ಹೊಸದಿಲ್ಲಿ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಘನತೆ ಮತ್ತು ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಿರುವ “ಸೇಕ್ರೆಡ್ ಗೇಮ್ಸ್’ ಚಿತ್ರದ ಕೆಲವೊಂದು ಸಂಭಾಷಣೆಗಳನ್ನು ತೆಗೆದು ಹಾಕಬೇಕೆಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಜು.19ರ ಗುರುವಾರಕ್ಕೆ ನಿಗದಿಸಿದೆ.
ಆದರೆ ಇದಕ್ಕೆ ಪೂರ್ವಭಾವಿಯಾಗಿ ದಿಲ್ಲಿ ಹೈಕೋರ್ಟ್, “ಸಂಭಾಷಣೆಗಳಿಗಾಗಿ ನಟರನ್ನು ಹೊಣೆಗಾರರನ್ನಾಗಿ ಮಾಡಲಾಗದು” ಎಂದು ಹೇಳಿದೆ.
ಕಾಂಗ್ರೆಸ್ ಬೆಂಬಿಲಿಗರಾಗಿರುವ ವಕೀಲ ನಿಖೀಲ್ ಭಲ್ಲಾ ಅವರು ನ್ಯಾಯವಾದಿ ಶಶಾಂಕ್ ಗರ್ಗ್ ಮೂಲಕ ದಿಲ್ಲಿ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ “ಸೇಕ್ರೆಡ್ ಗೇಮ್ಸ್’ ಚಿತ್ರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ವ್ಯಕ್ತಿತ್ವಕ್ಕೆ ಕಳಂಕ ಉಂಟು ಮಾಡುವ ರೀತಿಯ ಸಂಭಾಷಣೆಗಳಿದ್ದು ಅದನ್ನು ಚಿತ್ರದಿಂದ ತೆಗೆಸಬೇಕು’ ಎಂದು ಆಗ್ರಹಿದ್ದಾರೆ.
ಸೇಕ್ರೆಡ್ ಗೇಮ್ಸ್ ನಿರ್ಮಾಪಕರು, ನೆಟ್ ಫ್ಲಿಕ್ಸ್ ಮತ್ತು ನಟ ನವಾಜುದ್ದೀನ್ ಸಿದ್ದಿಕಿ ಅವರನ್ನು ಅರ್ಜಿಯಲ್ಲಿ ಉತ್ತರದಾಯಿಗಳನ್ನಾಗಿ ಮಾಡಲಾಗಿದೆ. ಈ ಚಿತ್ರದ ಪ್ರೀಮಿಯರ್ ಶೋ ನಡೆದ ಮರುದಿನವೇ ದಿಲ್ಲಿ ಹೈಕೋರ್ಟ್ ನಲ್ಲಿ ಇದರ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಅಂತೆಯೇ ಚಿತ್ರ ವಿವಾದಕ್ಕೆ ಕಾರಣವಾಗಿದೆ.
ಸೇಕ್ರೆಡ್ ಗೇಮ್ಸ್ ಚಿತ್ರವು ವಿಕ್ರಮ್ ಚಂದ್ರ ಅವರ 2006ರ ಇದೇ ಹೆಸರಿನ ಥ್ರಿಲ್ಲರ್ ಕಾದಂಬರಿಯನ್ನು ಆಧರಿಸಿದೆ. ಇದರ ತಾಸುದ್ದದ ಎಂಟು ಕಂತುಗಳನ್ನು ಅನುರಾಗ್ ಕಶ್ಯಪ್ ಮತ್ತು ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶಿಸಿದ್ದರು. ಚಿತ್ರಕಥೆಯನ್ನು ಸ್ಮಿತಾ ಸಿಂಗ್, ವಸಂತ್ ನಾಥ್ ಮತ್ತು ವರುಣ್ ಗ್ರೋವರ್ ಬರೆದಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ ಇದ್ದಾರೆ.