Advertisement
ಸಿನಿಮಾ ನಟನಾಗುವ ಮುನ್ನ ಚಿತ್ರರಂಗದಲ್ಲಿ ಸಂಗೀತಗಾರರಾಗಿ, ನಟನಾಗಿ, ನಿರ್ಮಾಪಕನಾಗಿ ಬೆಳೆದು ಬಂದ ಸಾಧು ಅದ್ಭುತ ಹಾಸ್ಯನಟರಾಗಿ ಮೆರೆದಿದ್ದು ನಮ್ಮ ಕಣ್ಮುಂದೆ ಇರುವ ಜ್ವಲಂತ ಉದಾಹರಣೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಾಧು ಮಹಾರಾಜ್ ಬಹುಬೇಡಿಕೆಯ ಹಾಸ್ಯ ನಟರಾಗಿದ್ದಾರೆ. ತಮಿಳುಚಿತ್ರರಂಗದಲ್ಲಿ ವಡಿವೇಲು ಹೇಗೆ ಸ್ಟಾರ್ ಹಾಸ್ಯ ನಟರಾಗಿ ಮರೆದಿದ್ದಾರೋ ಅದೇ ರೀತಿ ಕನ್ನಡ ಚಿತ್ರರಂಗದ ವಡಿವೇಲು ಸಾಧು ಕೋಕಿಲ ಎಂಬಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
Related Articles
Advertisement
ಉಪ್ಪಿ ಇಟ್ಟ ಹೆಸರು ಸಾಧು ಕೋಕಿಲ
ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರ ಶ್ ಸಿನಿಮಾದ ಮೂಲಕ ಮೊಟ್ಟ ಮೊದಲ ಬಾರಿಗೆ ಸಹಾಯ್ ಶೀಲನ್ ಸಂಗೀತ ನಿರ್ದೇಶಕರಾಗಿ ಬೆಳ್ಳಿ ತೆರೆಗೆ ಪ್ರವೇಶಿಸಿದ್ದರು. ಅದಕ್ಕೆ ಕಾರಣಕರ್ತರಾದವರು ವಿ.ಮನೋಹರ್..ಹೌದು ಸಾಧು ಅವರನ್ನು ಉಪ್ಪಿಗೆ ಪರಿಚಯಿಸಿದ್ದೇ ಮನೋಹರ್ ಅವರು. ನಂತರ ಉಪ್ಪಿ ಅವರು ಸಾಧು ಕೋಕಿಲ ಎಂದು ಹೆಸರಿಟ್ಟಿದ್ದರು. 1992ರಲ್ಲಿ ಸಾರಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ನಂತರ 1993ರಲ್ಲಿ ಉಪ್ಪಿಯ ಶ್ ಸಿನಿಮಾದಲ್ಲಿ ಆಕಸ್ಮಿಕ ಎಂಬಂತೆ ಸಾಧು ನಟಿಸಬೇಕೆಂದು ತಳ್ಳಿಬಿಟ್ಟಿದ್ದರಂತೆ…ಅಲ್ಲಿಂದ ಶುರುವಾದ ನಟನೆ ಇಂದಿಗೂ ಸಾಧು ಅವರನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಿಬಿಟ್ಟಿದೆ.
ಹೈಸ್ಕೂಲ್ ವಿದ್ಯಾಭ್ಯಾಸದ ವೇಳೆ ಒಂದು ವರ್ಷದ ನಂತರ ಶಿಕ್ಷಣ ಕೈಬಿಟ್ಟ ಸಾಧು ಅವರು ಅರ್ಣವ್ ಮ್ಯೂಸಿಕ್ ಸೆಂಟರ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಬಿಟ್ಟಿದ್ದರಂತೆ. ಅದಕ್ಕೆ ಕಾರಣ ಬಡತನ..ಬೆಳಗ್ಗೆ ಬಂದು ಅಂಗಡಿ ತೆರೆಯುವುದು, ಗ್ಲಾಸ್ ಒರೆಸುವುದು, ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಸಾಧುಗೆ ಮಧ್ಯಾಹ್ನದ ಊಟಕ್ಕೆ ಕೊಡುತ್ತಿದ್ದ ಹಣ 2 ರೂಪಾಯಿಯಂತೆ. ಅದರಲ್ಲಿ 1.75ಪೈಸೆ ಅನ್ನ ಸಾಂಬಾರ್ ತಿಂದು ದಿನಕಳೆಯುತ್ತಿದ್ದರು. ಹೀಗೆ ಮ್ಯೂಸಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತ, ಮಾಡುತ್ತ ಅಲ್ಲಿದ್ದ ಸಂಗೀತ ಪರಿಕರಗಳನ್ನು ಬಳಸುವುದನ್ನು ಸಾಧು ಕಲಿತುಬಿಟ್ಟಿದ್ದರಂತೆ. ಆವಾಗಲೇ ಸಾಧುಗೆ ತಾನು ನಂಬರ್ ವನ್ ಕೀ ಬೋರ್ಡ್ ಪ್ಲೇಯರ್ ಆಗಬೇಕೆಂಬ ಕನಸು ಮೊಳೆಕೆಯೊಡೆದಿತ್ತು.
ಊಟಕ್ಕಿಲ್ಲದೇ, ಬದುಕಲು ಏನೇನೂ ಇಲ್ಲದ ಸಂದರ್ಭದಲ್ಲಿ ತಂದೆ, ತಾಯಿ ಮದುವೆ ಮನೆಗಳಲ್ಲಿ ಹಾಡುತ್ತಿದ್ದಾಗ..ತಮ್ಮ ಹಾಡು ಮುಗಿದ ಬಳಿಕ ಊಟಕ್ಕೆ ಹೋಗುವಾಗ ಮೊದಲು ತಾಂಬೂಲ ತೆಗೆದುಕೊಳ್ಳುತ್ತಿದ್ದರಂತೆ. ಅದಕ್ಕೆ ಕಾರಣ ಅದರಲ್ಲಿ ಚೀಲ ಇರುತ್ತಿತ್ತಲ್ಲ ಅದಕ್ಕೆ. ತಾಂಬೂಲ ಚೀಲದಲ್ಲಿದ್ದ ತೆಂಗಿನಕಾಯಿ ತೆಗೆದಿಟ್ಟು, ಚೀಲ ತೆಗೆದುಕೊಂಡು ಊಟಕ್ಕೆ ಹೋಗಿ ಅಲ್ಲಿ ಕೊಡುತ್ತಿದ್ದ ಚಿರೊಟ್ಟಿ, ಲಾಡು ಅವೆಲ್ಲವನ್ನೂ ಚೀಲದಲ್ಲಿ ಹಾಕಿಕೊಂಡು ಮನೆಗೆ ಬಂದು ಮಕ್ಕಳಿಗೆ ಕೊಟ್ಟು ಸಾಕುತ್ತಿದ್ದ ಕಷ್ಟದ ದಿನಗಳನ್ನು ಸಾಧು ಇನ್ನೂ ಮರೆತಿಲ್ಲ.
ಕೋಕಿಲ ಅವರ ಅಣ್ಣ ಲಯೇಂದ್ರ ಕೂಡಾ ಕನ್ನಡ ಚಿತ್ರರಂಗದಲ್ಲಿ ನಟರಾಗಿದ್ದಾರೆ. ಸಾಧು ಅವರು 1993ರಲ್ಲಿ ಸಲೀನಾ ಜತೆ ವಿವಾಹವಾಗಿದ್ದು, ದಂಪತಿಗೆ ಸುರಾಗ್ ಹಾಗೂ ಸೃಜನ್ ಎಂಬಿಬ್ಬರು ಗಂಡು ಮಕ್ಕಳಿದ್ದಾರೆ.
ಸಾಧು ಕೋಕಿಲ ಭಾರತದಲ್ಲಿಯೇ ಅತೀ ವೇಗದಲ್ಲಿ ಕೀ ಬೋರ್ಡ್ ಪ್ಲೇ ಮಾಡುವವರಲ್ಲಿ ಒಬ್ಬರಾಗಿದ್ದಾರೆ. ಉಪ್ಪಿ ಅವರ “ಶ್ “ ಸಿನಿಮಾದಲ್ಲಿ ಆರಂಭಿಸಿ ನಂತರ ಹಾಸ್ಯ ನಟರಾಗಿ, ಸಂಗೀತ ನಿರ್ದೇಶಕರಾಗಿ, ರಕ್ತ ಕಣ್ಣೀರು ಸಿನಿಮಾ ನಿರ್ದೇಶಿಸಿದ್ದರು. ನಂತರ ರಾಕ್ಷಸ, ಸುಂಟರಗಾಳಿ, ಅನಾಥರು, ಮಿಸ್ಟರ್ ತೀರ್ಥ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕನ್ನಡ ಚಿತ್ರಪ್ರೇಮಿಗಳಿಗೆ ಹಾಸ್ಯ ರಸದೌತಣ ಉಣಬಡಿಸುವುದರ ಜತೆ, ಜತೆಗೆ ಇಂಪಾದ ಹಾಡು,ಇಂಪಾದ ಸಂಗೀತ ನಿರ್ದೇಶಿಸಿದ ಹೆಗ್ಗಳಿಕೆ ಕೂಡಾ ಸಾಧು ಕೋಕಿಲ ಅವರದ್ದಾಗಿದೆ.