ಕಾಪು: ಪೊಲಿಪು ಜಾಮಿಯಾ ಮಸೀದಿಯ ಆಡಳಿತಕ್ಕೊಳಪಟ್ಟಿರುವ ಕೈಪುಂಜಾಲು ದರ್ಗಾದಲ್ಲಿ ಕೈಪುಂಜಾಲು ಸಯ್ಯದ್ ಅರಭಿ ವಲಿಯುಲ್ಲಾರವರ ದರ್ಗಾದಲ್ಲಿ ಬುಧವಾರ ವಾರ್ಷಿಕ ಸಫರ್ ಝಿಯಾರತ್ ಸಂಪನ್ನಗೊಂಡಿತು.
ಮುಸ್ಲಿಮ್, ಹಿಂದೂ ಮತ್ತು ಕ್ರೈಸ್ತ ಬಾಂಧವರು ಸೌಹಾರ್ದತೆ ಮತ್ತು ಭಕ್ತಿಭಾವದಿಂದ ಭಾಗವಹಿಸುವ ಸಫರ್ ಝಿಯಾರತ್ ಸಮಾರಂಭವು ಸರಕಾರ ಸೂಚಿಸಿರುವ ಕೋವಿಡ್ 19 ಮಾನದಂಡಗಳ ಅನುಕರಣೆಯೊಂದಿಗೆ ಸರಳವಾಗಿ ನಡೆಯಿತು. ವಾರ್ಷಿಕ ಝಿಯಾರತ್ ಸಂದರ್ಭದಲ್ಲಿ ದರ್ಗಾಕ್ಕೆ ಭೇಟಿ ನೀಡಿದ ಎಲ್ಲರಿಗೂ ಪ್ರಸಾದ ರೂಪದಲ್ಲಿ ಗಂಜಿ, ಮಂಡಕ್ಕಿ, ಖರ್ಜೂರ ಸಹಿತ ವಿವಿಧ ವಸ್ತುಗಳನ್ನು ವಿತರಿಸಲಾಯಿತು.
150 ವರ್ಷಗಳಷ್ಟು ಪುರಾತನ ದರ್ಗಾ : ನೂರಾರು ವರ್ಷಗಳಷ್ಟು ಪುರಾತನವಾದ ಇತಿಹಾಸವನ್ನು ಹೊಂದಿರುವ ಕೈಪುಂಜಾಲು ಸಯ್ಯಿದ್ ಅರಭಿ ವಲಿಯುಲ್ಲಾ ಅವರ ದರ್ಗಾವು ಹಿಂದೂ-ಮುಸ್ಲಿಂ ಸಮುದಾಯದ ಜನರ ಭಾವೈಕ್ಯದ ಕೇಂದ್ರವೂ ಆಗಿದೆ. ಸ್ಥಳೀಯ ಮೊಗವೀರ ಕುಟುಂಬವೊಂದಕ್ಕೆ ಸೇರಿದ ಜಮೀನಿನಲ್ಲಿ ದರ್ಗಾ ಇದ್ದು ಇಲ್ಲಿನ ವಾರ್ಷಿಕ ಉರೂಸ್ ಸಮಾರಂಭದಲ್ಲಿ ಹಿಂದೂಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಹರಕೆ ಸಲ್ಲಿಸುತ್ತಾರೆ. ಇಲ್ಲಿನ ದರ್ಗಾದ ಒಳಗೆ ಪ್ರತೀ ದಿನ ಮೊಗವೀರ ಪ್ರತಿನಿಽಗಳೇ ದೀಪ ಹಚ್ಚುವುದು ಇಲ್ಲಿನ ವೈಶಿಷ್ಟ ತೆಯಾಗಿದೆ.
ವಾರ್ಷಿಕ ಸಫರ್ ಝಿಯಾರತ್ ಸಮಾರಂಭದಲ್ಲಿ ಮುಸಲ್ಮಾನರು ಮಾತ್ರವಲ್ಲದೇ ಹಿಂದೂಗಳು ಮತ್ತು ಕ್ರೈಸ್ತರು ಪಾಲ್ಗೊಳ್ಳುತ್ತಿದ್ದು ಬೆಲ್ಲ, ಅಕ್ಕಿ, ಮಂಡಕ್ಕಿ, ಮಲ್ಲಿಗೆ ಮತ್ತು ಖರ್ಜೂರ ಇಲ್ಲಿನ ವಿಶೇಷ ಹರಕೆಗಳಾಗಿವೆ. ಇಲ್ಲಿ ಝಿಯಾರತ್‌ನಂದು ನೀಡಲಾಗುವುದು ಗಂಜಿ (ಪಾಯಸ) ವಿಶೇಷ ಪ್ರಸಾದವಾಗಿದ್ದು ಇದನ್ನು ಸಿದ್ಧಪಡಿಸಲು ಸ್ಥಳೀಯ ಮೊಗವೀರ ಸಮುದಾಯವರು ಕೂಡಾ ಸಾಮಾಗ್ರಿಗಳನ್ನು ನೀಡುತ್ತಾರೆ.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಹಿತ ವಿವಿಧ ಗಣ್ಯರು ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕಾಪು – ಪೊಲಿಪು ಜಾಮಿಯಾ ಮಸೀದಿಯ ಅಧ್ಯಕ್ಷ ಎಚ್. ಅಬ್ದುಲ್ಲ, ಉಪಾಧ್ಯಕ್ಷ ಹಾಜಿ ರಜಬ್ ಮೊಯ್ದಿನ್, ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್, ಇಲ್ಯಾಸ್ ಅಬೂಬಕ್ಕರ್, ಶೇಖ್ ನಝೀರ್, ಇಮ್ತಿಯಾಝ್ ಅಹಮದ್, ಅಮೀರ್ ಹಂಝ ಹಾಗೂ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.