ನ.12 ರಾಷ್ಟ್ರೀಯ ಪಕ್ಷಿ ದಿನವನ್ನಾಗಿ ಆಚರಿಸಲಾಗುತ್ತದೆ. ಜೀವ ಸಂಕುಲದ ರಕ್ಷಣೆಗೆ ದೇಶದಾದ್ಯಂತ ಲಕ್ಷ ಲಕ್ಷ ಮಂದಿ ತಮ್ಮದೇ ರೀತಿಯಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಇಂತಹ ಒಂದು ಅಳಿಲು ಸೇವೆಯನ್ನು,ಹಿಂಡು ಹಿಂಡಾಗಿ ಬರುವ ಪಾರಿವಾಳಗಳಿಗೆ ಕಾಳನ್ನು ಹಾಕುವ ಮೂಲಕ ಕೃಷ್ಣಾಪುರದ ಸಾದಿಕ್ ಮರ್ವ ಮಾಡುತ್ತಿದ್ದಾರೆ.
ಕೃಷ್ಣಾಪುರದ ಲಂಡನ್ ಪಾರ್ಕ್‍ಗೆ ನಿತ್ಯ ವಾಕಿಂಗ್ ಬರುವ ಸಂದರ್ಭದಲ್ಲಿ ಸಾದಿಕ್ ಅವರು ಕೆಲವೊಂದು ಪಾರಿವಾಳಗಳು ಕಾಳು ಹೆಕ್ಕುತ್ತಾ ಇರುವುದನ್ನು ಗಮನಿಸುತ್ತಾರೆ. ಇದನ್ನು ನೋಡಿದ ಬಳಿಕ ಪಾರಿವಾಳಗಳಿಗೆ ಸಾದಿಕ್ ಅವರು ಕಾಳು ಹಾಕಲು ಆರಂಭಿಸುತ್ತಾರೆ. ದಿನದಿಂದ ದಿನಕ್ಕೆ ಪಾರಿವಾಳಗಳ ಸಂಖ್ಯೆ ನೂರಾರು ಆಗುತ್ತಿದ್ದಂತೆ ನಿತ್ಯ ಐದಾರು ಕೆ.ಜಿ ಕಾಳನ್ನು ಹಾಕಲು ಸಾದಿಕ್ ಆರಂಭಿಸುತ್ತಾರೆ.
ವೃತ್ತಿಯಲ್ಲಿ ಸ್ವ ಉದ್ಯಮಿಯಾಗಿರುವ ಇವರು ಈ ಮೂಲಕ ಪಕ್ಷಿ ಪ್ರಪಂಚದ ಸೇವೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಸೂರ್ಯೋದಯದ ಹೊತ್ತಿಗೆ ಲಂಡನ್ ಪಾರ್ಕ್‍ನಲ್ಲಿ ಸಾದಿಕ್ ಬರುವಿಕೆಗಾಗಿ ಕಾಯುವ ಪಾರಿವಾಳದ ಹಿಂಡನ್ನು ನೋಡುವುದು ಹಾಗೂ ಆಕಾಶದೆತ್ತರಕ್ಕೆ ಒಂದೇ ಬಾರಿಗೆ ಹಾರಿ ಸುತ್ತು ಬರುವ ಇವುಗಳ ಅಂದ ಕಾಣುವುದೇ ಕಣ್ಣಿಗೆ ಹಬ್ಬ.
ಕೆಲವರು ಕಾಳು ಹೆಕ್ಕಲು ಬರುವ ಪಾರಿವಾಳಗಳನ್ನು ಹಿಡಿಯಲು ಹೊಂಚು ಹಾಕಿ ಕುಳಿತುಕೊಳ್ಳುವುದು ಕೂಡ ಇದೆ. ಆದರೆ ಇದಕ್ಕೆ ಆಸ್ಪದ ಕೊಡದೆ ಪಕ್ಷಿ ಸಂಕುಲವನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರೂ ಮಾಡುವಂತಾಗಬೇಕು ಎನ್ನುವುದು ಸಾದಿಕ್ ಅವರ ಮಾತು.
ನಿತ್ಯ ನೂರಾರು ಪಾರಿವಾಳಗಳು ಈ ಹಿಂದೆ ಬೇರೆಡೆ ಹಾರಾಡುತ್ತಿದ್ದವು. ಅವುಗಳಿಗೆ ಕಾಳು ಸಿಕ್ಕದೇ ಹೋದಾಗ ಒಂದೆರಡು ಬಾರಿ ಲಂಡನ್ ಪಾರ್ಕ್ ಬಳಿ ಸುಳಿದಾಡಿ ಹೋಗುತ್ತಿತ್ತು. ಇದನ್ನು ವಾಕಿಂಗ್‍ಗೆ ಬರುವಾಗ ಗಮನಿಸಿ ನಿತ್ಯ ಕಾಳು ಹಾಕಲು ಆರಂಭಿಸಿದೆ. ಕೆ.ಜಿ ಗಟ್ಟಲೆ ಕಾಳು ಬೇಕಾಗುತ್ತದೆ. ಶಾಂತಿ ದೂತರಾಗಿರುವ ಪಾರಿವಾಳಗಳು ಗುಂಪು ಗುಂಪಾಗಿ ಬರುವುದನ್ನು ನೋಡುವಾಗ ಸಂತಸವಾಗುತ್ತದೆ ಎನ್ನುತ್ತಾರೆ ಸಾದಿಕ್ ಮರ್ವ ಕೃಷ್ಣಾಪುರ.