅಲಂಕರಿಸಿಬಿಡುತ್ತವೆ. ಹೊರಗೆಲ್ಲಾದರೂ ಕಿಣಿ ಟಣ್‌… ಕಿಣಿ ಟಣ್‌ ಎಂಬ ಸದ್ದು ಕೇಳಿಬರುತ್ತಿದೆ ಎಂದರೆ, ಆ ಹಲ್ಲಿಲ್ಲದ ಮುತ್ತಜ್ಜಿ ಸೆಗಣಿ ಸಾರಿಸಿದ ಕೋಳಿಗೂಡಿನ ಮೇಲೆ ಕಾಲನ್ನು ಇಳಿಬಿಟ್ಟು ಕುಳಿತು ಎಲೆ, ಅಡಿಕೆ ಕುಟ್ಟುತ್ತಿದ್ದು, ಆ ಕಲ್ಲಿಗೆ ಪಿನ್ನುಗಳು ತಾಗಿ  ದನಿ ಹೊಮ್ಮುತ್ತಿದೆ ಎಂದು ಎಲ್ಲರಿಗೂ ತಿಳಿಯುತ್ತಿತ್ತು. 

ಈ ಮುತ್ತಜ್ಜಿ ಮುತ್ತಜ್ಜನೊಡನೆ ಸದಾ ಪಿರಿಪಿರಿ ಮಾಡುತ್ತಲೇ ಇರುತ್ತಿದ್ದಳು. ಮಾಂಸಾಹಾರ ಸೇವಿಸಿದ ಬಳಿಕ ಅಜ್ಜ ಸೇಫ್ಟಿಪಿನ್ನನ್ನು ಲಂಬಕೋನ ಮಾಡಿ ಹಲ್ಲಿನ ಸಂದಿಗಳಲ್ಲಿ ಸೇರಿಕೊಂಡಿರುವ ಮಾಂಸದ ಚೂರುಗಳನ್ನು ಮುಖ ವಕ್ರ ಮಾಡಿಕೊಂಡು ತೆಗೆಯುವ ಸುಖ ಅನುಭವಿಸುತ್ತಿದ್ದರು. ಆ ಪರಿಗೆ ಅಜ್ಜಿ ಹೇಸಿಗೆಯಿಂದ ಅಣಕಿಸಿ ಗೊಣಗುತ್ತಿದ್ದಳು. ಅದು ಅಜ್ಜನ ಚರ್ಮಕ್ಕೂ ತಾಗುತ್ತಿರಲಿಲ್ಲ ! ಅವರು ಏನೂ ಸಂಭವಿಸುತ್ತಿಲ್ಲವೆಂಬಂತೆ ಬಾಯಿ ತೋಡುವ ಕೆಲಸವನ್ನು ಮುಂದುವರಿಸುತ್ತಿದ್ದರು. 

ಆಗೆಲ್ಲ ಅಲೆಮಾರಿ ವ್ಯಾಪಾರಿಗಳು ಬಟ್ಟೆಪಿನ್ನು, ಹೇರ್‌ಪಿನ್ನು, ಕುಂಕುಮ, ರಿಬ್ಬನು, ಚೌಲಿ, ಕುಚ್ಚು, ಕಾಡಿಗೆ ಎಂದು ಸಣ್ಣಪುಟ್ಟ ಹೆಂಗಸರ ಅಗತ್ಯ ವಸ್ತುಗಳನ್ನು ಮನೆ ಮನೆಗೆ ಹೊತ್ತು ತರುತ್ತಿದ್ದರು. ಅವರಿಂದ ಮುತ್ತಜ್ಜಿ ಗೊಂಚಲು ಗೊಂಚಲು ಪಿನ್ನುಗಳನ್ನು ಕೊಳ್ಳುತ್ತಿದ್ದರು. ಹಣ ಕೊಡುತ್ತಿರಲಿಲ್ಲ. ಬದಲಿಗೆ, ಶೇಖರಿಸಿಟ್ಟ ತಮ್ಮ ಕೂದಲಿನ ರಾಶಿಯನ್ನು ನೀಡುತ್ತಿದ್ದರು. ಅದನ್ನು ಅವರು ಒಯ್ದು ಏನು ಮಾಡುತ್ತಿದ್ದರೋ ಗೊತ್ತಿಲ್ಲ.

ಪಿನ್ನು ಇಲ್ಲದಿದ್ದರೆ ಪಡುವ ಹೆಂಗಸರ ಪಾಡಿನ ಬಗ್ಗೆ ಗಂಡಸರಿಗೇನು ಗೊತ್ತು? ಸೀರೆ ಉಡಬೇಕೆಂದರೆ ಪಿನ್ನು ಬೇಕು. ಆಕಸ್ಮಾತ್‌ ಪಿನ್ನು ಇಲ್ಲದೆ ಸೀರೆ ಉಟ್ಟು ಬಿಟ್ಟರೆ ಮುಗಿಯಿತು, ದೇವರೇ ಗತಿ ! ಅಚ್ಚುಕಟ್ಟಾಗಿ ಉಟ್ಟ ಸೀರೆಯನ್ನು ಬಿಚ್ಚುವ ತನಕ ಹಾಗೆಯೇ ಇಡುವಂತಹ ಶಕ್ತಿ ಸೇಫ್ಟಿಪಿನ್ನಿಗೆ ಮಾತ್ರ ಸಾಧ್ಯವೆಂಬುದು ಸ್ತ್ರೀಯರ ಅನುಭವಕ್ಕೆ ಸದಾ ವೇದ್ಯ. ಕೇವಲ ಸೀರೆ ಮಾತ್ರವಲ್ಲ, ಅಚಾನಕ್ಕಾಗಿ ಕಾಲಿನ ಚಪ್ಪಲಿಯೇನಾದರೂ ಕೈಕೊಟ್ಟರೆ ತತ್‌ಕ್ಷಣದ ಪರಿಹಾರ ಬಟ್ಟೆ ಪಿನ್‌ ಅಲ್ಲದೆ ಮತ್ತಿನ್ನೇನು? ಹೇಗಾದರೂ ಒಂದೆರಡು ಪಿನ್ನು ಸಿಕ್ಕಿಸಿ ಚಪ್ಪಲಿಯ ತಾತ್ಕಾಲಿಕ ಮರುಬಳಕೆ ಮಾಡಿಕೊಳ್ಳಬಹುದು. ವ್ಯಾನಿಟಿ ಬ್ಯಾಗ್‌ ಕೈ ಕಿತ್ತು ಹೋದಾಗ, ತುಂಡರಿಸಿದ ಕತ್ತಿನ ಸರ ಸೇರಿಸಲು, ಚಿಣ್ಣರ ಬಟನ್‌ ಕಿತ್ತ ಚಡ್ಡಿಯನ್ನು ನಿಲ್ಲುವಂತೆ ಮಾಡಲು, ಹುಕ್ಸ್‌ ಕಿತ್ತ ಲಂಗ ಸಿಕ್ಕಿಸಲು, ಹರಿದ ಕುಪ್ಪಸ ಒಪ್ಪವಾಗಿಡಲು, ಲಿಕ್ವಿಡ್‌ ಸೀಸಗಳ ಮುಚ್ಚಳಕ್ಕೆ ತೂತು ಕೊರೆಯಲು, ಕೆಲವೊಮ್ಮೆ ದೊಡ್ಡವರ ಒಳ ಉಡುಪುಗಳ ದೀರ್ಘಾವಧಿಯ ಬಳಕೆಗೂ ಬಟ್ಟೆಪಿನ್ನು ಸುಲಭ ಸಾಧ್ಯವಾಗಿ ಬಿಡುತ್ತದೆ. ತೊಟ್ಟು ಮುರಿದ ಗುಲಾಬಿ ಹೂವನ್ನು  ಮುಡಿಗೇರಿಸಲು ಬದಲಿ ತೊಟ್ಟಾಗಿ ಒದಗಿ ಬಂದ ಬಟ್ಟೆಪಿನ್ನುಗಳೆಷ್ಟೋ ! 

ಈ ಸೇಫ್ಟಿಪಿನ್ನು ಬಳಸಿ ಮಾಡಿದ ನನ್ನ ಟೀನೇಜ್‌ ಕುಚೇಷ್ಟೆಯೊಂದು ನೆನಪಾಗಿ ತುಟಿಯಂಚಿನಲ್ಲಿ ನಗುತರಿಸುತ್ತಲೇ ಇರುತ್ತದೆ. ಶಿಕ್ಷಕ ತರಬೇತಿಗೆಂದು ಪಟ್ಟಣದಲ್ಲಿರುವ ಪರಿಚಯದವರ ಮನೆಯಲ್ಲಿ ಕೆಲದಿನ ಆಶ್ರಯ ಪಡೆಯಬೇಕಾಯಿತು. ಆ ಮನೆಯಲ್ಲಿನ ಕೆಲಸದಾಕೆಯನ್ನು ನಾನು ಹಾಗೂ ಆ ಮನೆಯ ಅಕ್ಕ ಸದಾ ರೇಗಿಸುತ್ತಿ¨ªೆವು. ಒಮ್ಮೆ ಮಾತಿನಲ್ಲಿ ದೆವ್ವದ ವಿಚಾರ ಬಂದಾಗ, “ನಾನು ಧೈರ್ಯವಂತೆ. ದೆವ್ವಗಳಿಗೆಲ್ಲ ಹೆದರೋಲ್ಲ’ ಎಂದು ಆಕೆ ಕೊಚ್ಚಿಕೊಂಡಿದ್ದಳು. ಆಕೆ ರಾತ್ರಿ ಹಾಸಿ ಮಲಗಿದ ಬಳಿಕ ದಪ್ಪ ದಾರವೊಂದಕ್ಕೆ ದೊಡ್ಡದೊಂದು ಪಿನ್ನು ಚುಚ್ಚಿ ಆಕೆಯ ಹೊದಿಕೆಗೆ ಸಿಕ್ಕಿಸಿದೆವು. ದಾರದ ಮತ್ತೂಂದು ತುದಿಯನ್ನು ಮತ್ತೂಂದು ಕೊಠಡಿಯಲ್ಲಿ ನಾವು ಮಲಗುವ ಜಾಗದಲ್ಲಿ ಇರಿಸಿಕೊಂಡಿದ್ದೆವು. ಆಕೆಗೆ ನಿ¨ªೆ ಹತ್ತಬೇಕೆನ್ನುವಷ್ಟರಲ್ಲಿ ಆಗಾಗ ನಾಲ್ಕೈದು ಬಾರಿ ಎಳೆದೆವು. ಹೊದಿಕೆಯನ್ನು ಯಾರೋ ಎಳೆದಂತೆ ಭಾಸವಾಗಿ ಆಕೆ ಹೆದರಿಕೊಂಡು ಜೋರಾಗಿ, “ಅಕ್ಕಾ’ ಎಂದು ಕೂಗಿದಳು. ಏಳಲು ಭಯಪಟ್ಟು ಸುಮ್ಮನೆ ಮಲಗಿದಳು. ಇನ್ನು ನಮ್ಮ ಚೇಷ್ಟೆ ಮುಂದುವರೆಸಿದರೆ ಅವಳಿಗೆ ಗೊತ್ತಾಗಿಬಿಡುತ್ತದೆ ಎಂದು ಸ್ಪಲ್ಪ ಸಮಯದ ಬಳಿಕ ಸೇಫ್ಟಿ ಪಿನ್‌ನ್ನು ಮೆಲ್ಲನೆ ಬಿಚ್ಚಿ ಮಲಗಿದೆವು. ಬೆಳಗ್ಗೆ ಎದ್ದಾಗ ದೊಡ್ಡ ರಾದ್ಧಾಂತವೇ ನಡೆಯುತ್ತಿತ್ತು. ರಾತ್ರಿ ಮನೆಯಲ್ಲಿ ದೆವ್ವದ ಕಾಟವಿತ್ತಂತೆ, ಇವಳ ಹೊದಿಕೆಯನ್ನು ಮೂರು ಬಾರಿ ಎಳೆಯಿತಂತೆ- ಹೀಗೆಲ್ಲ ಅಡುಗೆ ಕೋಣೆಯಲ್ಲಿ ಅಂತೆಕಂತೆ ಸಂಭಾಷಣೆ ನಡೆಯುತ್ತಿತ್ತು. ನಮಗೆ ನಗು ತಡೆಯಲಾರದೆ ಕೋಣೆ ಸೇರಿ ಬಾಗಿಲು ಜಡಿದು ಮನಸೋ ಇಚ್ಛೆ ನಕ್ಕೆವು. ಆಕೆ ಈಗ ಎಲ್ಲಿ¨ªಾರೋ ಒಂದೂ ಗೊತ್ತಿಲ್ಲ. ಈ ಸತ್ಯ ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಾಗಲೇ ಇಲ್ಲ. ಕೆಲವೊಮ್ಮೆ ಈ ನೆನಪು ಸೇಫ್ಟಿಪಿನ್‌ನಂತೆ ಹಿತವಾಗಿ ಚುಚ್ಚುತ್ತದೆ !

ಪಿನ್ನು ಅತ್ಯಂತ ಸಣ್ಣ ವಸ್ತು. ಅದನ್ನು ವ್ಯವಸ್ಥಿತವಾಗಿಡದೆ ಅಧ್ವಾನವಾಗುವುದಿದೆ. ಲಗುಬಗೆಯಿಂದ ಸೀರೆ ಉಡಲು ತೊಡಗಿದಾಗ ಪಿನ್‌ ಸಿಗದೆ ಒದ್ದಾಡುವುದಿದೆ. ಕೆಲವೊಮ್ಮೆ ಯಾವುದಾದರೂ ಹಳೆಯ ಪಿನ್ನು ಕೈಗೆ ಸಿಗುತ್ತದೆ. ಅವಸರಕ್ಕೆ ಮಣಿಯದ ಪಿನ್ನನ್ನು ನೆಗ್ಗಿ ಸಿಕ್ಕಿಸಲಾಗದೆ ಹೇಗೇಗೋ ಬಗ್ಗಿಸಿ ಅದರ ಬಾಯಿಯನ್ನು ಬಂಧಿಸ ಹೊರಡುವುದಿದೆ. ಕೆಲವೊಮ್ಮೆ ಅದರ ಮೊನಚು ಮೈಗಿಳಿದು ಬಿಟ್ಟು “ಹಾ’ ಎಂಬ ಉದ್ಗಾರ ಹೊಮ್ಮಿಸಬೇಕಾಗುತ್ತದೆ.  ಈ ಚಿಕ್ಕ ಪದಾರ್ಥವು ಕೇವಲ ಒಂದು ಸಲಕರಣೆಯಾಗದೆ ಕೆಲವೊಮ್ಮೆ ಆತ್ಮ ರಕ್ಷಣೆಯ ಸಂಗಾತಿಯಾಗಿಬಿಡುತ್ತದೆ. ಬಸ್ಸುಗಳಲ್ಲಿ ನೂಕುನುಗ್ಗಲಿರುವಾಗ ಕೆಲವು ಸಮಯಸಾಧಕ ಕೈಗಳು ಬೇರೆಯವರ ಮೈಗಳ ಮೇಲೆ ಓಡಾಡಲಾರಂಭಿಸುತ್ತವೆ. ಆಗ ಪಿನ್ನಿನಿಂದ ಸೂಕ್ಷ್ಮವಾಗಿ ಚುಚ್ಚಿ ಪ್ರತಿರೋಧವನ್ನು ವ್ಯಕ್ತಪಡಿಸಬಹುದು. ಹಾಗಾಗಿ, ಪಿನ್ನು ಎಂದರೆ ಆತ್ಮರಕ್ಷಕ ವಸ್ತುವೂ ಹೌದು. ಹಾಗಾಗಿ, ಎಲ್ಲಿಗೆ ಹೊರಡುವಾಗಲೂ ಒಂದು ಎಕ್‌ಸ್ಟ್ರಾ ಪಿನ್ನು ಕೈಯಲ್ಲಿರಲಿ ಎಂಬುದು ನನ್ನ ಪಾಲಿಸಿ. ಆತ್ಮರಕ್ಷಣೆಗಾಗಿ! ಹೇಳಿಕೇಳಿ ಸೇಫ್ಟಿ ಪಿನ್‌ ಅಲ್ಲವೆ?

ಸೇಫ್ಟಿಪಿನ್ನು ಇಂದು ಎಲ್ಲಿಯವರೆಗೆ ರೂಪಾಂತರವಾಗಿದೆಯೆಂದರೆ ಬಣ್ಣ ಬಣ್ಣದ ಹರಳುಗಳಿಂದ ಸುಂದರವಾಗಿ ಅಲಂಕಾರಗೊಂಡು ವಿವಿಧ ಭಂಗಿಗಳಲ್ಲಿ ನಾರೀಮಣಿಯರ ಒಪ್ಪವಾದ ಸೀರೆಗಳಿಗೆ ಭೂಷಣವಾಗುತ್ತಿದೆ. ಬೇರೆ ಬೇರೆ ಬಣ್ಣಗಳು, ವಿಧ ವಿಧ ಆಕಾರಗಳಿಂದ ಬೆಳ್ಳಿ, ಬಂಗಾರ, ವಜ್ರ, ಪ್ಲಾಟಿನಂ ಎಂದು ಬೆಲೆಬಾಳುವ ಲೋಹಗಳ ಜನ್ಮ ತಳೆದು ಅವರವರ ಸಾಮರ್ಥ್ಯಕ್ಕೆ ಹಾಗೂ ಅಭಿರುಚಿಗೆ ತಕ್ಕಂತೆ ಬಳಕೆಯಾಗುತ್ತಿವೆ. ಕೊಡಗಿನ ಸುಂದರಿಯರಿಗಂತೂ ಕೊಡವ ಸೀರೆ ಉಡಲು ಬ್ರೋಚ್‌ ಬೇಕೇ ಬೇಕು. ಈ ವಿಶಿಷ್ಟ ಶೈಲಿಯಲ್ಲಿ ಉಡುವ ಸೀರೆಯ ಎಡ ತೋಳಿನ ಬಳಿ ಸೆರಗನ್ನು ಸೇರಿಸುವ ವೈವಿಧ್ಯಮಯ ಹಾಗೂ ಆಕರ್ಷಕ ಬ್ರೋಚ್‌ಗಳನ್ನು ನೋಡುವುದೇ ಒಂದು ಸಂಭ್ರಮ.  

ಹಿಂದೆ ಕಾಲಿಗೆ ಚಪ್ಪಲಿ ಹಾಕುವವರೆ ಕಡಿಮೆ. ಮಕ್ಕಳಿಗೂ ಕೂಡ ಪಾದರಕ್ಷೆ ದಕ್ಕುತ್ತಿದ್ದುದು ಅಪರೂಪವಿತ್ತು. ಚಪ್ಪಲಿಯಿಲ್ಲದ ತಮ್ಮ ಮಕ್ಕಳ ಪುಟ್ಟ ಪಾದಗಳಿಗೆ ಮುಳ್ಳು ಚುಚ್ಚಿದರೆ ತಕ್ಷಣ ಸ್ಪಂದಿಸಬೇಕಾದರೆ ಜೊತೆಗೆ ಪಿನ್‌ ಇರಲೇಬೇಕು. ಆದರೆ, ಅದನ್ನು ಮಕ್ಕಳಿಗೆ ಸಿಗದಂತೆ ಇಟ್ಟುಕೊಳ್ಳುತ್ತಿದ್ದರು. ಅಂದರೆ, ತಮ್ಮದೇ ಸರ, ಬಳೆಗಳಿಗೆ ಸಿಕ್ಕಿಸಿ ! ಅದೇನಾದರೂ ಮಕ್ಕಳಿಗೆ ಸಿಕ್ಕಿ ಚುಚ್ಚಿಸಿಕೊಂಡು ಅಪಾಯ ತಂದುಕೊಂಡಾರು ಎಂಬ ಎಚ್ಚರಿಕೆ. ಅಲ್ಲದೆ, ಪಿನ್‌ನ್ನು ಇನ್ನೊಬ್ಬರ ಕೈಗೆ ಕೊಡುವಾಗ ಅದು ತೆರೆದಿದ್ದರೆ ಚುಚ್ಚಿ ತೊಂದರೆಯಾಗುವ ಅಪಾಯವಿದೆ. ಹಾಗಾಗಿ, ಪಿನ್‌ನ್ನು ನೇರವಾಗಿ ಕೈಯಲ್ಲಿ ಕೊಡಬಾರದು ಎಂಬ ನಂಬಿಕೆ ಬೆಳೆದು ಬಂದಿರಬೇಕು. ಇದು ಒಂದು ರೀತಿಯ ವೈಜ್ಞಾನಿಕ ಪ್ರಜ್ಞೆಯೇ. 

ಹೀಗೆ ಪಿನ್ನಿನ ಕಂತೆಗಳನ್ನು ಎಳೆಎಳೆಯಾಗಿ ಹರವುತ್ತಿದ್ದಂತೆಯೇ ಮಗ ಅಂಗೈಯೊಳಗೆಯೇ ಅಂತರ್ಜಾಲ ಜಾಲಾಡಿ ಸೇಫ್ಟಿಪಿನ್‌ ಇತಿಹಾಸವನ್ನು ತೆರೆದಿಟ್ಟ. ಸರಳ ಸ್ಪ್ರಿಂಗಿನಂಥ ಈ ಸಲಕರಣೆಯ ಮತ್ತೂಂದು ಹೆಸರು ನ್ಯಾಪಿ ಪಿನ್‌ ಎಂದೂ, ಇದನ್ನು 1849ರಲ್ಲಿ ಅಮೆರಿಕದ ತಂತ್ರಜ್ಞ ವಾಲ್ಟರ್‌ ಹಂಟ್‌ ಆವಿಷ್ಕರಿಸಿದನೆಂದೂ ವಿವರಿಸಿದ. ಹೆಚ್ಚಿದ ಬೇಡಿಕೆಯಿಂದಾಗಿ ಉತ್ಪಾದನಾ ವ್ಯಾಪ್ತಿ ಎಲ್ಲೆಡೆ ವಿಸ್ತಾರವಾಯಿತೆಂದು ಹೇಳಿ ಸೇಫ್ಟಿ ಪಿನ್‌ ಕುತೂಹಲಕ್ಕೆ ವಿರಾಮ ಹಾಡಿದ.

ಸುನೀತಾ ಕುಶಾಲನಗರ

Advertisement

Udayavani is now on Telegram. Click here to join our channel and stay updated with the latest news.

Next