Advertisement

ಏಶ್ಯನ್‌ ಕುಸ್ತಿ: ಬಂಗಾರ ಗೆದ್ದ ಸಚಿನ್‌, ದೀಪಕ್‌

12:36 PM Jul 23, 2018 | |

ಕೂಟದ ಮುಕ್ತಾಯ ದಿನವಾದ ರವಿವಾರ ಭಾರತಕ್ಕೆ 2 ಚಿನ್ನ, 2 ಕಂಚು  173 ಅಂಕ ಪಡೆದ ಭಾರತಕ್ಕೆ ದ್ವಿತೀಯ ಸ್ಥಾನ 

Advertisement

ಹೊಸದಿಲ್ಲಿ: ಕಿರಿಯರ ಕುಸ್ತಿ ಕೂಟ ರವಿವಾರ ಮುಕ್ತಾಯವಾಗಿದೆ. ಅಂತಿಮ ದಿನ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯರು 2 ಚಿನ್ನ, 2 ಕಂಚಿನ ಪದಕ ಗೆದ್ದಿದ್ದಾರೆ. ರವಿವಾರ ಭಾರತದ ಐವರು ಸ್ಪರ್ಧಿಗಳಲ್ಲಿ ನಾಲ್ವರು ಫೈನಲ್‌ಗೇರಿ ಪದಕ ಗೆದ್ದರು ಎನ್ನುವುದು ಸಂತಸದ ಸಂಗತಿ. ಒಟ್ಟಾರೆ ಭಾರತ, ತಂಡ ವಿಭಾಗದಲ್ಲಿ 173 ಅಂಕ ಗಳಿಸಿ 2ನೇ ಸ್ಥಾನ ಪಡೆಯಿತು. 189 ಅಂಕ ಗಳಿಸಿದ ಉಜ್ಬೆಕಿಸ್ಥಾನ ಪ್ರಥಮ ಸ್ಥಾನ ಪಡೆಯಿತು.

ಭಾರತದ ಪರ ಬಂಗಾರಕ್ಕೆ ಕೊರಳೊಡ್ಡಿದ್ದು ಸಚಿನ್‌ ರಥಿ ಹಾಗೂ ದೀಪಕ್‌ ಪುನಿಯ. ಸೂರಜ್‌ ರಾಜ್‌ಕುಮಾರ್‌ ಕೋಕಟೆ (61 ಕೆಜಿ) ಹಾಗೂ ಮೋಹಿತ್‌ (125 ಕೆಜಿ) ಕಂಚಿನ ಪದಕ ಗೆದ್ದರು. ಪದಕ ತಪ್ಪಿಸಿಕೊಂಡ ಒಬ್ಬೇ ಒಬ್ಬ ಸ್ಫರ್ಧಿಯೆಂದರೆ ಸೋಮವೀರ್‌ ಸಿಂಗ್‌. ಅವರು 92 ಕೆಜಿ ವಿಭಾಗದಲ್ಲಿ ನಿರಾಸೆ ಮೂಡಿಸಿದರು. ಬಂಗಾರದಂತಹ ಸ್ಪರ್ಧೆ74 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಸಚಿನ್‌ ರಥಿ ಅಸಾಮಾನ್ಯ ರೀತಿಯಲ್ಲಿ ಚಿನ್ನ ಗೆದ್ದರು. ಮೊದಲೆರಡು ಸುತ್ತಿನಲ್ಲಿ ಎದುರಾಳಿ ವಿರುದ್ಧ ತೀವ್ರ ಹಿನ್ನಡೆ ಹೊಂದಿದ್ದ ಅವರು 3ನೇ ಸುತ್ತಿನಲ್ಲಿ ಪವಾಡವನ್ನೇ ಮಾಡಿ ಚಿನ್ನ ಗೆದ್ದರು. ಮಂಗೋಲಿಯದ ಬಾತ್‌ ಎರ್ಡೆನ್‌ ವಿರುದ್ಧ ಅಂತಿಮ ಪಂದ್ಯದಲ್ಲಿ ಸಚಿನ್‌ ಸೆಣಸಿದರು. ಮೊದಲ ಸುತ್ತಿನಲ್ಲಿ 2-5ರಿಂದ, 2ನೇ ಸುತ್ತಿನಲ್ಲಿ 2-9ರಿಂದ ಹಿನ್ನಡೆ ಅನುಭವಿಸಿದ್ದರು. ಅಂತಿಮ ಸುತ್ತಿನಲ್ಲಿ ಅನಿರೀಕ್ಷಿತವಾಗಿ ತಿರುಗಿಬಿದ್ದರು. ಮಂಗೋಲಿಯದ ಎದುರಾಳಿಯನ್ನು ತಬ್ಬಿಬ್ಟಾಗಿಸಿ ಚಿನ್ನಕ್ಕೆ ಕೊರಳೊಡ್ಡಿದರು.

ಈ ಬಗ್ಗೆ ಸಚಿನ್‌ ತರಬೇತುದಾರ ಮಹಾಸಿಂಗ್‌ ರಾವ್‌ ಹೆಮ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ. “ಮಂಗೋಲಿಯ ಸ್ಪರ್ಧಿ ವಿರುದ್ಧ ಜಾಸ್ತಿ ಅಂತರದಲ್ಲಿರಬೇಡ. ಆತ ದೂರದಿಂದ ಹೆಚ್ಚು ಅಪಾಯಕಾರಿ ಎಂದು ನಾನು ಸಚಿನ್‌ ಹೇಳಿದ್ದೆ. ಆತನಿಂದ ನಾನು ಚಿನ್ನವನ್ನೇ ನಿರೀಕ್ಷಿಸಿದ್ದೆ. ಅದನ್ನು ಸಾಧಿಸಿದ್ದಾನೆ’ ಎಂದು ಮಹಾ ಸಿಂಗ್‌ ಖುಷಿ ಪಟ್ಟಿದ್ದಾರೆ. 86 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ದೀಪಕ್‌ ಪುನಿಯ ಅವರದ್ದು ಸುಲಭ ಜಯ. ತಾಂತ್ರಿಕವಾಗಿ ಅತ್ಯಂತ ಬಲಿಷ್ಠವಾಗಿರುವ ಪುನಿಯ ಅಂತಿಮ ಪಂದ್ಯದಲ್ಲಿ ತುರ್ಕ್‌ಮೆನಿಸ್ಥಾನ ಎದುರಾಳಿ ಅಜಾತ್‌ ಗಾಜ್ಯೆವ್‌ ವಿರುದ್ಧ ಸಲೀಸಾಗಿ ಗೆದ್ದರು. 2016ರಲ್ಲಿ ವಿಶ್ವ ಕೆಡೆಟ್‌ ಕೂಟದಲ್ಲಿ ಚಿನ್ನ ಗೆದ್ದಿರುವ ಪುನಿಯಾಗೆ ಆರಂಭಿಕ ಹಂತದಲ್ಲಿ ಏಕೈಕ ಸವಾಲು ಎದುರಾಗಿದ್ದು ಇರಾನಿನ ಸಯದ್‌ ಸಜ್ಜದ್‌ ಸಯದ್‌ ಮೆಹಿª ವಿರುದ್ಧ ಮಾತ್ರ. ಉಳಿದಂತೆ ಕಜಕಸ್ಥಾದ ದಾನಿಯರ್‌ ಮೆಲೆಬೆಕ್‌, ಜಪಾನಿನ ಕೈರಿ ಯಾಗಿಯನ್ನು ಅನಾಯಾಸವಾಗಿ ಮಣಿಸಿದರು.

ಸೋಮವೀರ್‌ ಸಿಂಗ್‌ ವಿಫ‌ಲ
92 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೋಮವೀರ್‌ ಸಿಂಗ್‌ ಫೈನಲ್‌ಗೇರಲು ವಿಫ‌ಲರಾದರು. ಅವರು 3ನೇ ಸುತ್ತಿನಲ್ಲಿ ಜಪಾನಿನ ತಕುಮ ಒಟ್ಸು ವಿರುದ್ಧ ಸೋತು ಹೋದರು. ಇಲ್ಲಿ ಸೋಮವೀರ್‌ ಯಶಸ್ವಿಯಾಗಿದ್ದರೆ ಭಾರತಕ್ಕೆ ಇನ್ನೊಂದು ಪದಕ ಖಾತ್ರಿಯಿತ್ತು. ಒಟ್ಟಾರೆ ಕೂಟದಲ್ಲಿ ಭಾರತೀಯರು ಅತ್ಯುತ್ತಮ ಸಾಧನೆ ಮಾಡಿ ಪದಕಗಳನ್ನು ಬಾಚಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next