ಎಂ. ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದ ಆಚರಣೆ ಉದ್ಘಾಟನೆ
ಉಡುಪಿ: ಕನ್ನಡಕ್ಕೆ ಬೇಕಾದ ಕೊಡುಗೆಯನ್ನು ನೀಡದೆ ಕೇವಲ “ಚಲೋ’ ಸಾಹಿತಿಗಳ ಸಾಲಿನಲ್ಲಿ ಮೊಗೇರಿ ಗೋಪಾಲಕೃಷ್ಣ ಅಡಿಗರು ನಿಲ್ಲುವುದಿಲ್ಲ. ಅವರದ್ದು ಸಾತ್ವಿಕ ವ್ಯಕ್ತಿತ್ವ ಹಾಗೂ ಸಾರ್ಥಕ ಬದುಕು ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಿಳಿಸಿದರು.
ಅವರು ಜು. 22ರಂದು ಪೂರ್ಣಪ್ರಜ್ಞ ಮಿನಿ ಅಡಿಟೋರಿಯಂನಲ್ಲಿ ಪಿಪಿಸಿ ಕನ್ನಡ ವಿಭಾಗ ಮತ್ತು ಮೂಗೋಶ್ರೀ ವೇದಿಕೆ ಇವರ ಸಹಭಾಗಿತ್ವದಲ್ಲಿ ಜರಗಿದ ನವ್ಯಕವಿ ಎಂ. ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದ ಆಚರಣೆಯನ್ನು ಉದ್ಘಾಟಿಸಿ ಆಶೀರ್ವದಿಸಿದರು.
ಕನ್ನಡ ಭಾಷೆಗೆ ದಾಸ ಪರಂಪರೆ ನೀಡಿದ ಕೊಡುಗೆ ಅಪಾರವಾಗಿದೆ. ಎಲ್ಲ ದಾಸರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡಿದ್ದಾರೆ. ಈ ಕಾರ್ಯದಲ್ಲಿ ಪಿಪಿಸಿಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಅಡಿಗರು ಸಮಾಜದ ಪ್ರಾಣಕ್ಕೂ ತ್ರಾಣ ತುಂಬಿದ ಮೇಧಾವಿಗಳು ಎಂದು ಸ್ವಾಮೀಜಿ ಅನುಗ್ರಹಿಸಿದರು.
ಪಿಪಿಸಿಯ ಪ್ರಾಂಶುಪಾಲರಾದ ಡಾ| ಬಿ. ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೂರ್ಯ ಸಿದ್ಧಾಂತ ಪ್ರತಿಷ್ಠಾನದ ಗೌರವ ಸಲಹೆಗಾರರಾದ ಉಪ್ಪುಂದ ಚಂದ್ರಶೇಖರ ಹೊಳ್ಳ, ಮೂಗೋಶ್ರೀಯ ಸಂಯೋಜಕ ರಮೇಶ್ ವೈದ್ಯ, ಪೂರ್ಣಪ್ರಜ್ಞ ಆಡಳಿತ ಸಮಿತಿಯ ಕಾರ್ಯದರ್ಶಿ ಡಾ| ಜಿ.ಎಸ್. ಚಂದ್ರಶೇಖರ್, ಕೋಶಾಧಿಕಾರಿ ಪ್ರದೀಪ್‌ಕುಮಾರ್, ಮೊಗೇರಿ ಪಂಚಾಂಗದ ಜನಾರ್ದನ ಅಡಿಗ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಶ್ರೀಕಾಂತ ರಾವ್ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಶಿವಕುಮಾರ್ ವಂದಿಸಿದರು. ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿ ಎಚ್. ಚಂದ್ರಶೇಖರ್ ಕೆದ್ಲಾಯ ಅಡಿಗರ ಕವಿತೆಯನ್ನು ಹಾಡಿದರು.