ಹೊಸದಿಲ್ಲಿ : ಪಕ್ಷದ ಉನ್ನತ ನಾಯಕರ ಭ್ರಷ್ಟಾಚಾರ, ವಿದೇಶ ಪ್ರವಾಸ ವಿವರ ಇತ್ಯಾದಿಗಳನ್ನು ಪ್ರಶ್ನಿಸಿದ ಕಾರಣಕ್ಕೆ ಪಕ್ಷದಿಂದ ಕಿತ್ತೆಸೆಯಲ್ಪಟ್ಟಿರುವ ಹಾಗೂ ಉಪವಾಸ ಸತ್ಯಾಗ್ರಹ ನಿರತರಾಗಿರುವ ಆಮ್ ಆದ್ಮಿ ಪಕ್ಷದ ಜಲ ಸಚಿವ ಕಪಿಲ್ ಮಿಶ್ರಾ ಅವರ ಮೇಲೆ ಅಂಕಿತ್ ಭಾರಧ್ವಾಜ್ ಎಂಬ ವ್ಯಕ್ತಿಯು ಹಲ್ಲೆ ನಡೆಸಿದ್ದು ಆತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಕೋರ ಅಂಕಿತ್ ಭಾರದ್ವಾಜ್, ಕಪಿಲ್ ಮಿಶ್ರಾ ಮೇಲೆ ಎರಗಿ, ಅವರ ಬಟ್ಟೆಯನ್ನು ಹರಿದು ಹಾಕಿ, ಕಪಾಳ ಮೋಕ್ಷ ಮಾಡಿದನೆಂದು ತಿಳಿದುಬಂದಿದೆ.
ಸ್ಥಳದಲ್ಲಿದ್ದ ಕಪಿಲ್ ಮಿಶ್ರಾ ಬೆಂಬಲಿಗರು ಹಲ್ಲೆಕೋರನನ್ನು ಹಿಡಿದು ಆತನನ್ನು ಥಳಿಸಿ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದರು. ಹಲ್ಲೆಕೋರ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
“ಹಲ್ಲೆಕೋರನು ನನಗೆ ಹಲ್ಲೆ ವೇಳೆ ಪರಿಣಾಮ ನೆಟ್ಟಗಾಗದು ಎಂದು ಬೆದರಿಸಿದ್ದಾನೆ. ನಾನು ಆತನನ್ನು ಈ ಮೊದಲು ಕಂಡಿಲ್ಲ. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡುವುದಿಲ್ಲ’ ಎಂದು ಮಿಶ್ರಾ ಹೇಳಿದರು.
ಮಂಗಳವಾರ ರಾತ್ರಿ ನನಗೊಂದು ಅಂತಾರಾಷ್ಟ್ರೀಯ ಫೋನ್ ಕರೆ ಬಂದಿದ್ದು ನನ್ನನ್ನು ಶೂಟ್ ಮಾಡುವುದಾಗಿ ಬೆದರಿಸಲಾಗಿದೆ ಎಂದು ಮಿಶ್ರಾ ಹೇಳಿದರು.