Advertisement
ಆರೋಪಿಯು ಮಹಿಳೆಯಾಗಿದ್ದು, 9 ವರ್ಷಗಳಿಂದ ಜೈಲಲ್ಲಿದ್ದಾರೆ. ಜತೆಗೆ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮೇಲ್ನೋಟಕ್ಕೆ ಸಾಧ್ವಿಯ ಮೇಲಿನ ಯಾವುದೇ ಆರೋಪ ಸಾಬೀತಾಗದ ಕಾರಣ ಅವರಿಗೆ ಜಾಮೀನು ನೀಡುತ್ತಿದ್ದೇವೆ ಎಂದಿತು. ಜತೆಗೆ, ಆದೇಶಕ್ಕೆ ತಡೆಯಾಜ್ಞೆ ತರುವಂತೆ ಸಂತ್ರಸ್ತರು ಮಾಡಿದ ಮನವಿ ಯನ್ನೂ ನ್ಯಾ| ರಂಜಿತ್ ಮೋರೆ ಮತ್ತು ಶಾಲಿನಿ ಫನ್ಸಾಲ್ಕರ್ ಜೋಷಿ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿತು. ಇತ್ತೀಚೆಗಷ್ಟೇ ನ್ಯಾಯಾಲಯಕ್ಕೆ ವರದಿ ನೀಡಿದ್ದ ಎನ್‌ಐಎ, ಸಾಧ್ವಿಗೆ ಕ್ಲೀನ್‌ಚಿಟ್ ನೀಡಿತ್ತು. ಅಲ್ಲದೆ, ಅವರಿಗೆ ಜಾಮೀನು ನೀಡುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದಿತ್ತು.
ಆರೋಪಿ ಪುರೋಹಿತ್ ಹಿಂದೂ ರಾಷ್ಟ್ರಕ್ಕೆಂದೇ ಪ್ರತ್ಯೇಕ ಸಂವಿಧಾನ ರೂಪಿಸಿದ್ದು, ಪ್ರತ್ಯೇಕ ಕೇಸರಿ ಬಣ್ಣದ ಧ್ವಜವನ್ನೂ ಸಿದ್ಧಪಡಿಸಿದ್ದರು. ಜತೆಗೆ, ಹಿಂದೂಗಳ ಮೇಲೆ ಮುಸ್ಲಿಮರು ಮಾಡಿರುವ ದೌರ್ಜನ್ಯಗಳಿಗೆ ಪ್ರತೀಕಾರ ತೀರಿಸುವುದಾಗಿ ಹೇಳಿದ್ದರು ಎಂದು ಎನ್‌ಐಎ ಆರೋಪಪಟ್ಟಿ ಹೇಳಿತ್ತು. ಜತೆಗೆ, ಪುರೋಹಿತ್ ಆಡಿರುವ ಮಾತುಗಳ ಆಡಿಯೋ, ವಿಡಿಯೋ ದಾಖಲೆಗಳು, ಕರೆಗಳ ಮಾಹಿತಿ, ಸಾಕ್ಷ್ಯಗಳ ಹೇಳಿಕೆಗಳು ತಮ್ಮ ಬಳಿಯಿದ್ದು, ಅವರಿಗೆ ಜಾಮೀನು ನೀಡಬಾರದು ಎಂದು ಎನ್‌ಐಎ ಕೋರಿತ್ತು. ಮಂಗಳವಾರದ ವಿಚಾರಣೆ ವೇಳೆ, ‘ಬಲಪಂಥೀಯ ಸಂಘಟನೆಯಾದ ಅಭಿನವ ಭಾರತವು ಕೇವಲ ರಾಜಕೀಯ ಪಕ್ಷವಾಗಿ ಮಾತ್ರವಲ್ಲ, ನಮ್ಮನ್ನು ವಿರೋಧಿಸುವವರನ್ನು ನಿರ್ಮೂಲನೆ ಮಾಡುವ ಶಕ್ತಿಯಿರುವ ಪ್ರತ್ಯೇಕತಾವಾದಿ ಸಂಘಟನೆಯಾಗಿ ಕೆಲಸ ಮಾಡಲಿದೆ’ ಎಂಬ ಪುರೋಹಿತ್ ಹೇಳಿಕೆಯನ್ನೂ ನ್ಯಾಯಾಲಯ ಸ್ಮರಿಸಿತು.
Related Articles
2008ರ ಸೆ.29ರಂದು ಮಹಾರಾಷ್ಟ್ರದ ಮಾಲೇಗಾಂವ್‌ನ ಶಕೀಲ್ ಗೂಡ್ಸ್ ಟ್ರಾನ್ಸ್‌ಪೋರ್ಟ್ ಕಂಪೆನಿಯ ಮುಂಭಾಗದಲ್ಲಿ ಮೋಟಾರು ಸೈಕಲ್ ಮೇಲೆ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಪರಿಣಾಮ 8 ಮಂದಿ ಸಾವಿಗೀಡಾಗಿ, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ 2008ರಲ್ಲಿ ಸಾಧ್ವಿ ಪ್ರಜ್ಞಾ, ಪುರೋಹಿತ್ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿತ್ತು. ಜತೆಗೆ, ಅವರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮಕೋಕಾ)ಯನ್ವಯ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಅನಂತರ ಸುಪ್ರೀಂ ಕೋರ್ಟ್ ಆದೇಶದಂತೆ, ಮಕೋಕಾದಡಿಯ ಆರೋಪಗಳನ್ನು ಕೈಬಿಡಲಾಗಿತ್ತು.
Advertisement