Advertisement

ಪ್ರತಿಷ್ಠಿತ ಹೋಟೆಲ್‌ಗ‌ಳು ಎಷ್ಟು ಸುರಕ್ಷಿತ?

02:19 PM Jul 08, 2022 | Team Udayavani |

ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಭೀಕರ ಕೊಲೆಯ ನಂತರ ಐಷಾರಾಮಿ ಹೊಟೇಲ್‌ ಗಳಲ್ಲಿನ ಭದ್ರತೆ, ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಈ ದರ್ಘ‌ಟನೆ ನಂತರ ಇಂತಹ ಪ್ರತಿಷ್ಠಿತ ಹೊಟೇಲ್‌ಗ‌ಳು ಎಷ್ಟು ಸುರಕ್ಷಿತ ಎನ್ನುವ ಭಾವನೆ ಹುಟ್ಟು ಹಾಕಿದೆ.

Advertisement

ಇದೊಂದು ಭದ್ರತೆಯ ವೈಫಲ್ಯವೋ ಅಥವಾ ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯವೋ ಎನ್ನುವ ಜಿಜ್ಞಾಸೆ ಮೂಡಿಸಿದ್ದು, ಕರ್ನಾಟಕ ರಾಜ್ಯ ಸಾರ್ವಜನಿಕ ಸುರಕ್ಷತಾ ಕಾಯ್ದೆ -2018 ಸಮರ್ಪಕ ಅನುಷ್ಠಾನವಾಗಿದೆಯಾ ಎನ್ನುವ ಪ್ರಶ್ನೆ ಮೂಡಿಸಿದೆ.

ಐಷಾರಾಮಿ ವ್ಯವಸ್ಥೆ, ಉತ್ಕೃಷ್ಟ ಆಹಾರ, ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ಕಡಿವಾಣ, ಖಾಸಗಿತನಕ್ಕೆ ಧಕ್ಕೆಯಿರಲ್ಲ ಎನ್ನುವ ಕಾರಣಕ್ಕೆ ಪ್ರತಿಷ್ಠಿತ ವ್ಯಕ್ತಿಗಳು ಇಂತಹ ಐಷಾರಾಮಿ ಹೊಟೇಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೆಚ್ಚಿನ ಭದ್ರತೆ ಇರುತ್ತದೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಗ್ರಾಹಕರಲ್ಲಿ ಇರುತ್ತದೆ. ಆದರೆ ಗ್ರಾಹಕರ ನಿರೀಕ್ಷಿಸುವ ವ್ಯವಸ್ಥೆಗಳು ಯಾವ ಪ್ರಮಾಣದಲ್ಲಿವೆ ಎಂಬುದು ಚಂದ್ರಶೇಖರ ಗುರೂಜಿ ಅವರ ಹತ್ಯೆ ನಂತರ ಉದ್ಭವಿಸಿದೆ. ಹಾಡಹಗಲೇ ಹೊಟೇಲ್‌ ಲಾಬಿಯಲ್ಲೇ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ ನಂತರ ಐಷಾರಾಮಿ ಹೊಟೇಲ್‌ಗ‌ಳಲ್ಲಿನ ಭದ್ರತೆಯ ಲೋಪಗಳ ಬಗ್ಗೆ ಚರ್ಚೆ ಹುಟ್ಟಾಕಿದೆ. ಮಹಾನಗರದಲ್ಲಿರುವ 13 ಪ್ರತಿಷ್ಠಿತ ಹಾಗೂ ಸ್ಟಾರ್‌ ಹೊಟೇಲ್‌ಗ‌ಳಲ್ಲಿ ವ್ಯವಸ್ಥೆ ಹೇಗಿದೆ ಎನ್ನುವ ಪ್ರಶ್ನೆ ಮೂಡಿಸಿದೆ.

ಸಾರ್ವಜನಿಕ ಸುರಕ್ಷತಾ ಕಾಯ್ದೆ: ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಹೋಗುವ ಸ್ಥಳಗಳಲ್ಲಿ ಸುರಕ್ಷತೆ ಕಾಪಾಡುವುದಕ್ಕಾಗಿ ಕರ್ನಾಟಕ ರಾಜ್ಯ ಸಾರ್ವಜನಿಕ ಸುರಕ್ಷತೆ ಕಾಯ್ದೆ-2018 ಜಾರಿಗೆ ತರಲಾಗಿದ್ದು, ಇದರ ಪ್ರಕಾರ ಬಹುತೇಕ ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ ಇದರೊಂದಿಗೆ ಇನ್ನಷ್ಟು ತಾಂತ್ರಿಕ ವ್ಯವಸ್ಥೆ ಹೊಂದಲು ಸೂಚಿಸಿದ್ದು, ಬಹುತೇಕ ಐಷಾರಾಮಿ ಹೊಟೇಲ್‌ಗ‌ಳಲ್ಲಿ ಇವುಗಳನ್ನು ಪಾಲನೆ ಮಾಡದಿರುವುದು ಚರ್ಚೆಗೆ ಕಾರಣವಾಗಿದೆ. ಡೋರ್‌ ಫ್ರೇಮ್‌ ಮೆಟಲ್‌ ಡಿಟೆಕ್ಟರ್‌ ಚೆಕ್‌ವೆುàಟ್‌ (ಡಿಎಫ್‌ಎಂಡಿಸಿ), ಹ್ಯಾಂಡ್‌ ಹೆಲ್ಡ್‌ ಮೆಟಲ್‌ ಡಿಟೆಕ್ಟರ್‌ (ಎಚ್‌ಎಚ್‌ಎಂಡಿ), ವೆಹಿಕಲ್‌ ಬಾಟಮ್‌ ಸರ್ಚ್‌ ಮಿರರ್‌ (ವಿಬಿಎಸ್‌ ಎಂ), ಬ್ಯಾಗೇಜ್‌ ಸ್ಕಾÂನರ್‌ ಸೇರಿದಂತೆ ಕನಿಷ್ಠ ಭದ್ರತಾ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಇನ್ನಿತರೆ ಯಾವುದೇ ಮೇಲ್ವಿಚಾರಣೆಗೆ ಸಮಿತಿ ಸೂಚಿಸಿದ್ದನ್ನು ಅಳವಡಿಸಿಕೊಳ್ಳಬೇಕು.

ಸಹಾಯಕ ಪೊಲೀಸ್‌ ಆಯುಕ್ತ (ಎಸಿಪಿ), ಪಾಲಿಕೆ ವಲಯ ಆಯುಕ್ತ, ಸಹಾಯಕ ಕಂದಾಯ ಅಧಿಕಾರಿ ನೇತೃತ್ವದಲ್ಲಿ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಹೊಣೆಗಾರಿಕೆಯಿದೆ. ವಾಣಿಜ್ಯ ಉದ್ದೇಶಕ್ಕೆ ಪರವಾನಗಿ ನೀಡುವಾಗ ಹಾಗೂ ನವೀಕರಣ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಖಾತ್ರಿ ಪಡಿಸಿಕೊಳ್ಳಬೇಕು. ಸಂಬಂಧಿಸಿದ ಠಾಣಾ ವ್ಯಾಪ್ತಿಯ ಇನ್‌ಸ್ಪೆಕ್ಟರ್‌ ಈ ಕಾಯ್ದೆ ಅನುಷ್ಠಾನ ಹಾಗೂ ಕಾರ್ಯಾಚರಣೆ ಕುರಿತು ಕಾಲಕಾಲಕ್ಕೆ ಪರಿಶೀಲಿಸಿ ವರದಿ ನೀಡಬೇಕು. ಸುರಕ್ಷತಾ ವ್ಯವಸ್ಥೆ ಅಳವಡಿಸಿಕೊಳ್ಳದವರ ಮೇಲೆ ಎಸಿಪಿ ನೊಟೀಸ್‌ ಜಾರಿ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಾಗಿದೆ. ಇಷ್ಟೆಲ್ಲಾ ಸುರಕ್ಷತಾ ವ್ಯವಸ್ಥೆಯನ್ನು ಎಷ್ಟು ಹೊಟೇಲ್‌ಗ‌ಳು ಸೇರಿದಂತೆ ಜನ ಸೇರುವ ಮಾಲ್‌, ಸಿನಿಮಾ ಮಂದಿರ ಸೇರಿದಂತೆ ಈ ಕಾಯ್ದೆಗೊಳಪಡುವ ಕಟ್ಟಡಗಳು ಅಳವಡಿಸಿಕೊಂಡಿವೆ ಎನ್ನುವ ಪ್ರಶ್ನೆ ಉದ್ಭವವಾಗಿದೆ.

Advertisement

ತೋರಿಕೆಗೆ ಭದ್ರತಾ ಸಿಬ್ಬಂದಿ: ಕಾಯ್ದೆ ಪ್ರಕಾರ ತುರ್ತು ಪರಿಸ್ಥಿತಿ ನಿಭಾಯಿಸಬಲ್ಲಂತಹ ವ್ಯಕ್ತಿಗಳನ್ನು ಭದ್ರತೆಗೆ ನಿಯೋಜಿಸಬೇಕು. ಆದರೆ ಕೆಲ ಐಷಾರಾಮಿ ಹೊಟೇಲ್‌ ಭದ್ರತಾ ಸಿಬ್ಬಂದಿ ಹೊಂದಿದ್ದರೂ ಅವರು ಬಹುತೇಕ ಕಡೆಗಳಲ್ಲಿ ಹೊಟೇಲ್‌ ಮುಂಭಾಗದಲ್ಲಿ ವಾಹನಗಳನ್ನು ನಿಲ್ಲಿಸುವುದು, ಪಾರ್ಕಿಂಗ್‌ ವ್ಯವಸ್ಥೆಗೆ ಸೀಮಿತಗೊಳಿಸಲಾಗಿದೆ. ಬರುವ ಪ್ರತಿಷ್ಠಿತ ಗ್ರಾಹಕರಿಗೆ ಭದ್ರತಾ ಸೌಲಭ್ಯ ಕಲ್ಪಿಸಬೇಕೆನ್ನುವ ಚಿಂತನೆ ಇಲ್ಲದಂತೆ ಕಾಣುತ್ತಿದೆ. ಇನ್ನೂ ಕೆಲವೆಡೆ ವಯಸ್ಸಾದವರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಿರುವುದು ಸಾಮಾನ್ಯವಾಗಿದೆ. ಇಂತಹ ಸಿಬ್ಬಂದಿಯಿಂದ ಭದ್ರತೆ ನಿರೀಕ್ಷಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುತ್ತದೆ. ಇನ್ನು ಸಿಸಿ ಕ್ಯಾಮರಾಗಳು ಇರುತ್ತವೆ. ಘಟನೋತ್ತರ ತನಿಖೆಗೆ ಇದು ಸಹಕಾರಿಯಷ್ಟೇ. ಆದರೆ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಾಧನಗಳಿಲ್ಲ.

ಲೋಪ ಪತ್ತೆ ಹಚ್ಚುವ ಕೆಲಸ: ದುರ್ಘ‌ಟನೆ ನಂತರ ಇದೀಗ 2018 ಸಾರ್ವಜನಿಕ ಸುರಕ್ಷತಾ ಕಾಯ್ದೆ ಅನುಷ್ಠಾನದ ಪ್ರಶ್ನೆ ಉದ್ಭವಾಗಿದೆ. ಸಿಸಿ ಕ್ಯಾಮರಾ ಅಳವಡಿಕೆಯೊಂದನ್ನು ಬಿಟ್ಟರೆ ಬಹುತೇಕ ಕಡೆಗಳಲ್ಲಿ ಲೋಹದ ಪತ್ತೆ ಯಂತ್ರಗಳಿಲ್ಲ. ಬ್ಯಾಗೇಜ್‌ ಸ್ಕಾÂನರ್‌ ಗಳಿಲ್ಲ. ಇವುಗಳ ಬಳಕೆಯ ಬಗ್ಗೆ ತರಬೇತಿ ಹೊಂದಿದ ಭದ್ರತಾ ಸಿಬ್ಬಂದಿ ಕೊರತೆ. ಒಂದೆರೆಡು ಹೊಟೇಲ್‌ ಗಳು ಮಾತ್ರ ಈ ಯಂತ್ರಗಳನ್ನು ಹೊಂದಿರುವುದನ್ನು ಬಿಟ್ಟರೆ ಬಹುತೇಕ ಕಡೆಗಳಲ್ಲಿ ಕಾಣಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸೇರಿದಂತೆ ಇನ್ನಿತರೆ ವಿವಿಐಪಿಗಳು ಬಂದಾಗ ಖಾಸಗಿ ಹೊಟೇಲ್‌ಗ‌ಳ ಮುಂಭಾಗದಲ್ಲಿ ಪೊಲೀಸ್‌ ಇಲಾಖೆಯಿಂದ ಸುರಕ್ಷತಾ ಸಾಮಗ್ರಿ ಅಳವಡಿಸಲಾಗುತ್ತದೆ. ದುರ್ಘ‌ಟನೆ ನಂತರ ಸುರಕ್ಷತೆ ಸಾಧನಗಳನ್ನು ಹೊಂದುವ ಕುರಿತು ಚರ್ಚೆಗಳು ಹಾಗೂ ಲೋಪ ಪತ್ತೆ ಹಚ್ಚುವ ಕೆಲಸ ಶುರುವಾಗಿದೆ.

ಈ ಎಲ್ಲಾ ಸುರಕ್ಷತಾ ಕ್ರಮ ಅಳವಡಿಕೆಯಿಂದ ಗ್ರಾಹಕರ ಕೊರತೆ ಅಥವಾ ವಿರೋಧ ಎದುರಿಸಬೇಕಾಗುತ್ತದೆ ಎನ್ನುವ ಅಳಕು ಇದೆ. ವ್ಯವಸ್ಥೆಯಿಂದ ಗ್ರಾಹಕರ ಖಾಸಗಿತನಕ್ಕೆ ಧಕ್ಕೆಯಾಗಲಿದೆ ಎನ್ನುವ ಸಬೂಬು ಇವರದ್ದಾಗಿದ್ದು, ಈಗಾಗಲೇ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳು ಸೇರಿದಂತೆ ಕೆಲವಡೆ ಈಗಾಗಲೇ ಚಾಲ್ತಿಯಲ್ಲಿವೆ ಎಂಬುದನ್ನು ಸ್ಮರಿಸಬಹುದು. ಪ್ರವೇಶ ದ್ವಾರದಲ್ಲಿ ಕನಿಷ್ಠ ಲೋಹದ ಪತ್ತೆ ಹಚ್ಚುವ ಯಂತ್ರ ಹಾಗೂ ಭದ್ರತಾ ಸಿಬ್ಬಂದಿ ತಮ್ಮ ಕಾರ್ಯ ಮಾಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ.

ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದಾಗಿ ಕಾಯ್ದೆ ಪ್ರಕಾರ ಕೆಲ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಘಟನೆ ನಡೆದ ಮೇಲೆ ಅದರ ಪತ್ತೆ, ತನಿಖೆ ನಂತರದ ಪ್ರಕ್ರಿಯೆಯಾಗಿದೆ. ಆದರೆ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಿರಲು ಈ ಸುರಕ್ಷಿತ ಕ್ರಮಗಳು ಅಗತ್ಯವಾಗಿವೆ. -ಹಿರಿಯ ಪೊಲೀಸ್‌ ಅಧಿಕಾರಿ

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next