Advertisement

ಮಹಿಳಾ ಮತದಾರರ ಆಕರ್ಷಣೆಗೆ “ಸಖೀ’ಮತಗಟ್ಟೆ

01:00 AM Mar 14, 2019 | Harsha Rao |

ಉಡುಪಿ: ವಿಶೇಷವಾಗಿ ಮಹಿಳಾ ಮತದಾರರು ಹೆಚ್ಚು ಹೆಚ್ಚು ಆಸಕ್ತಿಯಿಂದ ಮತದಾನ ಮಾಡಲು ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಹೋದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಮತಗಟ್ಟೆಗಳಿಗೆ ಪಿಂಕ್‌ ಮತಗಟ್ಟೆ ಎಂದು ಹೆಸರಿಡಲಾಗಿತ್ತು. ಈ ಬಾರಿ ಇದಕ್ಕೆ ಹೆಸರು “ಸಖೀ ಮತಗಟ್ಟೆ’ ಎಂದು ಹೆಸರಿಡಲಾಗುತ್ತಿದೆ. 

Advertisement

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡೆರಡು ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಮ್ಮಾಡಿ ಸರಕಾರಿ ಮಾ.ಹಿ.ಪ್ರಾ. ಶಾಲೆಯ ಎರಡು ಮತಗಟ್ಟೆಗಳು, ಕುಂದಾಪುರ ಕ್ಷೇತ್ರದ ಕುಂಭಾಸಿ ಸ.ಮಾ.ಹಿ.ಪ್ರಾ. ಶಾಲೆಯ ಎರಡು ಮತಗಟ್ಟೆಗಳು, ಉಡುಪಿ ಕ್ಷೇತ್ರದ ಬ್ರಹ್ಮಾವರ ನಿರ್ಮಲಾ ಪ್ರೌಢಶಾಲೆಯ ಎರಡು ಮತಗಟ್ಟೆಗಳು, ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಸೈಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಹಿ.ಪ್ರಾ. ಶಾಲೆಯ ಎರಡು ಮತಗಟ್ಟೆಗಳು, ಕಾರ್ಕಳ ವಿಧಾನಸಭಾ ಕ್ಷೇತ್ರದ ಎರ್ಲಪಾಡಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮತಗಟ್ಟೆಯಲ್ಲಿ ತಲಾ ಒಂದು ಮತಗಟ್ಟೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. 

ನಿರ್ದಿಷ್ಟ ಬಣ್ಣ 
ಮಹಿಳಾ ಮತದಾರರು ಹೆಚ್ಚಿರುವ ಸಖೀ ಮತಗಟ್ಟೆಗಳಲ್ಲಿ ಮಹಿಳಾ ಸಿಬಂದಿ ನಿಯೋಜಿಸಲಾಗುತ್ತದೆ. ಅವರು ನಿರ್ದಿಷ್ಟ ಬಣ್ಣದ ಬಟ್ಟೆಗಳನ್ನೇ ತೊಟ್ಟು ಬರಲಿದ್ದಾರೆ.  ಹೋದ ಚುನಾವಣೆಯಲ್ಲಿ ಪಿಂಕ್‌ ಬಣ್ಣಕ್ಕೆ ಆದ್ಯತೆ ಕೊಡಲಾಗಿತ್ತು. ಈ ಬಾರಿ ಬಣ್ಣದ ಬಗ್ಗೆ ಇನ್ನೂ ತೀರ್ಮಾನವಾಗಬೇಕಿದೆ. ಸಾಧ್ಯವಾದರೆ ಮಹಿಳಾ ಪೊಲೀಸರನ್ನೇ ನಿಯೋಜಿಸುವ ಸಾಧ್ಯತೆ ಇದೆ. ಒಂದು ವೇಳೆ ಅರೆ ಸೇನಾ ಪಡೆಯ ಸಿಬಂದಿ ಬಂದಲ್ಲಿ ಬಟ್ಟೆಯ ನಿರ್ದಿಷ್ಟ ಬಣ್ಣ ನಿರೀಕ್ಷಿಸುವುದು ತುಸು ಕಷ್ಟ. ಈ ಮತಗಟ್ಟೆಗಳನ್ನು ಬಣ್ಣದಿಂದ ಸಿಂಗರಿಸಲಾಗುತ್ತದೆ. ಒಂದು ವಿಶೇಷ ಸ್ವಾಗತ ಕಮಾನು ಇರಲಿದೆ. ರ್‍ಯಾಂಪ್‌ ಇರುವಲ್ಲಿ ಬಣ್ಣದ ಮ್ಯಾಟ್‌ ಬರಲಿದೆ. ಗೋಡೆಗೂ ನಿರ್ದಿಷ್ಟ ಬಣ್ಣ ಕೊಡುವ ಪ್ರಯತ್ನ ಮಾಡಲಾಗುತ್ತದೆ. 

ಸೆಲ್ಫಿ ಕಾರ್ನರ್‌
ಮಹಿಳಾ ಮತಗಟ್ಟೆಯಲ್ಲಿ ಹಿಂದಿನ ಬಾರಿ ಚುನಾವಣೆಯಲ್ಲಿ ಮಾಡಿದಂತೆ ಸೆಲ್ಫಿ ಕಾರ್ನರ್‌ ಕೂಡ ಇರಲಿದೆ. ಇಲ್ಲಿ ನಿಂತು ಸೆಲ್ಫಿಪ್ರಿಯರು ಚಿತ್ರ ತೆಗೆಸಿಕೊಳ್ಳಬಹುದು. ಕುಡಿಯುವ ನೀರು, ಪ್ರಥಮ ಚಿಕಿತ್ಸೆ  ಪೆಟ್ಟಿಗೆ ಇದ್ದು ಆಶಾ ಕಾರ್ಯಕರ್ತೆಯರು ಇದನ್ನು ನಿರ್ವಹಿಸಲಿದ್ದಾರೆ. 

ಸೌಡದಲ್ಲಿ ಗಿರಿಜನ ಮತಗಟ್ಟೆ
ಕುಂದಾಪುರ ತಾಲೂಕಿನ ಸೌಡ ಸ.ಹಿ.ಪ್ರಾ. ಶಾಲೆಯ ಮತಗಟ್ಟೆಯನ್ನು ಗಿರಿಜನ ಮತಗಟ್ಟೆ (ಟ್ರೈಬಲ್‌ ಎತ್ನಿಕ್‌ ಪೋಲಿಂಗ್‌ ಸ್ಟೇಶನ್‌) ಎಂದು ಗುರುತಿಸಲಾಗಿದೆ. ಇಲ್ಲಿ ಕೊರಗ ಸಮುದಾಯದ ಮತದಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೋದ ಚುನಾವಣೆಯಲ್ಲಿ ಕುಂದಾಪುರದ ರಾಗಿಹಕ್ಲು, ಹೆಬ್ರಿ ಬಡಾಗುಡ್ಡೆ ಮತಗಟ್ಟೆಗಳನ್ನು ಆಯ್ದುಕೊಳ್ಳಲಾಗಿತ್ತು. ಈ ಬಾರಿ ಸೌಡವನ್ನು ಆಯ್ದುಕೊಳ್ಳಲಾಗಿದೆ. ಮತದಾರರನ್ನು ಆಕರ್ಷಿಸಲು ಗಿರಿಜನರ ಸಂಪ್ರದಾಯದಂತೆ ಡೋಲು, ಬುಟ್ಟಿ ಇತ್ಯಾದಿಗಳಿಂದ ಈ ಮತಗಟ್ಟೆಯನ್ನು ಸಿಂಗರಿಸಲಾಗುತ್ತದೆ.  

Advertisement

ಕೋಡಿಕನ್ಯಾನ: ಅಂಗವಿಕಲ ಮತಗಟ್ಟೆ
ಅಂಗವಿಕಲ ಮತದಾರರನ್ನು ಆಕರ್ಷಿಸಲು ಒಂದು ವಿಶೇಷ ಮತಗಟ್ಟೆಯನ್ನು ಸ್ಥಾಪಿಸಲಾಗುತ್ತಿದೆ. ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಹತ್ತಿಪ್ಪತ್ತು ಅಂಗವಿಕಲ ಮತದಾರರಿದ್ದರೂ ಸ್ವಲ್ಪ ಹೆಚ್ಚಿಗೆ ಇರುವ ಮತಗಟ್ಟೆಯನ್ನು ಆಯ್ದುಕೊಳ್ಳಲಾಗುತ್ತದೆ. ಈ ಬಾರಿ ಸಾಸ್ತಾನದ ಕೋಡಿಕನ್ಯಾನ ಸ.ಹಿ.ಪ್ರಾ. ಶಾಲೆಯ (ಪೂರ್ವ) ಮತಗಟ್ಟೆಯನ್ನು ಅಂಗವಿಕಲರ ಮತಗಟ್ಟೆ ಎಂದು ಗುರುತಿಸಲಾಗುತ್ತಿದೆ. ಈ ಮತಗಟ್ಟೆಗೆ ಸಂಪೂರ್ಣ ಅಂಗವಿಕಲ ಸಿಬಂದಿಯನ್ನೇ ನಿಯೋಜಿಸುವುದು ತುಸು ಕಷ್ಟ. ಸುಗಮ ಕಾರ್ಯನಿರ್ವಹಣೆಯಾಗಬೇಕು ಎಂಬ ಉದ್ದೇಶದಿಂದ ಸ್ವಲ್ಪ ಅಂಗವೈಕಲ್ಯ ಇರುವವರನ್ನು ಆಯ್ದು ಇಲ್ಲಿಗೆ ನಿಯೋಜಿಸಲಾಗುತ್ತದೆ. ಇಲ್ಲಿ ವೀಲ್‌ ಚೆಯರ್‌, ವಾಕಿಂಗ್‌ ಸ್ಟಿಕ್‌, ಸ್ಟ್ರೆಚರ್‌, ವಾಕರ್‌ ಇತ್ಯಾದಿಗಳನ್ನು ಒದಗಿಸಲಾಗುತ್ತದೆ. ಇಂತಹ ಸೌಲಭ್ಯಗಳನ್ನು ಇತರ ಮತಗಟ್ಟೆಗಳಲ್ಲಿಯೂ ಅಳವಡಿಸಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next