ಆತ ಅಥ್ಲೆಟ್‌ನಲ್ಲಿ “ಚಾಂಪಿಯನ್’ ಆಗುವ ಕನಸು ಕಟ್ಟಿಕೊಂಡಿರುವ ಹುಡುಗ. ಅದಕ್ಕಾಗಿ ಹಗಲಿರುಳು ಕಠಿಣ ತರಬೇತಿ ಪಡೆದುಕೊಳ್ಳುತ್ತಿರುವ, ಆತನ ಕನಸಿಗೆ ಹೆತ್ತವರು, ಸ್ನೇಹಿತರು, ಕೋಚ್ ಹೀಗೆ ಎಲ್ಲರೂ ಸಾಥ್ ನೀಡುತ್ತಿರುತ್ತಾರೆ. ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿರುವ, ನೋಡಲು ಫಿಟ್ ಆ್ಯಂಡ್ ಫೈನ್ ಆಗಿ ಕಾಣುವ ಈ ಹುಡುಗನಿಗೊಂದು ಅಪರೂಪದ ಖಾಯಿಲೆ. ತನ್ನ ದೇಹದಲ್ಲಿ ಏನಾದರೂ ಚಿಕ್ಕ ಗಾಯವಾದರೂ ಸಾಕು, ಅದರಿಂದ ರಕ್ತ ಸ್ರವಿಸಿ ಆತ ಸಾಯುವ ಸ್ಥಿತಿಗೆ ತಲುಪುತ್ತಾನೆ. ಇಂಥದ್ದೊಂದು ಮಾರಣಾಂತಿಕ ವಿಷಯ ಗೊತ್ತಿದ್ದರೂ, ಆತ ರಿಸ್ಕ್ ತೆಗೆದುಕೊಂಡು ಮುನ್ನಡೆಯುತ್ತಿರುತ್ತಾನೆ. ಇದೇ ವೇಳೆ ಎದುರಾಗುವ ಕೆಲವು ಅನಿರೀಕ್ಷಿತ ತಿರುವುಗಳು ಈ ಹುಡುಗನಿಗೆ ಹೆಜ್ಜೆ ಹೆಜ್ಜೆ ಎದುರಾಳಿಗಳು ಹುಟ್ಟಿಕೊಳ್ಳುವಂತೆ ಮಾಡುತ್ತದೆ. ಅಂತಿಮವಾಗಿ ಈ ಎಲ್ಲ ಎದುರಾಳಿಗಳನ್ನು ಎದುರಿಸಿ ಹುಡುಗ “ಚಾಂಪಿಯನ್’ ಆಗುತ್ತಾನಾ? ಇಲ್ಲವಾ? ಎನ್ನುವುದು ಕ್ಲೈಮ್ಯಾಕ್ಸ್ ವೇಳೆಗೆ ಗೊತ್ತಾಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಚಾಂಪಿಯನ್’ ಸಿನಿಮಾದ ಕಥಾಹಂದರ.
ಒಂದು ಕ್ರೀಡಾ ಹಿನ್ನೆಲೆಯ ಕಥೆಯನ್ನು ಇಟ್ಟುಕೊಂಡು, ಅದರ ಜೊತೆಗೆ ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ ಹೀಗೆ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ಚಾಂಪಿಯನ್’. ಒಂದು ಸರಳವಾದ ಕಥೆಯನ್ನು ಇಟ್ಟುಕೊಂಡು ಎಲ್ಲೂ ಬೋರ್ ಆಗದಂತೆ, ತೆರೆಮೇಲೆ ಹೇಳುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.
ಇನ್ನು ನವನಟ ಸಚಿನ್ ಧನ್ಪಾಲ್ ಮೊದಲ ಸಿನಿಮಾದಲ್ಲೇ ನಾಯಕ ನಟನಾಗಿ ತನ್ನ ಮ್ಯಾನರಿಸಂ ಮೂಲಕ ತೆರೆಮೇಲೆ ಗಮನ ಸೆಳೆಯುತ್ತಾರೆ. ಆ್ಯಕ್ಷನ್, ಡ್ಯಾನ್ಸ್ ಎಲ್ಲದರಲ್ಲೂ ಸಚಿನ್ ತೆರೆಹಿಂದೆ ಹಾಕಿರುವ ಪರಿಶ್ರಮ ತೆರೆಮೇಲೆ ಕಾಣುತ್ತದೆ. ಪಾತ್ರ ಪೋಷಣೆ ಕಡೆಗೆ ಇನ್ನಷ್ಟು ಗಮನ ನೀಡಿದರೆ, ಸಚಿನ್ ಚಿತ್ರರಂಗದಲ್ಲಿ ಭವಿಷ್ಯದ ಭರವಸೆಯ ನಟನಾಗುವ ಭರವಸೆ ಮೂಡಿಸುತ್ತಾರೆ. ನಾಯಕಿ ಅದಿತಿ ಪ್ರಭುದೇವ ಕಾಲೇಜ್ ಹುಡುಗಿಯಾಗಿ ತುಂಬ ಲೈವ್ಲಿಯಾಗಿ ತೆರೆ ಮೇಲೆ ಕಾಣುತ್ತಾರೆ. ಖಳನಟರಾಗಿ ಪ್ರದೀಪ್ ರಾವತ್, ಆದಿ ಲೋಕೇಶ್, ಕೋಚ್ ಆಗಿ ದೇವರಾಜ್ ಅವರದ್ದು ಪಾತ್ರಕ್ಕೆ ತಕ್ಕನಾದ ಪರಿಪೂರ್ಣ ಅಭಿನಯ. ಇನ್ನಿತರ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.
ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ, ಕಲರಿಂಗ್, ಸುಂದರ ಲೊಕೇಶನ್ಸ್, ಬೃಹತ್ ಸೆಟ್‌ಗಳು “ಚಾಂಪಿಯನ್’ ಸಿನಿಮಾವನ್ನು ತೆರೆಮೇಲೆ ಕಲರ್‌ಫುಲ್ ಆಗಿ ಕಾಣುವಂತೆ ಮಾಡುತ್ತದೆ. ಸಿನಿಮಾದ ಎರಡು ಹಾಡುಗಳು ಪ್ರೇಕ್ಷಕರು ಗುನುಗುವಂತಿದೆ. ಅತಿಯಾದ ನಿರೀಕ್ಷೆಯಿಲ್ಲದೆ ವಾರಾಂತ್ಯದಲ್ಲಿ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾ ಬಯಸುವವರು ಒಮ್ಮೆ “ಚಾಂಪಿಯನ್’ ನೋಡಿ ಬರಬಹುದು.
ಜಿ.ಎಸ್.ಕಾರ್ತಿಕ ಸುಧನ್