ಜೈಪುರ:”ಇನ್ನು ಹದಿನೈದು ದಿನಗಳಲ್ಲಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ನಡೆಸಿದ್ದ ಅವ್ಯವಹಾರಗಳ ವಿರುದ್ಧ ತನಿಖೆ ನಡೆಸಲು ಕ್ರಮ ಕೈಗೊಳ್ಳಲೇ ಬೇಕು. ಇಲ್ಲದೇ ಇದ್ದಲ್ಲಿ ಮತ್ತಷ್ಟು ತೀವ್ರ ರೀತಿಯ ಹೋರಾಟ ನಿಶ್ಚಿತ’
– ಹೀಗೆಂದು ಕಾಂಗ್ರೆಸ್ ಶಾಸಕ- ಮಾಜಿ ಡಿಸಿಎಂ ಸಚಿನ್ ಪೈಲಟ್ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಸೋಮವಾರ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. ಐದು ದಿನಗಳ ಕಾಲ ನಡೆಸಿದ್ದ “ಜನ ಸಂಘರ್ಷ ಯಾತ್ರೆ’ಯನ್ನು ಮುಕ್ತಾಯಗೊಳಿಸಿ ಮಾತನಾಡಿದ ಅವರು, ತಮಗೆ ಅಧಿಕಾರ ಸಿಗಲಿ, ಇಲ್ಲದೇ ಇರಲಿ ಜನಪರ ಹೋರಾಟ ನಡೆಸಿಯೇ ಸಿದ್ಧ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಫಲಿತಾಂಶ ಪ್ರಕಟವಾಗಿ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಕಾಂಗ್ರೆಸ್ ವರಿಷ್ಠರು ಬಿಡುವಿಲ್ಲದ ಸಮಾಲೋಚನೆಯಲ್ಲಿ ಇರುವಂತೆಯೇ ಮತ್ತು ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ನಡೆಯುವ ಚುನಾವಣೆಗಾಗಿ ಭಿನ್ನಮತದಿಂದ ತತ್ತರಿಸಿರುವ ಪಕ್ಷವನ್ನು ಒಗ್ಗಟ್ಟಿನಲ್ಲಿ ಮುನ್ನಡೆಸಲು ಯತ್ನಿಸುತ್ತಿರುವಂತೆಯೇ ಸಚಿನ್ ಪೈಲಟ್‌ರ “ಸಿಡಿತ’ ಮುಂದುವರಿದಿದೆ.
ಅಜ್ಮಿàರ್‌ನಿಂದ ಶುರುವಾಗಿದ್ದ ಯಾತ್ರೆ ಜೈಪುರದಲ್ಲಿ ಮುಕ್ತಾಯದ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಗೆಹ್ಲೋಟ್ ವಸುಂಧರಾ ರಾಜೇ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಮೌನ ವಹಿಸಿರುವುದು ಸರಿಯಲ್ಲ. ಇನ್ನು 15 ದಿನಗಳಲ್ಲಿ ಅದರ ವಿರುದ್ಧ ತನಿಖೆಗೆ ಮುಂದಾಗದಿದ್ದರೆ, ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
Related Articles
ಬರ್ಖಾಸ್ತುಗೊಳಿಸಿ:
ಸರ್ಕಾರಿ ಹುದ್ದೆಗಳಿಗೆ ನೇಮಕಕ್ಕೆ ಸಂಬಂಧಿಸಿದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಕಾರಣವಾಗಿರುವ ರಾಜಸ್ಥಾನ ಲೋಕಸೇವಾ ಆಯೋಗವನ್ನು ಪೂರ್ಣ ಪ್ರಮಾಣದಲ್ಲಿ ಬರ್ಖಾಸ್ತುಗೊಳಿಸಬೇಕು ಮತ್ತು ಪುನಾರಚಿಸಬೇಕು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ತೊಂದರೆಗೆ ಒಳಗಾದವರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜನರಿಗೆ ನ್ಯಾಯ ಸಿಗುವಂತಾಗಲು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸುತ್ತೇನೆ. ಕೊನೆಯ ಉಸಿರು ಇರುವ ವರೆಗೆ ಜನರ ಪರ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ ಪೈಲಟ್.