ಹಾವೇರಿ: ಬೆಂಗಳೂರಿನ ಎಸ್.ಜಿ.ಎಸ್. ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ಕಾಲೇಜು ಹಾಗೂ ಸಂಶೋಧನಾ ಕೇಂದ್ರ, ಯೋಗ ಯಾತ್ರಾ ಸಹಯೋಗದಲ್ಲಿ ಮೇ 25 ಹಾಗೂ 26ರಂದು ಥೈಲ್ಯಾಂಡ್‌ದ ಪಟ್ಟಾಯ ನಗರದಲ್ಲಿ ನಡೆಯುವ ಏಳನೇ ಅಂತಾರಾಷ್ಟ್ರೀಯ ಯೋಗ ಉತ್ಸವ ಹಾಗೂ ಯೋಗ ವಿಶ್ವ ದಾಖಲೆ ಕಾರ್ಯಕ್ರಮ ಉದ್ಘಾಟನೆಗೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರನ್ನು ಆಹ್ವಾನಿಸಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಪ್ರೇಮಕುಮಾರ ಮುದ್ದಿ ತಿಳಿಸಿದರು.
ಮಂಗಳವಾರ ಮಠದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಥೈಲ್ಯಾಂಡ್ ದೇಶದ ಪ್ರವಾಸೋದ್ಯಮ ಇಲಾಖೆ ಹಾಗೂ ಕ್ರೀಡಾ ಇಲಾಖೆ ಸಹಕಾರದೊಂದಿಗೆ ವಿಶ್ವದ 15ರಿಂದ 16ದೇಶಗಳಿಂದ ಅಂದಾಜು 500ಕ್ಕೂ ಹೆಚ್ಚು ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಪಿನಚಂದ್ರ ಜೋಶಿ, ರಿಷಿಕೇಶ, ಅಮೇರಿಕಾದ ವೇದಿಕ ವೆಲ್ನೆಸ್ ಯುನಿರ್ವಸಿಟಿ ಸಂಸ್ಥಾಪಕ ಕೃಷ್ಣಮೂರ್ತಿ, ನೀಲ್ಸ್ ಕ್ಲೋ ಸಂಸ್ಥಾಪಕ ಮಾಸ್ಟರ್ ಕಮಲ್ ಭಾಗವಹಿಸಲಿದ್ದಾರೆ. ಮೇ 25ರಂದು ಅಂತಾರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್, ಯೋಗ ಕಾರ್ಯಾಗಾರ, ಗೌರವ ಡಾಕ್ಟರೆಟ್ ಪ್ರದಾನ ನಡೆಯಲಿದೆ. ಮೇ 26ರಂದು ವೀರಭದ್ರಾಸನ ವಿಶ್ವದಾಖಲೆ ಕಾರ್ಯಕ್ರಮ ನಡೆಯಲಿದ್ದು, ಈ ವರೆಗೆ ಎರಡು ನಿಮಿಷದ ದಾಖಲೆಯಾಗಿದ್ದು ಅದಕ್ಕಿಂತ ಹೆಚ್ಚು ಅವಧಿ ವೀರಭದ್ರಾಸನ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಏಳನೇ ಯೋಗ ಉತ್ಸವದ ಅಂಗವಾಗಿ ನಡೆಯುವ ಸ್ಪರ್ಧೆಯಲ್ಲಿ ಹಾವೇರಿ ಜಿಲ್ಲೆಯಿಂದ ವಿಜಯಲಕ್ಷ್ಮಿ ಜಿ.ಕೆ. ಹರ್ಷಿತಾ, ಆನಂದ, ಗಿರಿರಾಜ, ಶ್ರೀಧರ, ವಿಜಯಲಕ್ಷ್ಮಿ , ಅಶ್ವಿನಿ ಮತ್ತು ಅಪೂರ್ವ ಈ ಎಂಟು ಯೋಗಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಸ್ಪರ್ಧೆಯಲ್ಲಿ ಭಾರತದಿಂದದ ಒಟ್ಟು 65 ಯೋಗ ಸ್ಪರ್ಧಿಗಳು ಸ್ಪರ್ಧಿಸುತ್ತಿದ್ದು, ತಮ್ಮನ್ನು ಭಾರತ ತಂಡಕ್ಕೆ ಅಂತಾರಾಷ್ಟ್ರೀಯ ಪ್ರಧಾನ ಯೋಗ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರೇಮಕುಮಾರ ಮುದ್ದಿ ತಿಳಿಸಿದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಯೋಗ ಪ್ರತಿಭೆ ವಿಶ್ವ ಮಟ್ಟದಲ್ಲಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ತನ್ಮೂಲಕ ಜಿಲ್ಲೆಯ ಕೀರ್ತಿ ವಿಶ್ವದಲ್ಲಿ ಇನ್ನಷ್ಟು ಪ್ರಸರಿಸಲಿ ಎಂದು ಹಾರೈಸಿದರು. ವೈದ್ಯ ಗುಹೇಶ್ವರ ಪಾಟೀಲ, ಬಿ. ಬಸವರಾಜ ಹಾಗೂ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.