Advertisement

ಇದು ಮಳೆಗಾಲ: ದ್ವಿಚಕ್ರ ಸವಾರರೇ ಎಚ್ಚರ ವಹಿಸಿ

11:33 AM Jun 29, 2019 | keerthan |

ಮಣಿಪಾಲ: ಬಹುತೇಕ ದ್ವಿಚಕ್ರ ವಾಹನ ಅಪಘಾತಗಳಿಗೆ ಕಾರಣ ನಮ್ಮ ಮಿತಿ ಮೀರಿದ ವೇಗ ಮತ್ತು ಸಂಚಾರ ನಿಯಮ ಉಲ್ಲಂಘನೆ. ವೇಗಕ್ಕೆ ಕಡಿ ವಾಣ ಹಾಕಿ ನಿಯಮ ಪಾಲಿಸಿದರೆ ಪ್ರಾಣವಷ್ಟೇ ಉಳಿಯುವುದಿಲ್ಲ; ರಾಷ್ಟ್ರ ಸಂಪತ್ತು ಉಳಿಯುತ್ತದೆ. ಏಕೆಂದರೆ ಯುವ ಜನ ರಾಷ್ಟ್ರ ಸಂಪತ್ತು. ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳಿಂದ ಯುವ ಜನರ ಸಾವಿನ ಸಂಖ್ಯೆ ಏರುತ್ತಿದೆ. ಇದು ನಮ್ಮ ಚಾಲನೆಯಲ್ಲಿನ ದೋಷ ವಾಗಿರಬಹುದು ಅಥವಾ ಎದುರಿನಿಂದ ಬಂದ ವಾಹನಗಳ ಲೋಪವಾಗಿರಬಹುದು. ಅಪಘಾತ ನಡೆದ ಬಳಿಕ ನಮಗೆ ಎಚ್ಚೆತ್ತು ಕೊಳ್ಳಲು ಅವಕಾಶಗಳು ಇಲ್ಲ. ಆದರೆ ಅವಘಡಗಳು ಎದುರಾಗದಂತೆ ಮುನ್ನೆಚ್ಚರಿಕೆಯನ್ನು ವಹಿಸಿ ದರೆ ಸಂಭಾವ್ಯ ದುರಂತ ತಡೆಯ ಬಹುದಾಗಿದೆ.

Advertisement

ಈ ವರ್ಷ ಮಳೆಗಾಲ ಆರಂಭ ವಾದ ಬಳಿಕ ಮುಖ್ಯವಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ದ್ವಿ ಚಕ್ರ ವಾಹನ ಗಳ ನಡುವಿನ ಅಪಘಾತಗಳು ಹೆಚ್ಚಾಗಿವೆೆ. ಈ ತಿಂಗಳಲ್ಲಿ 17 ಬೈಕ್‌ ಸವಾರರು ಮೃತಪಟ್ಟಿದ್ದು, 37 ಮಂದಿ ಗಾಯ ಗೊಂಡಿದ್ದಾರೆ. ಸಂಭಾವ್ಯ ಶೇ. 90ರಷ್ಟು ಅಪಘಾತಗಳನ್ನು ತಡೆ ಯಲು ನಾವು ಶಕ್ತರೇ. ಅಂತಹ ಕೆಲವು ಸಲಹೆ ಗಳನ್ನು ಇಲ್ಲಿ ನೀಡಲಾಗಿದೆ.

ಈ ಜೂನ್‌ ತಿಂಗಳೊಂದರಲ್ಲೇ ನಡೆದ ಹಲವು ಅಪಘಾತಗಳಲ್ಲಿ ಕಾಲೇಜು ಮಕ್ಕಳೇ ಸಾವನ್ನಪ್ಪುತ್ತಿದ್ದಾರೆ. ಗೆಳೆಯರ ಜತೆ ಸಾಗುತ್ತಿರುವಾಗ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಹೆಲ್ಮೆಟ್‌ ಇಲ್ಲದೇ ಮಿತೀ ಮೀರಿದ ವೇಗ ಅಪಘಾತಕ್ಕೆ ಒಂದು ಕಾರಣವಾಗಿತ್ತು.

ನಾವು ಅನುಸರಿಸಲೇ ಬೇಕಾಗಿರೋದು ಏನು?
* ತೀರಾ ಹತ್ತಿರಕ್ಕೆ ಕ್ರಮಿಸಬೇಕಾಗಿದ್ದರೂ ಹೆಲ್ಮೆಟ್‌ ತಲೆಯಲ್ಲಿರಲಿ.
* ಹೆಲ್ಮೆಟ್‌ ಕೈಯಲ್ಲಿಟ್ಟು ಚಾಲನೆ ಮಾಡುವ ಶೋಕಿ ಮರೆಯಾಗಲಿ.
* ವಾಹನ/ಚಾಲನೆ ವೇಳೆ ಅತಿಯಾದ ಆತ್ಮವಿಶ್ವಾಸ ಬೇಡ.
*ವಾಹನ ಎಬಿಎಸ್‌ ತಂತ್ರಜ್ಞಾನ ಹೊಂದಿದ್ದರೂ ರಿಸ್ಕ್ ಚಾಲನೆ ಬೇಡ.
* ದೂರದೂರಿಗೆ ಪ್ರಯಾಣಿಸುವಾಗ 15 ನಿಮಿಷ ಬೇಗ ಹೊರಡಿ.
* ತಿರುವುಗಳಲ್ಲಿ ಓವರ್‌ಟೇಕ್‌ ಮಾಡುವುದನ್ನು ನಿಲ್ಲಿಸಿ.
* ವಾಹನದ ಸೈಡ್‌ ಮಿರರ್‌, ಹಾರ್ನ್ ಮತ್ತು ಇಂಡಿಕೇಟರ್‌ಗಳನ್ನು ಸರಿಯಾಗಿ ಬಳಸಿ.
* ಮಳೆಗಾಲದಲ್ಲಿ ಸ್ಕಿಡ್‌ ಆಗುವ ಸಾಧ್ಯತೇ ಹೆಚ್ಚಿದೆ, ವೇಗ ಕಡಿಮೆ ಮಾಡಿ.
* ರಸ್ತೆಯಲ್ಲಿ ಆಯಿಲ್‌ ಚೆಲ್ಲಿರುವ ಸಾಧ್ಯತೆ ಇದೆ. ತಿರುವುಗಳಲ್ಲಿ “ಶಾರ್ಪ್‌ ಟರ್ನ್’ ಬೇಡ.
* ಜತೆಯಾಗಿ ಹೋಗುವವರಿದ್ದರೆ ಸ್ಪರ್ಧೆಯ ಮನಸ್ಥಿತಿ ಬಿಟ್ಟು ಹೊರಡಿ.
* ಪ್ರತಿ ತಿರುವಿನಲ್ಲೂ ವೇಗವನ್ನು ಕಡ್ಡಾಯವಾಗಿ ಇಳಿಸಿ.
* ತಿರುವುಗಳಲ್ಲಿ ಸಣ್ಣ ಪುಟ್ಟ ಕಲ್ಲು, ಮರಳು ಇದ್ದ ಕಡೆ ನಿಧಾನವಾಗಿ ಚಲಿಸಿ.
* ಮೊಬೈಲ್‌ ಫೋನ್‌ ಬಳಸುತ್ತಾ ಚಾಲನೆ ಬೇಡ.

ನಾವು ನಿರ್ಲಕ್ಷ್ಯ ತೋರಿಸುವುದು ಎಲ್ಲಿ?
* ಸವಾರ -ಸಹ ಸವಾರರ ಹೆಲ್ಮೆಟ್‌ ರಹಿತ ಪ್ರಯಾಣ.
* ಮಿತಿ ಮೀರಿದ ವೇಗ ಮತ್ತು “ಫ್ಯಾಶನೇಬಲ್‌’ ಚಾಲನೆ.
* ಆಧುನಿಕ ಬೈಕ್‌ಗಳ ಮೇಲಿನ ಅತಿಯಾದ ಕ್ರೇಜ್‌/ಆತ್ಮವಿಶ್ವಾಸ.
* ಚಾಲನೆಯಲ್ಲಿ ಮರೆಯಾಗುತ್ತಿರುವ ಶಿಸ್ತು.
* ಅಪರಿಚಿತ ರಸ್ತೆಯಲ್ಲಿ ಹಿಡಿತವಿಲ್ಲದ ಚಾಲನೆ.
* ಚಾಲನೆಯಲ್ಲಿ ಟಿಕ್‌-ಟಾಕ್‌, ಸಾಮಾಜಿಕ ತಾಣಗಳಿಗೆ ಲೈವ್‌.

Advertisement

ತಾಂತ್ರಿಕ ಲೋಪಗಳೇನು
* ಬೈಕ್‌ ಡಿಸ್ಕ್ ಬ್ರೇಕ್‌, ಎಬಿಎಸ್‌ ತಂತ್ರಜ್ಞಾನ ಹೊಂದಿದ್ದರೆ ಮಳೆಗಾಲ ದಲ್ಲಿನ ನಿರೀಕ್ಷಿತ ಕೆಲಸ ಮಾಡಲ್ಲ.
* ಮಳೆ ಬರುತ್ತಿರುವಾಗ ಎಕ್ಸಲೇಟರ್‌ ಮೇಲಿನ ಕೈಗಳು ಜಾರುವ ಸಾಧ್ಯತೆ.
* ಮಳೆಯಲ್ಲಿ ಹೆಲ್ಮೆಟ್‌ ಮೇಲೆ ನೀರು ಹರಿದು ರಸ್ತೆ ಕಾಣಿಸದು.
* ಸ್ಕಿಡ್‌ ಆಗುವ ಸಾಧ್ಯತೆ.

ಹಿಡಿತ ತಪ್ಪಿದ ಬಳಿಕ ಏನು?
* ನಿಮ್ಮ ಹಿಡಿತ ತಪ್ಪುವ ಸೂಚನೆ ಲಭಿಸಿ ದರೆ ಗೇರ್‌ ಇಳಿಸಿ ವೇಗ ಕಡಿಮೆ ಮಾಡಲು ಪ್ರಯತ್ನಿಸಿ.
* ಮುಖಾಮುಖೀ ಅಪಘಾತ ತಪ್ಪಿಸಿ.
* ಪಾಸಿಂಗ್‌ ಲೈಟ್‌ನಿಂದ ಸೂಚನೆ ನೀಡಿ.
* ಸಾಧ್ಯವಾದರೆ ವಾಹನ ಬಿಟ್ಟು ಸುರಕ್ಷಿತ ಜಾಗಕ್ಕೆ ಹಾರಲು ಯತ್ನಿಸಿ.
* ಡಿಮ್‌ ಡಿಪ್‌ ಮಾಡಲು ಮರೆಯಬೇಡಿ.

ಇತರ ವಾಹನಗಳು ಇವನ್ನು ಪಾಲಿಸಿ
* ನಿಮ್ಮ ವೇಗ ಮಿತಿ ಮೀರದಂತೆ ನೋಡಿ ಕೊಳ್ಳಿ. ಇಂಡಿಕೇಟರ್‌ ನೀಡದೇ ಪಥ ಬದಲಾಯಿಸಬೇಡಿ.
* ವೈಪರ್‌ ಸರಿಯಾಗಿದೆಯೇ ಖಾತ್ರಿಪಡಿಸಿ. ಎದುರಿನಿಂದ ಬರುವ ವಾಹನದ ಸುರಕ್ಷೆಯೂ ನಿಮ್ಮ ಕೈಯಲ್ಲಿದೆ.
* ತಿರುವುಗಳಲ್ಲಿ ನಿಧಾನವಾಗಿ ಚಲಿಸಿ. ರಸ್ತೆ ಕೆಲವು ಸಂದರ್ಭ ನೀರಿನಿಂದ ಕಾಣದು.
*ಮಳೆಗಾಲದಲ್ಲಿ ಸಂಗೀತ ಆಲಿಸುತ್ತಾ ಡ್ರೈವ್‌ ಮಾಡುವಾಗ ಎಚ್ಚರ ಇರಲಿ. ಎದುರಿನ ವಾಹನದ ಹಾರ್ನ್ ಕೇಳಿಸದೇ ಇರಲೂಬಹುದು.

 ಉದಯವಾಣಿ ಸ್ಪೆಷಲ್‌ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next