ಮುಂಬೈ: ಸಚಿನ್ ತೆಂಡುಲ್ಕರ್ ಅಂದರೆ ಕ್ರಿಕೆಟ್ ಲೋಕದ ಬ್ಯಾಟಿಂಗ್ ಅದ್ಭುತ. ತನ್ನ ಆಕರ್ಷಕ ಬ್ಯಾಟಿಂಗ್ ಮತ್ತು ಮೈದಾನದಲ್ಲಿನ ನಡವಳಿಕೆಯಿಂದ ಎಲ್ಲರಿಗೂ ಮಾದರಿಯಾಗಿದ್ದರು. ಎದುರಾಳಿಯ ವೇಗದ ಬೌನ್ಸರ್ ಗಳನ್ನು ಅಷ್ಟೇ ವೇಗದಿಂದ ದಂಡಿಸುತ್ತಿದ್ದ ಸಚಿನ್ ಈಗ ಐಸಿಸಿ ಮಾಡಿರುವ ಟ್ವೀಟ್ ಬೌನ್ಸ್ ಗೆ ಸರಿಯಾಗೇ ಹುಕ್ ಬಾರಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ..?
ಸಚಿನ್ ತೆಂಡುಲ್ಕರ್ ಇತ್ತೀಚೆಗೆ ತಾನು ವಿನೋದ್ ಕಾಂಬ್ಳಿಗೆ ಬೌಲಿಂಗ್ ಮಾಡುವ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದರು. ವಿನೋದ್ ಕಾಂಬ್ಳಿ ಜೊತೆಗೆ ನೆಟ್ಸ್ ನಲ್ಲಿ ಸಮಯ ಕಳೆಯಲು ಯಾವಾಗಲೂ ಖುಷಿ ಕೊಡುತ್ತದೆ. ಬಾಲ್ಯದಲ್ಲಿ ನಾನು ಮತ್ತು ವಿನೋದ್ ಶಿವಾಜಿ ಪಾರ್ಕ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ನೆನಪುಗಳು ಮರುಕಳಿಸಿದವು ಎಂದು ಸಚಿನ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡುತ್ತಿದ್ದಂತೆ, ಸಚಿನ್ ಟ್ವೀಟ್ ಗೆ ಕಾಮೆಂಟ್ ಮಾಡಿದ್ದ ಐಸಿಸಿ, ಸಚಿನ್ ಬೌಲ್ ಮಾಡುವ ಫೋಟೊದೊಂದಿಗೆ ಅಂಪಾಯರ್ ಸ್ಟೀವ್ ಬಕ್ನರ್ ನೋ ಬಾಲ್ ನೀಡುವ ಫೋಟೋ ಹಾಕಿ ‘ ನಿಮ್ಮ ಕಾಲನ್ನು ನೋಡಿಕೊಳ್ಳಿ’ ( ಸಚಿನ್ ಬಾಲ್ ಮಾಡುವಾಗ ಬೌಲಿಂಗ್ ಕ್ರೀಸ್ ಗಿಂತ ಮುಂದೆ ಹೋಗಿ ಬಾಲ್ ಹಾಕಿದ್ದರು.)
ಐಸಿಸಿಯ ಈ ಬೌನ್ಸರ್ ಗೆ ಸರಿಯಾಗೇ ಉತ್ತರ ನೀಡಿರುವ ಸಚಿನ್, ಕನಿಷ್ಠ ಪಕ್ಷ ಈ ಸಲ ನಾನು ಬ್ಯಾಟಿಂಗ್ ಮಾಡುತ್ತಿಲ್ಲ, ಬೌಲಿಂಗ್ ಮಾಡುತ್ತಿದ್ದೇನೆ. ಅಂಪಾಯರ್ ತೀರ್ಮಾನವೇ ಅಂತಿಮ ಎಂದು ಮರು ಟ್ವೀಟ್ ಮಾಡಿದ್ದಾರೆ. ಯಾಕೆಂದರೆ ಈ ಮೊದಲು ಸಚಿನ್ ಬ್ಯಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಅನೇಕ ಬಾರಿ ಸ್ಟೀವ್ ಬಕ್ನರ್ ನೀಡಿದ್ದ ತಪ್ಪು ತೀರ್ಪಿಗೆ ಔಟಾಗಿದ್ದರು. ಸಚಿನ್ ಈ ಟ್ವೀಟ್ ಈಗ ಸಖತ್ ವೈರಲ್ ಆಗಿದೆ.