ನವದೆಹಲಿ: ಸಚಿನ್ ಪೈಲಟ್ ರಾಹುಲ್ ಗಾಂಧಿ ಜತೆ ಚರ್ಚಿಸುತ್ತಿದ್ದಾರೆ, ಗಾಂಧಿ ಕುಟುಂಬದ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. ಅಷ್ಟೇ ಅಲ್ಲ ಸಚಿನ್ ಪೈಲಟ್ ಬಿಜೆಪಿ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಪಕ್ಷದ ಹೈಕಮಾಂಡ್ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಸರ್ಕಾರ ಅಥವಾ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಯಾರೇ ಆಗಲಿ ಶಾಮೀಲಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ರಾಜಸ್ಥಾನ್ ಶಾಸಕರು ನಿರ್ಣಯವೊಂದನ್ನು ಅಂಗೀಕರಿಸಿದ ನಂತರ ಪಕ್ಷದ ಮೂಲಗಳು ಈ ವಿಷಯ ಸ್ಪಷ್ಟಪಡಿಸಿರುವುದಾಗಿ ವರದಿ ತಿಳಿಸಿದೆ.
ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರಿಂದಾಗಿ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಆದರೆ ಪೈಲಟ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬುದನ್ನು ಅವರ ಆಪ್ತ ಮೂಲಗಳು ಅಲ್ಲಗಳೆದಿವೆ. ಅಷ್ಟೇ ಅಲ್ಲ ರಾಹುಲ್ ಗಾಂಧಿ ಜತೆಗೆ ಮಾತುಕತೆ ನಡೆಸಿರುವುದನ್ನು ಅಲ್ಲಗಳೆದಿದ್ದಾರೆ. ಇವತ್ತು ಯಾವುದೇ ಅಂತಹ ಚರ್ಚೆ ನಡೆದಿಲ್ಲ ಎಂದು ಪೈಲಟ್ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ವಿವರಿಸಿದೆ.
ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಪಕ್ಷದ ಹಿರಿಯ ಮುಖಂಡ ರಣ್ ದೀಪ್ ಸುರ್ಜೇವಾಲಾ ತಿಳಿಸಿದ್ದರು. ಪಕ್ಷದ ಮೂಲಗಳು, ಪೈಲಟ್ ಕಾಂಗ್ರೆಸ್ ಹೈಕಮಾಂಡ್ ಜತೆ ಸಂಪರ್ಕದಲ್ಲಿದ್ದಾರೆಂದು ತಿಳಿಸಿತ್ತು. ರಾಜಕೀಯ ಬೆಳವಣಿಗೆ ನಡುವೆ ಕೆಲವು ಸುಳ್ಳು ಸುದ್ದಿ ಹರಿದಾಡುತ್ತಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ರಾಹುಲ್ ಮತ್ತು ಸೋನಿಯಾ ಗಾಂಧಿ ಇನ್ನಷ್ಟೇ ಪೈಲಟ್ ಅವರನ್ನು ಭೇಟಿಯಾಗಬೇಕಾಗಿದೆ. ಪೈಲಟ್ ಈಗಾಗಲೇ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ತಮ್ಮ ಕೆಲವು ಆಪ್ತ ಶಾಸಕರ ಜತೆಗೆ ಠಿಕಾಣಿ ಹೂಡಿದ್ದರು. ಆದರೆ ಶಾಸಕರು ಸುರ್ಜೇವಾಲಾ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಪೈಲಟ್ ಬಿಜೆಪಿ ಮುಖಂಡರ ಜತೆ ಚರ್ಚೆಯಲ್ಲಿದ್ದು, ಅವರ ಆಪ್ತ ವಲಯದ ಶಾಸಕರ ಸಂಖ್ಯೆ 12ಕ್ಕೆ ಇಳಿಕೆಯಾಗಿರುವುದಾಗಿ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಈ ಮೊದಲು ಪೈಲಟ್ ಜತೆ 30 ಶಾಸಕರಿದ್ದಾರೆ ಎಂದು ಹೇಳಲಾಗಿತ್ತು.