Advertisement
ಬೆಂಗಳೂರು: ಮನೆಯಲ್ಲಿ ಹೆಂಡತಿ ಒಬ್ಬಳೆ ಇದ್ದಾಳೆ. ಆಸ್ತಿ ವಿಚಾರವಾಗಿ ಕೆಲವರು ಮನೆಗೆ ನುಗ್ಗಿ ಗಲಾಟೆ ಮಾಡುತ್ತಿದ್ದಾರೆ. ದಯಾಮಾಡಿ ನನ್ನ ಹೆಂಡತಿಯನ್ನು ಅವರಿಂದ ರಕ್ಷಿಸಿ ಎಂದು ಒಬ್ಬ ವಯೋವೃದ್ಧ ತನ್ನ ಬಳಿ ಮೊಬೈಲ್ ಇಲ್ಲದ ಕಾರಣ, ಸಮೀಪದಲ್ಲಿದ್ದ ಎಸ್‌ಒಎಸ್ ಸೇಫ್ಟಿ ಐಲ್ಯಾಂಡ್ ಬಟನ್ ಒತ್ತಿ, ಸರಿಸುಮಾರು ರಾತ್ರಿ 9 ಗಂಟೆಗೆ ಸಹಾಯ ಕೋರಿದರು.
Related Articles
Advertisement
ಏನಿದು ಸೇಫ್ಟಿ ಐಲ್ಯಾಂಡ್? ಕಾರ್ಯ ನಿರ್ವಹಣೆ ಹೇಗೆ?:
ಸಿಲಿಕಾನ್‌ಸಿಟಿ ಬೆಂಗಳೂರಿನಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ನಿತ್ಯ ಒಂದಲ್ಲ ಒಂದು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಅಂತಹ ವೇಳೆ ಏನು ಮಾಡುವುದು ಎಂದು ದಿಕ್ಕುತೋಚದಂತಾಗುತ್ತದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಇಲಾಖೆ ಎಸ್‌ಒಎಸ್ ಎಂಬ ಮಷಿನ್ ಅನ್ನು ಸ್ಥಾಪಿಸಿದ್ದು, ಇದಕ್ಕೆ “ಆಪತ್ಭಾಂಧವ’ ಎಂದು ಹೆಸರಿಡಲಾಗಿದೆ. ನೀಲವರ್ಣದ ಈ ಮಷಿನ್ ಮೇಲೆ ಟೆಲಿಫೋನ್ ಚಿತ್ರ, ಸ್ಪೀಕರ್, ಮೈಕ್ ಹಾಗೂ ಕೆಂಪು ಬಣ್ಣದ ಬಟನ್ ನೀಡಲಾಗಿದೆ. ತುರ್ತು ದ್ವೀಪದ ಸುತ್ತಲೂ ನಡೆವ ಘಟನೆಯನ್ನು ವೀಕ್ಷಿಸಲು 360 ಡಿಗ್ರಿ ಕ್ಯಾಮೆರಾ ಅಳವಡಿಸಲಾಗಿದೆ. ಅಪಾಯದ ವೇಳೆ ಕೆಂಪು ಬಟನ್ ಒತ್ತಿದಾಕ್ಷಣ ನೇರ ಕಮಾಂಡ್ ಸೆಂಟರ್‌ನಲ್ಲಿ ಅಲರಾಂ ಹೊಡೆಯುತ್ತದೆ. ಅಲರಾಂ ಹೊಡೆದ ಕೇವಲ 10 ಸೆಕೆಂಡ್‌ಗಳಲ್ಲಿ ಕಮಾಂಡ್ ಸೆಂಟರ್‌ನಲ್ಲಿನ ಸಿಬ್ಬಂದಿ ಕರೆ ಸ್ವೀಕರಿಸಿ, ಸಮಸ್ಯೆಯನ್ನು ಆಲಿಸುತ್ತಾ, ಕರೆ ಮಾಡಿದ ವ್ಯಕ್ತಿಯನ್ನು ನೇರ ಕ್ಯಾಮೆರಾದಲ್ಲಿ ವೀಕ್ಷಿಸುತ್ತಾರೆ. ಆ ವ್ಯಕ್ತಿಯು ತೊಂದರೆಗೆ ಸಿಲುಕಿರುವುದು ಕಂಡುಬಂದಲ್ಲಿ ತಕ್ಷಣ ಸಮೀಪದ ಹೊಯ್ಸಳ 112ಕ್ಕೆ ಮಾಹಿತಿ ನೀಡುತ್ತಾರೆ. ಕೇವಲ 7- 9 ನಿಮಿಷಗಳ ಒಳಗೆ ಹೊಯ್ಸಳದ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಾರೆ. ಅಲ್ಲಿಯವರೆಗೂ ಕಮಾಂಡ್ ಸೆಂಟರ್ ಸಿಬ್ಬಂದಿ ದೂರುದಾರರ ಸಂಪರ್ಕದಲ್ಲಿದ್ದು, ಧೈರ್ಯ ತುಂಬುತ್ತಾರೆ. ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಅವರ ಸಮಸ್ಯೆಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತದೆ. ಇಲ್ಲದಿದ್ದರೆ, ಹತ್ತಿರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತದೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸುತ್ತಾರೆ.
ಪಿಂಕ್ ಹೊಯ್ಸಳ ಕಾರ್ಯಾಚರಣೆ:
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕುಟುಂಬ ಕಲಹ, ಹೆಣ್ಣುಮಕ್ಕಳೊಂದಿಗಿನ ದುರ್ನಡತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ತೊಂದರೆಗಳನ್ನು ತಪ್ಪಿಸಬೇಕೆಂದು ಪೊಲೀಸ್ ಇಲಾಖೆ ಪಿಂಕ್ ಹೊಯ್ಸಳವನ್ನು ರೂಪಿಸಿತು. ಈ ರೀತಿಯ ಯಾವುದೇ ತೊಂದರೆಗಳಿಗೆ ಒಳಗಾದ ಮಹಿಳೆಯರು ತಕ್ಷಣವೇ 112ಗೆ ಕರೆ ಮಾಡಿದರೆ, ಕರೆ ಮಾಡಿದ 7ರಿಂದ 9 ನಿಮಿಷಗಳೊಳಗೆ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಪಿಂಕ್ ಹೊಯ್ಸಳ ಗಾಡಿಯು ಘಟನಾ ಸ್ಥಳಕ್ಕೆ ಆಗಮಿಸುತ್ತದೆ. ಮಹಿಳೆಯನ್ನು ಸಂರಕ್ಷಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಅಥವಾ ಸಮೀಪದ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ಜಾಗೃತಿ ಅತ್ಯಗತ್ಯ:
ತುರ್ತು ದ್ವೀಪ(ಎಸ್‌ಒಎಸ್) ಸ್ಥಾಪನೆಯಾಗಿ ಮೂರ್ನಾಲ್ಕು ತಿಂಗಳು ಕಳೆದವು. ನಿತ್ಯ 10ರಿಂದ 15 ಕರೆಗಳು ಮಾತ್ರ ಬರುತ್ತಿವೆ. ಈ ಸೌಲಭ್ಯ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮುಡಿಸುವ ಅಗತ್ಯವಿದೆ. ಪೊಲೀಸರು ಹಾಗೂ ಕೆಲ ಸಾರ್ವಜನಿಕರು ಎಸ್‌ಒಎಸ್ ಉಪಯೋಗವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವ ಮೂಲಕ ಮಾಹಿತಿ ನೀಡುತ್ತಾ, ಇದರ ಮಹತ್ವ ತಿಳಿಸಿಕೊಡಲಾಗುತ್ತಿದೆ.
ಎಲ್ಲೆಲ್ಲಿದೆ ಸೇಫ್ಟಿ ಐಲ್ಯಾಂಡ್?:
ಇಂದಿರಾನಗರದ ಸಿಎಂಎಚ್ ರಸ್ತೆ ಮೆಟ್ರೋ ಸ್ಟೇಷನ್, ಬಾಣಸವಾಡಿ, ಜ್ಞಾನಭಾರತಿ, ಚಾಮರಾಜಪೇಟೆ, ಗೋವಿಂದರಾಜ ನಗರ, ಉಪ್ಪಾರಪೇಟೆ, ಆರ್.ಟಿ. ನಗರ, ಸಂಜಯ್ ನಗರ, ಬಸವನಗುಡಿ, ಹಲಸೂರ್, ಕಬ್ಬನ್ ಪಾರ್ಕ್, ಮೈಸೂರ್ ಬ್ಯಾಂಕ್ ವೃತ್ತ ಸೇರಿದಂತೆ ನಗರದ 30 ವಿವಿಧ ಸ್ಥಳಗಳಲ್ಲಿ ಸೇಫ್ಟಿ ಲ್ಯಾಂಡ್ ಮಷಿನ್‌ಗಳನ್ನು ಸ್ಥಾಪಿಸಲಾಗಿದೆ.
ಅನುಕೂಲವೇನು?:
ಕಳ್ಳತನ, ದೌರ್ಜನ್ಯ, ಕಿರುಕುಳ, ಅಪಘಾತ ಸೇರಿದಂತೆ ಇತರ ಸಮಸ್ಯೆಗಳಿಗೆ ಸಿಲುಕಿದ ಮಹಿಳೆಯರು, ಮಕ್ಕಳು ಅಥವಾ ಸಾರ್ವಜನಿಕರಿಗೆ ನೆರವಾಗಲು ಪೊಲೀಸರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸುತ್ತಾರೆ. ಅಷ್ಟೇ ಅಲ್ಲದೇ, ಕೆಲವೊಂದು ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು, ವಾಹನ ಸವಾರರ ನಡುವಿನ ಸಣ್ಣಪುಟ್ಟ ಗಲಾಟೆಗಳು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕೈಮೀರಿ ನಡೆಯುತ್ತಿದ್ದಾಗ, ಟ್ರಾಫಿಕ್ ಪೊಲೀಸರು ಈ ತುರ್ತು ದ್ವೀಪವನ್ನು ಒಳಸುತ್ತಾರೆ.
ನಗರದಲ್ಲಿ ಸ್ಥಾಪಿಸಲಾಗಿರುವ 30 ತುರ್ತು ಐಲ್ಯಾಂಡ್‌ಗಳಲ್ಲಿ 25ರಿಂದ 27 ಸದಾ ಕಾರ್ಯಾಚರಣೆಯಲ್ಲಿರುತ್ತವೆ. ಸಾಮಾನ್ಯ ಜನಕ್ಕೆ ಇದರ ಮಹತ್ವ ತಿಳಿಸುವಲ್ಲಿ ಇಲಾಖಾ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ಅತಿಹೆಚ್ಚು ಜನ ಸೇರುವ ಹಾಗೂ ನಿರ್ಭಿಡ ಪ್ರದೇಶಗಳಲ್ಲಿ ಮುಂದಿನ ಡಿಸೆಂಬರ್ ಒಳಗಾಗಿ ಇನ್ನೂ 20 ಸೇಫ್ಟಿ ಐಲ್ಯಾಂಡ್ ಮಷಿನ್‌ಗಳನ್ನು ಸ್ಥಾಪಿಸಲಾಗುತ್ತದೆ. ಆಪತ್ತಿನಲ್ಲಿರುವವರು ಇದರ ಸದುಪಯೋಗ ಪಡೆದುಕೊಳ್ಳಿ.-ರವೀಂದ್ರ ಕೆ.ಗಡಾದಿ, ಡಿಸಿಪಿ ಕಮಾಂಡ್ ಸೆಂಟರ್.
-ಭಾರತಿ ಸಜ್ಜನ್