Advertisement

ಬಿಜೆಪಿಯಿಂದ ಸಚಿನ್‌ ಪಾಂಚಾಳ್‌ ಡೆತ್‌ನೋಟ್‌ ಪ್ರತಿ ಬಿಡುಗಡೆ

11:34 PM Jan 02, 2025 | Team Udayavani |

ಬೆಂಗಳೂರು: ಬೀದರ್‌ನ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ವಜಾಕ್ಕೆ ಪಟ್ಟು ಹಿಡಿದಿರುವ ರಾಜ್ಯ ಬಿಜೆಪಿ, ಸಚಿನ್‌ ಡೆತ್‌ನೋಟ್‌ನ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶಿವಕುಮಾರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಕಳುಹಿಸಿಕೊಡಲು ನಿರ್ಧರಿಸಿದೆ.

Advertisement

ಗುರುವಾರ ಪಕ್ಷದ ಕಚೇರಿಯಲ್ಲಿ ಸಚಿನ್‌ ಡೆತ್‌ನೋಟ್‌ ಬಿಡುಗಡೆ ಮಾಡಿದ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕಾಮಗಾರಿಯ ಗುತ್ತಿಗೆ ಕೊಡಿಸುವಲ್ಲಿ, ಪ್ರಭಾವ ಬೀರುವಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆಯ ಪಾತ್ರ ಎಷ್ಟಿತ್ತು ಎಂಬುದನ್ನು ಸಚಿನ್‌ ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಡೆತ್‌ನೋಟ್‌ನಲ್ಲಿ ನನ್ನ ಹೆಸರಿದೆಯೇ? ಪ್ರಕರಣದಲ್ಲಿ ನನ್ನ ಪಾತ್ರ ಇದೆಯೇ ಎನ್ನುತ್ತಿದ್ದೀರಲ್ಲಾ, ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು? ಎಂದು ಪ್ರಶ್ನಿಸಿದ್ದಾರೆ.

ತಪ್ಪಿತಸ್ಥರನ್ನು ರಕ್ಷಣೆ
ಡೆತ್‌ ನೋಟ್‌ನಲ್ಲಿ ಎಲ್ಲ ವಿವರ ಇದೆ. ಇದಕ್ಕೆ ಸರಕಾರ ಉತ್ತರಿಸಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡದಿರಿ ಎಂದು ಎಚ್ಚರಿಸಿದರು. ಒಬ್ಬರು ಜೀವತ್ಯಾಗ ಮಾಡಿದ್ದು, ಅವರಿಗೆ ಬೆದರಿಕೆ ಹಾಕಿರುವಾಗ ಅವರಿಗೆ ನ್ಯಾಯ ಬೇಕೇ ಬೇಡವೇ? ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲಿ. ಸಿದ್ದರಾಮಯ್ಯ ಸರಕಾರ ತಪ್ಪು ಮಾಡಿದವರನ್ನು ರಕ್ಷಿಸುತ್ತಿದೆ ಎಂದು ಛಲವಾದಿ ಆರೋಪಿಸಿದರು.

ಪ್ರಿಯಾಂಕ್‌ ಪರ ಯಾರೂ ಮಾತನಾಡುತ್ತಿಲ್ಲ
ಪ್ರಿಯಾಂಕ್‌ ಖರ್ಗೆ ಪರವಾಗಿ ಮಾತನಾಡುತ್ತಿರುವುದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮತ್ತು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಮಾತ್ರ. ಸಿದ್ದರಾಮಯ್ಯ ಮಾತನಾಡದೇ ಇದ್ದರೆ ಅವರ ಸ್ಥಾನ ಇರುತ್ತದೆಯೇ? ಉಪ ಮುಖ್ಯಮಂತ್ರಿಗಳು ಮುಂದೆ ಆ ಸ್ಥಾನಕ್ಕೆ ಬರಬೇಕಿದ್ದು ಯಾರನ್ನು ಓಲೈಸಬೇಕೋ ಅದನ್ನು ಮಾಡುತ್ತಿದ್ದಾರೆ. ಗೃಹ ಸಚಿವರಿಗೆ ಇದು ಇಲಾಖೆ ವಿಷಯ. ದಿಲ್ಲಿಯಿಂದ ಒತ್ತಡ ಇರುವುದರಿಂದ ಇವರಷ್ಟೇ ಮಾತನಾಡುತ್ತಿದ್ದಾರೆ. ಆದರೆ ಸಚಿನ್‌ ಡೆತ್‌ನೋಟ್‌ ಸತ್ಯದ ಕೈಗನ್ನಡಿಯ ಹಾಗಿದೆ. ಹಾಗಾಗಿಯೇ ಇತರ ಸಚಿವರು ಮಾತನಾಡುತ್ತಿಲ್ಲ ಎಂದು ಹೇಳಿದರು.

3 ಬಾರಿ ಗೆದ್ದವರು ಬೇರೆ ಯಾರೂ ಇಲ್ಲವೇ?
ನಾನು ಬಿಜೆಪಿಯ ಸೈದ್ಧಾಂತಿಕ ವಿರೋಧಿ, ದಲಿತ, 3 ಬಾರಿ ಗೆದ್ದಿದ್ದೇನೆ ಎಂದೆಲ್ಲಾ ಹೇಳಿಕೊಳ್ಳುವ ಪ್ರಿಯಾಂಕ್‌ ಖರ್ಗೆ ಅವರೇ, ಕಾಂಗ್ರೆಸ್‌ ನಲ್ಲಿ ನಿಮ್ಮಂತೆ 3 ಬಾರಿ ಗೆದ್ದವರು ಬೇರೆ ಯಾರೂ ಇಲ್ಲವೇ? 3 ಸಾರಿ ಗೆದ್ದು ನರೇಂದ್ರಸ್ವಾಮಿ ಯಾಕೆ ಮಂತ್ರಿಯಾಗಿಲ್ಲ? ಎಸ್‌.ಎನ್‌. ನಾರಾಯಣ ಸ್ವಾಮಿ 3 ಸಾರಿ ಗೆದ್ದಿದ್ದಾರೆ. ಯಾಕೆ ಅವರು ಮಂತ್ರಿಯಾಗಿಲ್ಲ? 3 ಸಾರಿ ಗೆದ್ದು ಪ್ರಸಾದ್‌ ಅಬ್ಬಯ್ಯ ಯಾಕೆ ಮಂತ್ರಿಯಾಗಿಲ್ಲ? ಅಜಯ್‌ ಧರಂ ಸಿಂಗ್‌ 3 ಸಾರಿ ಗೆದ್ದರೂ ಯಾಕೆ ಮಂತ್ರಿಯಾಗಿಲ್ಲ? ನೀವು ಮಾತ್ರ ಯಾಕಾಗಿದ್ದೀರಿ? ಯಾವ್ಯಾವ ಊರಲ್ಲಿ ಎಷ್ಟೆಷ್ಟು ಹೋರಾಟ ಮಾಡಿದ್ದೀರಿ? ಇವರೆಲ್ಲರ ಸಮಾಧಿ ಕಟ್ಟಿ ನೀವು ಆಗಿರುವುದಲ್ಲವೇ ಎಂದು ಪ್ರಶ್ನಿಸಿದರು.

Advertisement

ಆತ್ಮಹತ್ಯೆಗೂ ಮುನ್ನ 2 ಗಂಟೆ
ಹೊಟೇಲ್‌ನಲ್ಲಿದ್ದ ಸಚಿನ್‌
ಬೀದರ್‌: ಟೆಂಡರ್‌ ವಂಚನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಡಿದ್ದು, ಆತ್ಮಹತ್ಯೆಗೂ 2 ದಿನ ಮುಂಚೆ ಸಚಿನ್‌ ಹೊಟೇಲ್‌ನಲ್ಲಿ 2 ಗಂಟೆಗೂ ಹೆಚ್ಚು ಕಾಲ ಕಳೆದಿರುವುದು ಗೊತ್ತಾಗಿದೆ.

ಡಿ. 24ರಂದು ಸಂಜೆ 6.27ಕ್ಕೆ ನಗರದ ರಾಯಲ್‌ ಹೆರಿಟೇಜ್‌ ಹೊಟೇಲ್‌ಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಆಗಮಿಸಿದ್ದ ಸಚಿನ್‌, ವೇಟರ್‌ ಮೋಹನ್‌ ಅವರಿಂದ ಮೊಬೈಲ್‌ ಪಡೆದು ತನ್ನ ಸಹೋದರಿಗೆ ಕರೆ ಮಾಡಿದ್ದು, ಇದು ಕುಟುಂಬಸ್ಥರಿಗೆ ಆತ ಮಾಡಿದ ಕೊನೆಯ ಕರೆಯಾಗಿತ್ತು. ಸಹೋದರಿಯಿಂದ ಅದೇ ನಂಬರ್‌ಗೆ 1,500 ರೂ. ಆನ್‌ಲೈನ್‌ ಮೂಲಕ ಹಣ ಹಾಕಿಸಿಕೊಂಡಿದ್ದರು. ಅದರಲ್ಲಿ 650 ರೂ. ಬಾರ್‌ ಬಿಲ್‌ ಪಾವತಿಸಿ, ಉಳಿದ ಹಣವನ್ನು ಮೋಹನ್‌ನಿಂದ ಪಡೆದಿದ್ದರು. ಮರಳಿ ಹೋಗುವಾಗ ತನಗೆ ಯಾರದೇ ಕರೆ ಬಂದರೂ ಸ್ವೀಕರಿಸದಂತೆ ಮೋಹನ್‌ಗೆ ಹೇಳಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಮರುದಿನ ಡಿ. 25ರಂದು ಸಚಿನ್‌ ಡೆತ್‌ನೋಟ್‌ ಬರೆದಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದರು. 26ರಂದು ರೈಲು ಹಳಿಗೆ ತಲೆ ಕೊಟ್ಟು ಸಚಿನ್‌ ಆತ್ಮಹತ್ಯೆ ಮಾಡಿಕೊಂಡಿದ್ದರು.

ದಾಖಲೆ ನೀಡಲು ಬಿಜೆಪಿಗೆ ಸಾಧ್ಯವಾಗಿಲ್ಲ: ಪ್ರಿಯಾಂಕ್‌
ಬೆಂಗಳೂರು: ಸಚಿನ್‌ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವಾರ ಕಳೆದರೂ ನನ್ನ ವಿರುದ್ಧ ಯಾವುದೇ ದಾಖಲೆ ನೀಡಲು ಬಿಜೆಪಿಗೆ ಸಾಧ್ಯ ವಾಗಿಲ್ಲ. ಈ ವಿಚಾರದಲ್ಲಿ ವಿಪಕ್ಷ ನಾಯಕರಿಗೆ ಅವಮಾನ ಆಗುವುದು ನಿಶ್ಚಿತ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆ ದಾರ ಸಂತೋಷ್‌ ಪಾಟೀಲ ಅವರ ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೆಸರಿತ್ತು. ಆದರೆ ಸಚಿನ್‌ ಅವರ ಡೆತ್‌ನೋಟ್‌ನಲ್ಲಿ ನನ್ನ ಹೆಸರಿನ ಪ್ರಸ್ತಾವವೇ ಆಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next