ಮುಂಬೈ: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುತ್ತಿದೆ. ಸತತ ಪಂದ್ಯಗಳನ್ನು ಗೆಲ್ಲುತ್ತಿರುವ ಟೀಂ ಇಂಡಿಯಾ ಸೆಮಿ ಹಂತಕ್ಕೆ ಈಗಾಗಲೇ ಪ್ರವೇಶ ಪಡೆದಿದೆ. ನೇಪಾಳ ವಿರುದ್ದದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಶತಕ ಸಿಡಿಸಿದ ಸಚಿನ್ ದಾಸ್ ಈಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.
ಜರ್ಸಿ ಸಂಖ್ಯೆ 10 ಅನ್ನು ಧರಿಸಿರುವ ಸಚಿನ್ ದಾಸ್ ಹೆಸರು ಮತ್ತು ಜರ್ಸಿ ಸಂಖ್ಯೆ ಮಾತ್ರವಲ್ಲದೆ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ನೆನಪಿಸುವ ಪ್ರದರ್ಶನವನ್ನು ನೀಡಿದ್ದಾರೆ. ಸಚಿನ್ ದಾಸ್ ಮಹಾರಾಷ್ಟ್ರದ ಬೀಡ್ ಜಿಲ್ಲೆಯವರು. ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ವಿಶೇಷ ಕನೆಕ್ಷನ್ ಹಂಚಿಕೊಂಡಿದ್ದಾರೆ. ಅವರ ತಂದೆ ಸಂಜಯ್ ದಾಸ್ ಅವರು ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿಯಾದ ಪುತ್ರನಿಗೆ ಕ್ರಿಕೆಟಿಗನ ಹೆಸರು ಇರಿಸಿದ್ದಾರೆ.
ಮಹಾರಾಷ್ಟ್ರದ ಬೀಡ್ ನಲ್ಲಿ ಜನಿಸಿದ ಸಚಿನ್ ದಾಸ್ ಕ್ರೀಡೆಯಲ್ಲಿ ಆಳವಾಗಿ ಬೇರೂರಿರುವ ಕುಟುಂಬದಿಂದ ಬಂದವರು. ಅವರ ತಂದೆ ಸಂಜಯ್ ದಾಸ್ ಅವರು ಕಬ್ಬಡ್ಡಿ ಆಟಗಾರನಾಗಿದ್ದರು. ಸಚಿನ್ ದಾಸ್ 2023ರ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಕೊಲ್ಲಾಪುರ ಟಸ್ಕರ್ಸ್ ಪರ ಆಡಿದ್ದರು.
ಸಚಿನ್ ದಾಸ್ ಅವರ ಕ್ರಿಕೆಟ್ ಪಯಣ ಹದಿನಾಲ್ಕನೇ ವಯಸ್ಸಿನಲ್ಲಿ ಪ್ರಾರಂಭವಾಯಿತು, ರಾಜ್ಯ ಮಟ್ಟದಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದರು. ಅವರ ಸ್ಥಿರ ಪ್ರದರ್ಶನವು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಅವರ ಆಯ್ಕೆಗೆ ಕಾರಣವಾಯಿತು. ಅವರು ಈಗ U19 ವಿಶ್ವಕಪ್ ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
U19 ವಿಶ್ವಕಪ್‌ನಲ್ಲಿ ಮಿಂಚಿದ ಪ್ರದರ್ಶನ ಮತ್ತು ನೇಪಾಳ ವಿರುದ್ಧ ಶತಕದೊಂದಿಗೆ, ಸಚಿನ್ ದಾಸ್ ತಮ್ಮ ಕ್ರಿಕೆಟ್ ಕೌಶಲ್ಯಕ್ಕಾಗಿ ಮಾತ್ರವಲ್ಲದೆ ಸಚಿನ್ ತೆಂಡೂಲ್ಕರ್ ಅವರೊಂದಿಗಿನ ಸಂಪರ್ಕಕ್ಕಾಗಿಯೂ ಗಮನ ಸೆಳೆಯುತ್ತಿದ್ದಾರೆ.