Advertisement

ಸದಾಶಿವ ಸಾಲ್ಯಾನ್‌: ಕಳಚಿದ ರಂಗಭೂಮಿಯ ಹಿರಿಯ ಕೊಂಡಿ 

06:00 AM Jul 27, 2018 | Team Udayavani |

ಮುಂಬಯಿಯ ರಂಗಭೂಮಿಯೊಂದಿಗೆ ಬೆಳೆದು ತುಳು ರಂಗಭೂಮಿಯಲ್ಲೂ ಮಿಂಚಿದ್ದ ಹಿರಿಯ, ಪ್ರಬುದ್ಧ ಕಲಾವಿದ ಸದಾಶಿವ ಸಾಲಿಯಾನ್‌ 68ನೇ ವಯಸ್ಸಿನಲ್ಲಿ ಜು. 8ರಂದು ಮುಂಬಯಿಯಲ್ಲಿ ನಿಧನ ಹೊಂದುವ ಮೂಲಕ ರಂಗ ಭೂಮಿಯ ಹಿರಿಯ ತಲೆಮಾರಿನ ಒಂದು ಕೊಂಡಿ ಕಳಚಿಕೊಂಡಂತಾಗಿದೆ. 

Advertisement

ಸಾಲಿಯಾನ್‌ ಒಳಗಿರುವ ನಟನನ್ನು ಗುರುತಿಸಿ ರಂಗ ಭೂಮಿಗೆ ಪರಿಚಯಿಸಿದವರು ಮುಂಬಯಿಯ ಕಲಾ ಜಗತ್ತು ವಿಜಯಕುಮಾರ್‌ ಶೆಟ್ಟಿ. ಅವರ ಮಾತಿನಲ್ಲಿಯೇ ಸಾಲಿಯಾನ್‌ ಬಗ್ಗೆ ತಿಳಿಯುವುದಾದರೆ , 70-80ರ ದಶಕದಲ್ಲಿ ನಾನು ರಂಗಭೂಮಿಯಲ್ಲಿ ಸಕ್ರಿಯನಾಗಿದ್ದ ಕಾಲದಲ್ಲಿ ಸಾಲಿಯಾನರು ಅಂತರ್‌ ಕಾಲೇಜು ಮಟ್ಟದ ನಾಟಕಗಳಲ್ಲಿ ನಟಿಸುತ್ತಿದ್ದರು. ಅವರ ಒಂದು ಪ್ರದರ್ಶನ ಕಂಡು ಮೆಚ್ಚಿ ಭೂತದ ಇಲ್‌ ನಾಟಕದ ಮೂಲಕ ಅವರಿಗೆ ಅವಕಾಶ ನೀಡಿ ತುಳು ರಂಗ ಭೂಮಿಗೆ ಪರಿಚಯಿಸಿದೆ. ಅದರಲ್ಲಿ ಅವರು ಮಾಡಿದ್ದ ಹೆಗ್ಗಡೆ ಪಾತ್ರ ಅದ್ಭುತವಾಗಿತ್ತು. ಹೆಗ್ಗಡೆ ಮಗನ ಪಾತ್ರದಲ್ಲಿ ವಾಮನ್‌ರಾಜ್‌ ನಟಿಸಿದ್ದರು. ಈ ಜೋಡಿಯ ಅಭಿನಯ ಆಗ ಭಾರೀ ಜನ ಮೆಚ್ಚುಗೆ ಗಳಿಸಿತ್ತು. ಬಳಿಕ ಮರಾಠಿ ಮೂಲದ ಕನ್ನಡ ನಾಟಕ “ನಾವಿಲ್ಲದಾಗದ’ಲ್ಲಿ ಅವರು ವಿಲನ್‌ ಅಜಿತ್‌ ಪಾತ್ರದಲ್ಲಿ ಮಿಂಚಿದ್ದರು. ದೇವದಾಸಿ ನಾಟದಲ್ಲಿ ಅವರಿಗೆ ನಾಯಕನ ಪಾತ್ರದ ಅವಕಾಶ ನೀಡಿದ್ದೆ. ಅವರೋರ್ವ ಉತ್ತಮ ನಟನಾಗಿದ್ದರು. ಮುಂದೆ “ಈ ನಲ್ಕೆದಾಯೆ’ ನಾಟಕದಲ್ಲಿ ಅವರಿಗಾಗಿಯೇ ಒಂದು ಪಾತ್ರ ಸೃಷ್ಟಿಸಿದ್ದೆ. ಆದರೆ ಅದರಲ್ಲಿ ಅವರು ನಟಿಸಲಿಲ್ಲ. 

ಕರಾವಳಿಯ ರಂಗಭೂಮಿಯಲ್ಲಿ ಸಾಲಿಯಾನ್‌ ಪಾತ್ರದ ಬಗ್ಗೆ ಮಾತನಾಡುವ ಹಿರಿಯ ರಂಗಕರ್ಮಿ ವಿ.ಜಿ. ಪಾಲ್‌ ಹೇಳುವಂತೆ ಕೆ.ಎನ್‌. ಟೇಲರ್‌ ಅವರ ಗಣೇಶ ನಾಟಕ ಸಭಾ ಮುಂಬಯಿಗೆ ಹೋಗುವಾಗ ಅದರಲ್ಲಿ ಸಾಲಿಯಾನ್‌ಗೆ ಒಂದು ಪಾತ್ರ ಖಚಿತವಾಗಿತ್ತು. ಟೇಲರ್‌ ಜತೆಗೆ ಅನೇಕ ನಾಟಕಗಳಲ್ಲಿ ಅವರು ನಟಿಸಿದ್ದಾರೆ. ”ಕಂಡನೆ – ಬುಡೆದಿ’ಯಲ್ಲಿ ಸಾಲಿಯಾನರು ಮಾಡಿದ್ದ ಸಾಹುಕಾರ್‌ ಪಾತ್ರ ಮನೋಜ್ಞವಾಗಿತ್ತು. “ಏರ್‌ ಮಲ್ತಿನ ತಪ್ಪು’, “ಕಾಸ್‌ ದಾಯೆ ಕಂಡನಿ’, “ತಮ್ಮಲೆ ಅರುವತ್ತನ’ ಕೋಲ ಮುಂತಾದ ಪ್ರಮುಖ ನಾಟಕಗಳಲ್ಲಿ ಸಾಲಿಯಾನ್‌ ನಟಿಸಿದ್ದರು. ಹೊಸ ತಲೆಮಾರಿನ ದೇವದಾಸ್‌ ಕಾಪಿಕಾಡ್‌ ಅವರ ಚಾಪರ್ಕ ತಂಡದಲ್ಲೂ ನಟಿಸಿದ್ದಾರೆ. “ಬಲೇ ಚಾ ಪರ್ಕ’ದ ವಕೀಲರ ಪಾತ್ರ ಈಗಲೂ ಕಣ್ಣ ಮುಂದೆ ಬರುತ್ತಿದೆ. ಆ ಪಾತ್ರದ ಪ್ರೇರಣೆಯಿಂದಲೇ ಮುಂದೆ ಅದು “ಸತ್ಯ ಓಲುಂಡು’ ಹೆಸರಲ್ಲಿ ಸಿನಿಮಾ ಆಗಿ, ಅದರಲ್ಲೂ ಸಾಲಿಯಾನ್‌ ನಟಿಸಿದ್ದರು. 

ಮೊಗವೀರ ಸಮುದಾಯದವರರಾಗಿದ್ದ ಅವರು ನೇರ ನಡೆ ನುಡಿಯವರಾಗಿದ್ದರು. ಆದ್ದರಿಂದ ಎಲ್ಲರೊಂದಿಗೆ ಹೊಂದಿಕೊಳ್ಳುವುದು ಅವರಿಗೆ ಕಷ್ಟವಾಗುತ್ತಿತ್ತು. ವಿಲನ್‌ ಪಾತ್ರಕ್ಕೆ ಹೇಳಿ ಮಾಡಿಸಿದ್ದ ದೇಹ ಸಂಪತ್ತು ಹೊಂದಿದ್ದ ಅವರು ಪೋಷಕ ಪಾತ್ರದಲ್ಲಿ ಮತ್ತು ನಾಯಕನ ಪಾತ್ರದಲ್ಲೂ ಸೈ ಎನಿಸಿದ್ದವರು.

ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾಗಲೇ ಅವರು ಬೈಕ್‌ ಅಪಘಾತದಲ್ಲಿ ಗಾಯಗೊಂಡು ದೀರ್ಘ‌ ಕಾಲ ಹಾಸಿಗೆ ಹಿಡಿದಿದ್ದರು. ಇದು ಅವರ ರಂಗ ಭೂಮಿಯ ಚಟುವಟಿಕೆಗೂ ಬಲವಾದ ಏಟು ಕೊಟ್ಟಿತು. ಚೇತರಿಸಿಕೊಂಡ ಬಳಿಕ ಅವರು ಗಮನ ಹರಿಸಿದ್ದು ಸಿನಿಮಾ ರಂಗದತ್ತ. ವಾಮನ್‌ರಾಜ್‌ ಅವ ರಂಥ ಮಹಾನ್‌ ನಟರೊಂದಿಗೆ ನಟಿಸಿ ಗಮನ ಸೆಳೆದಿದ್ದ ಸಾಲಿಯಾನರು ಸಿನಿಮಾ ರಂಗದಲ್ಲೂ ಯಶಸ್ಸನ್ನು ಒಲಿಸಿಕೊಳ್ಳುವಲ್ಲಿ ಸಫ‌ಲರಾಗಿದ್ದರು.

Advertisement

ಮೂಲತಃ ಉಡುಪಿ ತೆಂಕ ಎರ್ಮಾಳ್‌ನ ಹೊಸಬೆಟ್ಟು ಪಾದೆಮನೆಯವರಾಗಿದ್ದ ಸಾಲಿಯಾನ್‌ ಮುಂಬಯಿಯಲ್ಲಿಯೇ ಶಿಕ್ಷಣ ಪಡೆದು ಸೆಂಟ್ರಲ್‌ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದ್ದರು. ಕಾಲೇಜು ದಿನಗಳಲ್ಲೇ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅವರು ತುಳು, ಹಿಂದಿ, ಮರಾಠಿ ಸಹಿತ ವಿವಿಧ ಭಾಷೆಗಳ ಸುಮಾರು 500ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶಿಸಿದ ಮತ್ತು ನಟಿಸಿದ ಅನುಭವಿ.  ರಂಗ ಭೂಮಿಯಿಂದ ಸಿನಿಮಾ ರಂಗಕ್ಕೆ ಭಡ್ತಿ ಪಡೆದ ಬಳಿಕ ಮತ್ತೆ ನಾಟಕದತ್ತ ಬರಲಿಲ್ಲ. ಅವರು ತುಳು, ಕನ್ನಡ ಸಹಿತ ವಿವಿಧ ಭಾಷೆಗಳ ಸುಮಾರು 50 ಸಿನಿಮಾಗಳಲ್ಲೂ ನಟಿಸಿದ್ದರು ಮತ್ತು ಇಂಥ ಸಾಧನೆ ಮಾಡಿದ ಮುಂಬಯಿಯ ಅಪರೂಪದ ಕನ್ನಡಿಗ ಎಂಬ ವಿಶೇಷಣಕ್ಕೆ ಪಾತ್ರರಾಗಿದ್ದರು. 

 ಪುತ್ತಿಗೆ ಪದ್ಮನಾಭ ರೈ  

Advertisement

Udayavani is now on Telegram. Click here to join our channel and stay updated with the latest news.

Next